2ನೇ ಸ್ಥಾನಕ್ಕೆ ರಾಹುಲ್ ಐಸಿಸಿ ಟಿ20 ರ‍್ಯಾಂಕಿಂಗ್

kl1
Published on

ದುಬೈ: ನ್ಯೂಜಿಲೆಂಡ್ ಪ್ರವಾಸದ ಚುಟುಕು ಕ್ರಿಕೆಟ್ ಸರಣಿಯಲ್ಲಿ ಎಲ್ಲ ವಿಭಾಗದಲ್ಲೂ ಅಮೋಘ ನಿರ್ವಹಣೆ ತೋರಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕನ್ನಡಿಗ ಕೆಎಲ್ ರಾಹುಲ್, ಐಸಿಸಿ ಟಿ20 ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ 2 ಅರ್ಧಶತಕಗಳ ಸಹಿತ 224 ರನ್ ಸಿಡಿಸಿದ ರಾಹುಲ್ 4 ಸ್ಥಾನ ಬಡ್ತಿ ಸಂಪಾದಿಸಿದ್ದು, ಭಾರತದ ನಂ. 1 ಟಿ20 ಬ್ಯಾಟ್ಸ್​ಮನ್ ಆಗಿ ಮುಂದುವರಿದಿದ್ದಾರೆ. ಸರಣಿಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಮತ್ತು ಹಂಗಾಮಿ ನಾಯಕತ್ವದಲ್ಲೂ ತಂಡಕ್ಕೆ ಉತ್ತಮ ಕೊಡುಗೆ ನೀಡಿ 5-0 ಕ್ಲೀನ್​ಸ್ವೀಪ್​ಗೆ ಕಾರಣರಾಗಿದ್ದರು.

ಪಾಕಿಸ್ತಾನದ ಬಾಬರ್ ಅಜಮ್ ಅಗ್ರಸ್ಥಾನದಲ್ಲಿದ್ದರೆ, ಉಪನಾಯಕ ರೋಹಿತ್ ಶರ್ಮ 3 ಸ್ಥಾನ ಬಡ್ತಿಯೊಂದಿಗೆ ಅಗ್ರ 10ರೊಳಗೆ ಸ್ಥಾನ ಸಂಪಾದಿಸಿದ್ದಾರೆ. ಅವರು 10ನೇ ಸ್ಥಾನದಲ್ಲಿದ್ದರೆ, ನಾಯಕ ವಿರಾಟ್ ಕೊಹ್ಲಿ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ಇತರ ಬ್ಯಾಟ್ಸ್​ಮನ್​ಗಳ ಪೈಕಿ ಶ್ರೇಯಸ್ ಅಯ್ಯರ್ 63 ಸ್ಥಾನ ಬಡ್ತಿ ಪಡೆದು 55ನೇ ಸ್ಥಾನಕ್ಕೇರಿದ್ದರೆ, ಮನೀಷ್ ಪಾಂಡೆ 12 ಸ್ಥಾನ ಪ್ರಗತಿ ಕಂಡು 58ನೇ ಸ್ಥಾನಕ್ಕೇರಿದ್ದಾರೆ.

ಬೌಲರ್​ಗಳಿಗೂ ಬಡ್ತಿ: ವೇಗಿ ಜಸ್​ಪ್ರೀತ್ ಬುಮ್ರಾ 26 ಸ್ಥಾನ ಬಡ್ತಿಯೊಂದಿಗೆ 11ನೇ ಸ್ಥಾನಕ್ಕೇರಿದ್ದರೆ, ಯಜುವೇಂದ್ರ ಚಾಹಲ್ 10 ಸ್ಥಾನ ಬಡ್ತಿ ಪಡೆದು 30ನೇ ಮತ್ತು ಶಾರ್ದೂಲ್ ಠಾಕೂರ್ 34 ಸ್ಥಾನ ಬಡ್ತಿ ಪಡೆದು 57ನೇ ಸ್ಥಾನಕ್ಕೇರಿದ್ದಾರೆ. ನವದೀಪ್ ಸೈನಿ 71ನೇ ಸ್ಥಾನದಲ್ಲಿದ್ದರೆ, ರವೀಂದ್ರ ಜಡೇಜಾ 76ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ರ್ಯಾಂಕಿಂಗ್​ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ಮೊದಲೆರಡು ಸ್ಥಾನದಲ್ಲಿದ್ದಾರೆ. -ಪಿಟಿಐ/ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net