

ನೋಯ್ಡ: ಪ್ರತೀಕ್ ದಹಿಯಾ (25) ನಡೆಸಿದ 16 ಭರ್ಜರಿ ಯಶಸ್ವಿ ರೈಡಿಂಗ್‌ಗಳ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಪ್ರೊ ಕಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಎದುರು 51-42ರಿಂದ ಭರ್ಜರಿ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ 6ನೇ ಗೆಲುವು ಕಂಡ ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನೋಯ್ಡ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನೋಯ್ಡ ಚರಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಆರಂಭದಿದಲೂ ಪ್ರಾಬಲ್ಯ ಸಾಧಿಸಿದ ಗುಜರಾತ್ ಜೈಂಟ್ಸ್ ಮೊದಲಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಎರಡು ಬಾರಿ ಆಲೌಟ್ ಬಲೆಗೆ ಕಡೆವಿತು. ಇದರೊಂದಿಗೆ 28-17 ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದಲ್ಲಿ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಿರುಗೇಟು ನೀಡಿತು. ನಿತನ್ ಕುಮಾರ್ (12) ನಡೆಸಿದ 9 ಯಶಸ್ವಿ ರೈಡಿಂಗ್‌ಗಳಿಂದ ಗುಜರಾತ್ ತಂಡವನ್ನು ಒಮ್ಮೆ ಆಲೌಟ್ ಮಾಡಿದ ಬೆಂಗಾಲ್ ಅಂಕಗಳ ಅಂತರ ತಗ್ಗಿಸಿತು. ಆದರೆ ಕೊನೇ ನಿಮಿಷದಲ್ಲಿ ಎಚ್ಚರಿಕೆಯ ಆಟ ನಡೆಸಿದ ಗುಜರಾತ್ ಜೈಂಟ್ಸ್ ಗೆಲುವು ಒಲಿಸಿಕೊಂಡಿತು. ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ (11), ಶ್ರೀಕಾಂತ್ ಜಾಧವ್ (9) ಹೋರಾಟ ಲಿಸಲಿಲ್ಲ.