

ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ 2023-25) ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
2ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 104 ರನ್ ಸಿಡಿಸಿ ಅಬ್ಬರಿಸಿದ ಶುಭ್ಮನ್ ಗಿಲ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇನ್ನು ಟೀಂ ಇಂಡಿಯಾ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್’ಗೆ 399 ರನ್’ಗಳ ದೊಡ್ಡ ಗುರಿಯನ್ನು ನೀಡಿದೆ. ಆದರೆ ಅಷ್ಟರಲ್ಲಿ ಟೀಂ ಇಂಡಿಯಾಗೆ ದೊಡ್ಡ ಪೆಟ್ಟು ಬಿದ್ದಿದೆ. ಶತಕ ಸಿಡಿಸಿದ ಶುಭ್ಮನ್ ಗಿಲ್ ಗಾಯಗೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ದಿನದಂದು ಫೀಲ್ಡಿಂಗ್ ಮಾಡುವಾಗ ಶುಭ್ಮನ್ ಗಿಲ್ ಅವರ ಬಲಗೈಯ ತೋರು ಬೆರಳಿಗೆ ಗಾಯವಾಗಿತ್ತು. ಆದರೆ, ಗಾಯ ಅಷ್ಟೊಂದು ಗಂಭೀರವಾಗಿರದ ಕಾರಣ ಪಂದ್ಯದ ಮೂರನೇ ದಿನ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದರು. ಆದರೆ, ಈಗ ತಂಡದ ಆಡಳಿತವು ಗಿಲ್’ಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಫೆಬ್ರವರಿ 5ರಂದು ನಡೆಯಲಿರುವ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ 147 ಎಸೆತಗಳಲ್ಲಿ 104 ರನ್ ಗಳಿಸಿದರು. ಇದು ಅವರ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 10ನೇ ಶತಕ ಮತ್ತು ಟೆಸ್ಟ್ ವೃತ್ತಿಜೀವನದ ಮೂರನೇ ಶತಕವಾಗಿದೆ. ಈ ವೇಳೆ ಗಿಲ್ 11 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು.
ಎರಡನೇ ಟೆಸ್ಟ್’ನಲ್ಲಿ ಗೆಲ್ಲಲು ಭಾರತ ಇಂಗ್ಲೆಂಡ್’ಗೆ 399 ರನ್‌ಗಳ ದೊಡ್ಡ ಗುರಿ ನೀಡಿದೆ. ಮೂರನೇ ದಿನವಾದ ಭಾನುವಾರ ಎರಡನೇ ಇನಿಂಗ್ಸ್’ನಲ್ಲಿ ಟೀಂ ಇಂಡಿಯಾ 255 ರನ್’ಗಳಿಗೆ ಕುಸಿದಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಯಶಸ್ವಿ ಜೈಸ್ವಾಲ್ ಅವರ ದ್ವಿಶತಕದ ನೆರವಿನಿಂದ 396 ರನ್ ಗಳಿಸಿತ್ತು. ಇದಾದ ಬಳಿಕ ಭಾರತದ ಬೌಲರ್’ಗಳು ಇಂಗ್ಲೆಂಡ್‌ನ್ನು 253 ರನ್‌ಗಳಿಗೆ ಕಟ್ಟಿಹಾಕಿದ್ದರು.