

ಬೆಂಗಳೂರು: ಕರ್ನಾಟಕದ ಈಜುಪಟುಗಳು ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶುಕ್ರವಾರ ಮತ್ತೆ 4 ಚಿನ್ನದ ಪದಕ ಬೇಟೆಯಾಡಿದ್ದಾರೆ. ಜತೆಗೆ 1 ಬೆಳ್ಳಿ, 4 ಕಂಚು ಗೆಲುವಿನೊಂದಿಗೆ ಕೂಟದ 6ನೇ ದಿನದ ಕ್ರೀಡಾಸ್ಪರ್ಧೆಯಲ್ಲಿ ಒಟ್ಟು 9 ಪದಕಗಳನ್ನು ಬಾಚಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕ ಒಟ್ಟು 25 ಚಿನ್ನ, 17 ಬೆಳ್ಳಿ, 21 ಕಂಚಿನ ಸಹಿತ ಒಟ್ಟು 63 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.
ರಾಜ್ಯದ ಈಜುಪಟು ಮಾನವಿ ವರ್ಮ ಮಹಿಳೆಯರ 200 ಮೀ. ಮೆಡ್ಲೆ ವಿಭಾಗದಲ್ಲಿ 2 ನಿಮಿಷ, 24.21 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ನೂತನ ಕೂಟದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಸ್ಪರ್ಧೆಯಲ್ಲಿ ರಾಜ್ಯದ ಹಷಿಕಾ ರಾಮಚಂದ್ರ ಕಂಚಿಗೆ ತೃಪ್ತಿಪಟ್ಟರು.
50 ಮೀ. ಬ್ಯಾಕ್ಸ್ಟ್ರೊಕ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್ (25.77 ಸೆ.) ಮತ್ತು ಮಹಿಳೆಯರಲ್ಲಿ ರಿಧಿಮಾ ವೀರೇಂದ್ರ ಕುಮಾರ್ (30.21ಸೆ.) ಚಿನ್ನದ ಪದಕ ಗೆದ್ದುಕೊಂಡರು. ಮಿಶ್ರ 4/100 ಮೀ. ಫ್ರೀಸ್ಟೆ$ಲ್ ರಿಲೇ ಸ್ಪರ್ಧೆಯಲ್ಲಿ ರಾಜ್ಯಕ್ಕೆ 4ನೇ ಚಿನ್ನ ಒಲಿಯಿತು. ಅನೀಶ್ ಎಸ್. ಗೌಡ, ಶ್ರೀಹರಿ ನಟರಾಜ್, ಧಿನಿಧಿ ದೇಸಿಂಘು ಮತ್ತು ನೀನಾ ವೆಂಕಟೇಶ್ (3ನಿ, 38.24ಸೆ) ಒಳಗೊಂಡ ತಂಡ ಈ ಸಾಧನೆ ಮಾಡಿತು.
ಉಳಿದಂತೆ ಶೋನ್ ಗಂಗೂಲಿ ಮತ್ತು ಶಿವಾ ಎಸ್. ಪುರುಷರ 200 ಮೀ. ಮೆಡ್ಲೆಯಲ್ಲಿ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರೆ, 400 ಮೀ. ಫ್ರೀಸ್ಟೆ$ಲ್ನಲ್ಲಿ ಅನೀಶ್ ಎಸ್. ಗೌಡ, ಶಿರಿನ್ ಕ್ರಮವಾಗಿ ಪುರುಷ&ಮಹಿಳಾ ವಿಭಾಗದಲ್ಲಿ ಕಂಚು ಜಯಿಸಿದರು.
ಚಿನ್ನದತ್ತ ಆದಿಲ್-ಪ್ರಜ್ವಲ್
ಟೆನಿಸ್ ಸ್ಪರ್ಧೆಯ ಪುರುಷರ ಡಬಲ್ಸ್ ವಿಭಾಗದಲ್ಲಿ ರಾಜ್ಯದ ಆದಿಲ್ ಕಲ್ಯಾಣ್ಪುರ ಮತ್ತು ಎಸ್ಡಿ ಪ್ರಜ್ವಲ್ ದೇವ್ ಜೋಡಿ ಫೈನಲ್ಗೇರಿದ್ದು, ಚಿನ್ನದ ನಿರೀಕ್ಷೆ ಮೂಡಿಸಿದೆ. ಆದಿಲ್-ಪ್ರಜ್ವಲ್ ಜೋಡಿ ಸೆಮಿಫೈನಲ್ನಲ್ಲಿ ಉತ್ತರ ಪ್ರದೇಶದ ಸಿದ್ಧಾರ್ಥ್ ರಾವತ್-ಸಿದ್ಧಾರ್ಥ್ ವಿಶ್ವಕರ್ಮ ಜೋಡಿಯನ್ನು 6-0, 6-1 ನೇರಸೆಟ್ಗಳಿಂದ ಮಣಿಸಿತು. ಮಹಿಳಾ ಡಬಲ್ಸ್ನಲ್ಲಿ ಶರ್ಮದಾ ಬಾಲು-ಸೋಹಾ ಸಾದಿಕ್ ಜೋಡಿ ಸೆಮೀಸ್ನಲ್ಲಿ ಸೋಲುಂಡಿತು. ಮಿಶ್ರ ಡಬಲ್ಸ್ನಲ್ಲಿ ಪ್ರಜ್ವಲ್-ಶರ್ಮದಾ ಜೋಡಿ ಕೂಡ ಉಪಾಂತ್ಯದಲ್ಲಿ ಎಡವಿತು.