ನವದೆಹಲಿ: ನಿಜವಾದ ವಯಸ್ಸನ್ನು ಮುಚ್ಚಿಟ್ಟು, ನಕಲಿ ದಾಖಲೆ ಪತ್ರದೊಂದಿಗೆ ಅದಕ್ಕಿಂತ ಕಡಿಮೆ ವಯೋಮಿತಿಯ ಕ್ರಿಕೆಟ್ನಲ್ಲಿ ಆಡುವ ಆಟಗಾರರ ವಿರುದ್ಧ ಬಿಸಿಸಿಐ ಈಗಾಗಲೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳೂ ಈ ಸಂಬಂಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, 2018ರ 19 ವಯೋಮಿತಿ ವಿಶ್ವಕಪ್ನಲ್ಲಿ ಮಿಂಚಿದ್ದ ಉದಯೋನ್ಮುಖ ಬ್ಯಾಟ್ಸ್ಮನ್ ಮಂಜೋತ್ ಕಾಲ್ರಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) 2 ವರ್ಷ ನಿಷೇಧ ಶಿಕ್ಷೆ ವಿಧಿಸಿದೆ.
2018ರ ಕಿರಿಯರ ವಿಶ್ವಕಪ್ ಫೈನಲ್ನಲ್ಲಿ ಮಂಜೋತ್ ಕಾಲ್ರ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ಈ ಟೂರ್ನಿಗೆ ಮುನ್ನವೇ ಅವರ ವಿರುದ್ಧ ವಯೋಮಿತಿ ಮೋಸದ ಆರೋಪ ಕೇಳಿಬಂದಿದ್ದರೂ, ಬಿಸಿಸಿಐ ವಿಶ್ವಕಪ್ನಲ್ಲಿ ಆಡಲು ಅವಕಾಶ ಕಲ್ಪಿಸಿತ್ತು. ಆದರೆ ಟೂರ್ನಿಯ ನಂತರದಲ್ಲಿ ಅವರು ತಮ್ಮ ಮೇಲಿನ ಆರೋಪಗಳು ಸುಳ್ಳೆಂದು ಸಾಬೀತು ಪಡಿಸಲು ವಿಫಲರಾಗಿರುವ ಕಾರಣ ಡಿಡಿಸಿಎ ಈ ಕ್ರಮ ಕೈಗೊಂಡಿದೆ. ಅವರು ಇನ್ನು 2 ವರ್ಷಗಳ ಕಾಲ ಯಾವುದೇ ವಯೋಮಿತಿ ಕ್ರಿಕೆಟ್ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಡಿಡಿಸಿಎ ತೀರ್ಪು ಪ್ರಕಟಿಸಿದೆ.
ದೆಹಲಿ ಬ್ಯಾಟ್ಸ್ಮನ್ ನಿತೀಶ್ ರಾಣಾ ಮತ್ತು ಉತ್ತರ ಪ್ರದೇಶದ ವೇಗಿ ಶಿವಂ ಮಾವಿ ಕೂಡ ವಯೋಮಿತಿ ಮೋಸ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದು, ಇದರ ಇತ್ಯರ್ಥ ಇನ್ನೂ ಆಗಿಲ್ಲ. ಇವರಿಬ್ಬರೂ ಮುಂದಿನ ಐಪಿಎಲ್ನಲ್ಲಿ ಕೋಲ್ಕತ ನೈಟ್ರೈಡರ್ಸ್ ತಂಡವನ್ನು ಪ್ರತಿನಿಧಿಸಬೇಕಾಗಿದೆ. ಆದರೆ ವಯೋಮಿತಿ ಮೋಸ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದರೆ ಕೆಕೆಆರ್ ಫ್ರಾಂಚೈಸಿಗೆ ಇವರಿಬ್ಬರೂ ಅಲಭ್ಯರಾಗುವ ಭೀತಿ ಇದೆ. ನಿತೀಶ್ ರಾಣಾ ಈಗಾಗಲೆ 2015ರಲ್ಲೊಮ್ಮೆ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದರು. ಆಗ ಮಂಡಳಿಯಿಂದ ಶಿಕ್ಷೆಗೆ ಗುರಿಯಾದ 22 ಕ್ರಿಕೆಟಿಗರಲ್ಲಿ ರಾಣಾ ಕೂಡ ಒಬ್ಬರಾಗಿದ್ದರು. 2018ರ 19 ವಯೋಮಿತಿ ವಿಶ್ವಕಪ್ನಲ್ಲಿ ಭಾರತದ ಗೆಲುವಿನಲ್ಲಿ ಮಿಂಚಿದ್ದ ಶಿವಂ ಮಾವಿ, 6 ಪ್ರಥಮ ದರ್ಜೆ ಮತ್ತು 16 ಲಿಸ್ಟ್ ಎ ಪಂದ್ಯಗಳನ್ನೂ ಆಡಿದ್ದಾರೆ.