

ನವದೆಹಲಿ: ಇತ್ತೀಚೆಗಷ್ಟೇ 2025ರ ಐಪಿಎಲ್ 18ನೇ (IPL Auction 2025) ಆವೃತ್ತಿಗೆ ಇಂದಿನಿಂದಲೇ ಭರ್ಜರಿ ತಯಾರಿಗಳು ನಡೆಯುತ್ತಿದ್ದು, ಈಗಾಗಲೇ ರಿಟೆನ್ಶನ್ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ. ಯಾವ ನಾಲ್ಕು ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬುದನ್ನು ಚೆನ್ನಾಗಿ ಆಲೋಚಿಸಿ, ನಿರ್ಧಾರ ತೆಗೆದುಕೊಂಡಿರುವ ಫ್ರಾಂಚೈಸಿಗಳು, ಈ ಬಗ್ಗೆ ರಿಟೆನ್ಶನ್ ಪ್ರಕ್ರಿಯೆಯಲ್ಲಿ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ. ಸದ್ಯ ನ.24-25ರಂದು ನಡೆಯಲಿರುವ ಐಪಿಎಲ್ ಹರಾಜಿನತ್ತ ಎದುರುನೋಡುತ್ತಿರುವ ಟೀಮ್ಗಳು, ರಿಟೈನ್ ಆಗದೆ ಆಕ್ಷನ್ಗೆ ಬಂದಿರುವ ಆಟಗಾರರನ್ನು ಖರೀದಿ ಮಾಡಲು ಎದುರುನೋಡುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಫಾಫ್ ಡು ಪ್ಲೆಸಿಸ್, ಪಂಜಾಬ್ ಕಿಂಗ್ಸ್ನಿಂದ ಶಿಖರ್ ಧವನ್, ಲಖನೌ ಸೂಪರ್ ಜೈಂಟ್ಸ್ ಕ್ಯಾಪ್ಟನ್ ಆಗಿದ್ದ ಕೆ.ಎಲ್. ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ನ ರಿಷಭ್ ಪಂತ್ ಮತ್ತು ಕೋಲ್ಕತ ನೈಟ್ ರೈಡರ್ಸ್ ತಂಡದಿಂದ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಫ್ರಾಂಚೈಸಿಗಳಿಂದ ರಿಟೈನ್ ಆಗದ ಸ್ಟಾರ್ ಆಟಗಾರರು. ಇವರೊಂದಿಗೆ ಮತ್ತೊಂದಿಷ್ಟು ಆಟಗಾರರು ಸದ್ಯ ಹರಾಜಿಗೆ ಲಗ್ಗೆಯಿಟ್ಟಿದ್ದು, ಫ್ರಾಂಚೈಸಿಗಳ ಖರೀದಿಗೆ ಸಜ್ಜಾಗಿದ್ದಾರೆ.
ಒಂದೆಡೆ ಕೆಕೆಆರ್ ತಂಡದಿಂದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೊರಬಿದ್ದರೆ, ಮತ್ತೊಂದೆಡೆ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಸಹ ರಿಟೈನ್ ಆಗದೆ ಇದೀಗ ಆಕ್ಷನ್ಗೆ ಬಂದಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದೇ ಆದರೂ ಇತರೆ ಹೆಸರಾಂತ ತಂಡಗಳ ಪರ ಆಡಲಿ ಎಂದು ಬಯಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಶ್ರೇಯಸ್ ಮತ್ತು ಮಿಚೆಲ್ಗೆ ತಲಾ 15 ಕೋಟಿ ರೂ. ಹರಾಜಿನಲ್ಲಿ ಕರೆಯಲಾಗುವುದು ಎಂದು ಹೇಳಲಾಗಿದೆ.
ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಸಾಮರ್ಥ್ಯ ಮತ್ತು ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಯನ್ನು ಅರಿತಿರುವ ಫ್ರಾಂಚೈಸಿಗಳ ಪೈಕಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಂಚೂಣಿಯಲ್ಲಿವೆ. ಅಸಲಿಗೆ ಈ ಇಬ್ಬರು ಆಟಗಾರರನ್ನು ಯಾವ ತಂಡ ಹರಾಜಿನಲ್ಲಿ 15 ಕೋಟಿ ರೂ.ಗೆ ಖರೀದಿಸಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).