

ಸೆಂಚುರಿಯನ್: ದಕ್ಷಿಣ ಆಫ್ರಿಕಾದಲ್ಲಿ ಶನಿವಾರ ನಡೆದ ವಿನೂತನ ಮಾದರಿಯ 3ಟಿ ಕ್ರಿಕೆಟ್ ಪಂದ್ಯದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸಾರಥ್ಯದ ಈಗಲ್ಸ್ ತಂಡ ಗೆಲುವು ದಾಖಲಿಸಿ ಸ್ವರ್ಣ ಜಯಿಸಿದೆ. ಟೆಂಬಾ ಬವುಮಾ ನೇತೃತ್ವದ ಕೈಟ್ಸ್ ತಂಡ 2ನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರೆ, ರೀಜಾ ಹೆಂಡ್ರಿಕ್ಸ್ ನಾಯಕತ್ವದ ಕಿಂಗ್‌ಫಿಷರ್ಸ್ ತಂಡ 3ನೇ ಸ್ಥಾನದೊಂದಿಗೆ ಕಂಚಿಗೆ ತೃಪ್ತಿಪಟ್ಟಿತು.
ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಕರೊನಾ ಹಾವಳಿಯ ನಡುವೆ ಖಾಲಿ ಕ್ರೀಡಾಂಗಣದಲ್ಲಿ ನಡೆದ ಸಾಲಿಡಾರಿಟಿ ಕಪ್ ಪಂದ್ಯದಲ್ಲಿ ತಲಾ 8 ಆಟಗಾರರನ್ನು ಒಳಗೊಂಡ 3 ತಂಡಗಳು ಆಡಿದವು. ತಂಡಗಳು ಮೊದಲ ಇನಿಂಗ್ಸ್‌ನಲ್ಲಿ ತಲಾ 6 ಓವರ್ ಬ್ಯಾಟಿಂಗ್ ಮಾಡಿದವು. ಕಿಂಗಲ್ಸ್ ಫಿಷರ್ಸ್ ತಂಡ ಮೊದಲು ಆಡಿ 2 ವಿಕೆಟ್‌ಗೆ 56 ರನ್ ಗಳಿಸಿದರೆ, ಈಗಲ್ಸ್ ತಂಡ 1 ವಿಕೆಟ್‌ಗೆ 66 ರನ್ ಗಳಿಸಿತು. ಕೈಟ್ಸ್ ತಂಡ 1 ವಿಕೆಟ್‌ಗೆ 58 ರನ್ ಗಳಿಸಿತು.
ದ್ವಿತೀಯಾರ್ಧದಲ್ಲಿ ಈಗಲ್ಸ್ ತಂಡ ಮೊದಲಿಗೆ ಆಡಿ ಒಟ್ಟಾರೆ 12 ಓವರ್‌ಗಳಲ್ಲಿ 4 ವಿಕೆಟ್‌ಗೆ 160 ರನ್ ಪೇರಿಸಿತು. ನಂತರ ಕೈಟ್ಸ್ ತಂಡ ಆಡಿ 3 ವಿಕೆಟ್‌ಗೆ 138 ರನ್ ಗಳಿಸಿದರೆ, ಕೊನೆಯಲ್ಲಿ ಕಿಂಗ್‌ಫಿಷರ್ಸ್ ತಂಡ ಕಣಕ್ಕಿಳಿದು ಒಟ್ಟಾರೆ 5 ವಿಕೆಟ್‌ಗೆ 113 ರನ್ ಸೇರಿಸಲಷ್ಟೇ ಶಕ್ತವಾಯಿತು. ಈಗಲ್ಸ್ ತಂಡದ ಏಡನ್ ಮಾರ್ಕ್ರಮ್ ಪಂದ್ಯದಲ್ಲಿ ಗರಿಷ್ಠ 70 ರನ್ ಬಾರಿಸಿದರು. ನಾಯಕ ಎಬಿ ಡಿವಿಲಿಯರ್ಸ್ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಟಿವಿಯಲ್ಲಿ ಪಂದ್ಯ ವೀಕ್ಷಿಸಿದ ಕ್ರಿಕೆಟ್ ಪ್ರೇಮಿಗಳು ಪಂದ್ಯದ ಹೊಸ ಹೊಸ ನಿಯಮಗಳು ಅರ್ಥವಾಗದೆ ತಲೆಕೆಡಿಸಿಕೊಂಡರು. ಕೆಲವರು ಈ ಬಗ್ಗೆ ಟ್ರೋಲ್ ಕೂಡ ಮಾಡಿದರು.
ಸಂಕ್ಷಿಪ್ತ ಸ್ಕೋರ್:
ಕಿಂಗ್‌ಫಿಷರ್ಸ್: 12 ಓವರ್‌ಗಳಲ್ಲಿ 5 ವಿಕೆಟ್‌ಗೆ 113
(ಮಲನ್ 31, ಪೆಹ್ಲುಕ್‌ವಾಯೊ (24ಕ್ಕೆ 2).
ಈಗಲ್ಸ್: 12 ಓವರ್‌ಗಳಲ್ಲಿ 4 ವಿಕೆಟ್‌ಗೆ 160
(ಮಾರ್ಕ್ರಮ್ 70, ಸಿಪಮ್ಲ 45ಕ್ಕೆ 2).
ಕೈಟ್ಸ್: 12 ಓವರ್‌ಗಳಲ್ಲಿ 3 ವಿಕೆಟ್‌ಗೆ 138
(ಪ್ರಿಟೋರಿಯಸ್ 50*, ಸ್ಟರರ್ಮನ್ 26ಕ್ಕೆ 2)