

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯುವ&ಅನುಭವಿ ಆಟಗಾರರ ಬಲಿಷ್ಠ ನಿರ್ವಹಣೆಯೊಂದಿಗೆ ಉತ್ತಮ ಲಯದಲ್ಲಿರುವ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಸವಾಲಿಗೆ ಸಜ್ಜಾಗಿದೆ. ಸತತ 3ನೇ ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ೈನಲ್ಗೇರುವ ನಿಟ್ಟಿನಲ್ಲಿ ಭಾರತದ ಪಾಲಿಗೆ ಮಹತ್ವದ್ದಾಗಿರುವ ಸರಣಿಯಲ್ಲಿ, ಉದ್ಯಾನನಗರಿಯ ಚಿನ್ನಸ್ವಾಮಿ ಸ್ಟೇಡಿಯಂ ಬುಧವಾರದಿಂದ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಿಕೊಳ್ಳಲಿದೆ. ಆದರೆ ಆತಿಥೇಯರಿಗೆ ಪ್ರವಾಸಿ ತಂಡಕ್ಕಿಂತ ಮಳೆ ಭೀತಿಯೇ ದೊಡ್ಡ ಚಿಂತೆ ಎನಿಸಿದೆ.
ರೋಹಿತ್ ಶರ್ಮ ಪಡೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0ಯಿಂದ ಗೆದ್ದು ತವರಿನಲ್ಲಿ ಉತ್ತಮ ಸಿದ್ಧತೆ ನಡೆಸಿದ್ದರೆ, ನ್ಯೂಜಿಲೆಂಡ್ ತಂಡ ಶ್ರೀಲಂಕಾದಲ್ಲಿ 0-2ರಿಂದ ಸರಣಿ ಸೋತ ಹಿನ್ನಡೆ ಹೊಂದಿದೆ. ಹೀಗಾಗಿ ಕಳೆದ 12 ವರ್ಷಗಳಿಂದ ತವರಿನಲ್ಲಿ ಒಂದೂ ಸರಣಿ ಸೋಲದಿರುವ ಭಾರತವೇ ಸರಣಿಯಲ್ಲಿ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದೆ. ಕಿವೀಸ್ ತಂಡ ಮೊದಲ ಟೆಸ್ಟ್ನಲ್ಲಿ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಅಲಭ್ಯತೆಯ ಹಿನ್ನಡೆಯನ್ನೂ ಹೊಂದಿದೆ. ಲಂಕಾದಲ್ಲಿ ಸ್ಪಿನ್ನರ್ಗಳ ಎದುರು ತತ್ತರಿಸಿದ್ದ ಕಿವೀಸ್ಗೆ ಆರ್. ಅಶ್ವಿನ್-ರವೀಂದ್ರ ಜಡೇಜಾ ಜೋಡಿ ಅತಿ ದೊಡ್ಡ ಸವಾಲೆನಿಸಲಿದೆ. ವರ್ಷಾಂತ್ಯದ ಬಾರ್ಡರ್&ಗಾವಸ್ಕರ್ ಟ್ರೋಫಿಗೆ ಸಿದ್ಧತೆಯ ದೃಷ್ಟಿಯಿಂದ ಭಾರತಕ್ಕೆ ಇದು ಮಹತ್ವದ ಸರಣಿ ಎನಿಸಿದೆ.
ಲಂಕಾ ಸರಣಿಯ ನಂತರ ಟಿಮ್ ಸೌಥಿ ನಾಯಕತ್ವ ತ್ಯಜಿಸಿದ್ದರೆ, ಟಾಮ್ ಲಾಥಮ್ ಹೊಸ ನಾಯಕರಾಗಿದ್ದಾರೆ. ಈ ಬದಲಾವಣೆಯಿಂದ ಕಿವೀಸ್, ಉಪಖಂಡದಲ್ಲಿ ತನ್ನ ದಾಖಲೆ ಸುಧಾರಿಸುವ ಕನಸಿನಲ್ಲಿದೆ.
ಟೀಮ್ ನ್ಯೂಸ್
ಭಾರತ: ಸೀಮಿತ ಓವರ್ ತಂಡದ ಉಪನಾಯಕ ಶುಭಮಾನ್ ಗಿಲ್ ಕುತ್ತಿಗೆ ನೋವು ಹೊಂದಿದ್ದಾರೆ. ಒಂದು ವೇಳೆ ಅವರು ಫಿಟ್ ಆಗದಿದ್ದರೆ ಸ್ರಾರ್ಜ್ ಖಾನ್ ಅವಕಾಶ ಪಡೆಯಲಿದ್ದಾರೆ. ಆದರೆ ಗಿಲ್ ಆಡುವ 3ನೇ ಕ್ರಮಾಂಕದಲ್ಲಿ ಆಗ ಕೆಎಲ್ ರಾಹುಲ್ ಆಡಬಹುದು. ಇದೇ ವೇಳೆ 3ನೇ ಸ್ಪಿನ್ನರ್ ಅಥವಾ 3ನೇ ವೇಗಿಯನ್ನು ಆಡಿಸುವುದೇ ಎಂಬ ಗೊಂದಲ ಕಾಡುತ್ತಿದೆ. ಆದರೆ ಮಳೆ&ಮೋಡದ ವಾತಾವರಣದಿಂದಾಗಿ 3ನೇ ವೇಗಿಯನ್ನು ಆಡಿಸುವ ಸಾಧ್ಯತೆಯೇ ಹೆಚ್ಚಿದೆ.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್/ಸ್ರಾರ್ಜ್ ಖಾನ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಆಕಾಶ್ದೀಪ್/ಕುಲದೀಪ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮದ್ ಸಿರಾಜ್.
ನ್ಯೂಜಿಲೆಂಡ್: ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಫಿಟ್ನೆಸ್ ಸಮಸ್ಯೆಯಿಂದಾಗಿ ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆ. ಅವರ ಸ್ಥಾನದಲ್ಲಿ ವಿಲ್ ಯಂಗ್ ಕಣಕ್ಕಿಳಿಯಲಿದ್ದಾರೆ. ಕಿವೀಸ್ ಕೂಡ 3ನೇ ಸ್ಪಿನ್ನರ್ (ಮಿಚೆಲ್ ಸ್ಯಾಂಟ್ನರ್) ಮತ್ತು 3ನೇ ವೇಗಿ (ಮ್ಯಾಟ್ ಹೆನ್ರಿ) ನಡುವೆ ಆಯ್ಕೆ ಗೊಂದಲದಲ್ಲಿದ್ದು, ಬುಧವಾರ ಬೆಳಗ್ಗೆ ಪಿಚ್ ಪರಿಶೀಲಿಸಿ ತಂಡ ಅಂತಿಮಗೊಳಿಸಬಹುದು. ವೇಗಿ ಬೆನ್ ಸಿಯರ್ಸ್ ಮೊಣಕಾಲು ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದು, ಜೇಕಬ್ ಡಫಿ ಬದಲಿಗರಾಗಿ ಸೇರ್ಪಡೆಯಾಗಿದ್ದಾರೆ. ಆದರೆ 30 ವರ್ಷ ಡಫಿ ಬುಧವಾರವಷ್ಟೇ ಭಾರತಕ್ಕೆ ಪ್ರಯಾಣ ಬೆಳಸಲಿರುವುದರಿಂದ 2ನೇ ಟೆಸ್ಟ್ಗಷ್ಟೇ ಲಭ್ಯರಾಗಲಿದ್ದಾರೆ.
ಸಂಭಾವ್ಯ ತಂಡ: ಡೆವೊನ್ ಕಾನ್ವೇ, ಟಾಮ್ ಲಾಥಮ್ (ನಾಯಕ), ವಿಲ್ ಯಂಗ್, ರಚಿನ್ ರವೀಂದ್ರ, ಡೆರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿ.ಕೀ), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್/ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಎಜಾಜ್ ಪಟೇಲ್, ವಿಲ್ ಒರೌರ್ಕೆ.
*ಮುಖಾಮುಖಿ: 62
ಭಾರತ: 22
ನ್ಯೂಜಿಲೆಂಡ್: 13
ಡ್ರಾ: 27
ಕಾಡುತ್ತಿದೆ ಮಳೆ ಭೀತಿ
ಪಂದ್ಯದ ಮೊದಲ 3 ದಿನದಾಟ ಟಿಕೆಟ್ಗಳು ಬಹುತೇಕ ಮಾರಾಟವಾಗಿರುವ ನಡುವೆ ಮಳೆ ಅಡಚಣೆ ಭೀತಿ ಕಾಡುತ್ತಿದೆ. ಅದರಲ್ಲೂ ಮೊದಲ 2 ದಿನದಾಟ ಮಳೆಯಿಂದಾಗಿ ಹೆಚ್ಚಿನ ತೊಂದರೆ ಅನುಭವಿಸಲಿದೆ. ಚಿನ್ನಸ್ವಾಮಿ ಸ್ಟೇಡಿಯಂ ದೇಶದಲ್ಲೇ ಅತ್ಯುತ್ತಮವಾದ ಒಳಚರಂಡಿ ವ್ಯವಸ್ಥೆ ಅಂದರೆ ಮಳೆನೀರು ಇಂಗಿಸುವ ಸಬ್-ಏರ್ ಸಿಸ್ಟಮ್ ಹೊಂದಿದೆ. ಹೀಗಾಗಿ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಆಟ ಆರಂಭಿಸಲು ಸಾಧ್ಯವಾಗಲಿದೆ. ಆದರೆ ಮಂಗಳವಾರ ನಗರದಲ್ಲಿ ಸುರಿದಂತೆ ನಿರಂತರ ಮಳೆಯಾದರೆ ಆಟ ಸಾಧ್ಯವಾಗದು. ಪಂದ್ಯದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಓವರ್ ನಷ್ಟವಾದರೆ ಭಾರತ ತಂಡ ಮತ್ತೊಮ್ಮೆ ಕಾನ್ಪುರ ಟೆಸ್ಟ್ನಂತೆ ಆಕ್ರಮಣಕಾರಿಯಾಗಿ ಆಡಿ ಸ್ಪಷ್ಟ ಫಲಿತಾಂಶ ಕಂಡುಕೊಳ್ಳಲು ಹೋರಾಡಬಹುದು.
ಅಭ್ಯಾಸಕ್ಕೆ ಮಳೆ ಅಡ್ಡಿ
ಮಂಗಳವಾರವಿಡೀ ಸುರಿದ ಮಳೆಯಿಂದ ಭಾರತ&ನ್ಯೂಜಿಲೆಂಡ್ ತಂಡಗಳು ಪಂದ್ಯಕ್ಕೆ ಮುನ್ನಾದಿನ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ 9.30ರಿಂದ ನೆಟ್ಸ್ ಅಭ್ಯಾಸ ನಡೆಸಬೇಕಿದ್ದ ಭಾರತ ತಂಡದ ಪ್ರಮುಖ ಆಟಗಾರರು ಹೋಟೆಲ್ನಿಂದ ಸ್ಟೇಡಿಯಂಗೇ ಬರಲಿಲ್ಲ. ನಾಯಕ ರೋಹಿತ್ ಶರ್ಮ ಮಾತ್ರ ಸುದ್ದಿಗೋಷ್ಠಿಗೆ ಹಾಜರಾಗಿ ಹೋದರು. ಮಧ್ಯಾಹ್ನದ ನಂತರ ಕಿವೀಸ್ ಒಳಾಂಗಣ ಅಭ್ಯಾಸ ನಡೆಸಿತು.
ಮಳೆ ಸಾಧ್ಯತೆ
ದಿನ ಮಳೆ ಚಾನ್ಸ್
1 (ಅ.16) 92%
2 (ಅ.17) 80%
3 (ಅ.18) 60%
4 (ಅ.19) 65%
5 (ಅ.20) 77%
ಟೆಸ್ಟ್ ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ ಸ್ಥಳ
1. ಅ.16-20 ಬೆಂಗಳೂರು
2. ಅ.24-28 ಪುಣೆ
3. ನ.1-5 ಮುಂಬೈ
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ.
*53: ವಿರಾಟ್ ಕೊಹ್ಲಿ ಇನ್ನು 53 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 9 ಸಾವಿರ ರನ್ ಬಾರಿಸಿದ 4ನೇ ಭಾರತೀಯ ಬ್ಯಾಟರ್ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ (15,921), ರಾಹುಲ್ ದ್ರಾವಿಡ್ (13,265) ಮತ್ತು ಸುನೀಲ್ ಗಾವಸ್ಕರ್ (10,122) ಮೊದಲ ಮೂವರು.
*3: ಭಾರತ (97) ತಂಡ ಇನ್ನು 3 ಸಿಕ್ಸರ್ ಸಿಡಿಸಿದರೆ, ಟೆಸ್ಟ್ ಕ್ರಿಕೆಟ್ನಲ್ಲಿ ವರ್ಷವೊಂದರಲ್ಲಿ 100 ಸಿಕ್ಸರ್ ಸಿಡಿಸಿದ ಮೊದಲ ತಂಡವೆನಿಸಲಿದೆ. 2022ರಲ್ಲಿ ಇಂಗ್ಲೆಂಡ್ 89 ಸಿಕ್ಸರ್ ಸಿಡಿಸಿದ್ದು ಹಿಂದಿನ ಗರಿಷ್ಠ.
36 ವರ್ಷಗಳಿಂದ ಕಿವೀಸ್ ತಂಡ ಭಾರತದಲ್ಲಿ ಗೆದ್ದಿಲ್ಲ!
ನ್ಯೂಜಿಲೆಂಡ್ ತಂಡ ಭಾರತದಲ್ಲಿ ಇದುವರೆಗೆ 36 ಟೆಸ್ಟ್ ಆಡಿದ್ದು, 17ರಲ್ಲಿ ಸೋತು, 2ರಲ್ಲಿ ಮಾತ್ರ ಗೆದ್ದಿದೆ. ಉಳಿದಂತೆ 17 ಟೆಸ್ಟ್ ಡ್ರಾಗೊಂಡಿವೆ. ಕಿವೀಸ್ ತಂಡ ಕೊನೆಯದಾಗಿ ಭಾರತದಲ್ಲಿ ಟೆಸ್ಟ್ ಗೆದ್ದಿರುವುದು 1988ರಲ್ಲಿ ಮುಂಬೈನಲ್ಲಿ. ಅಂದರೆ ಕಳೆದ 36 ವರ್ಷಗಳಿಂದ ಭಾರತದಲ್ಲಿ ಒಂದೂ ಟೆಸ್ಟ್ ಗೆದ್ದಿಲ್ಲ. ಕೊನೇ 3 ಭಾರತ ಪ್ರವಾಸಗಳಲ್ಲಿ ಆಡಿದ 7 ಟೆಸ್ಟ್ಗಳಲ್ಲಿ ಕಿವೀಸ್ 6ರಲ್ಲಿ ಸೋತಿದ್ದು, 1ರಲ್ಲಿ ಡ್ರಾ ಸಾಧಿಸಿದೆ.
*12: ಭಾರತ-ಕಿವೀಸ್ ನಡುವೆ 1955-56ರಿಂದ ಇದುವರೆಗೆ ಒಟ್ಟು 12 ಟೆಸ್ಟ್ ಸರಣಿಗಳು ನಡೆದಿವೆ. ಈ ಪೈಕಿ 10ರಲ್ಲಿ ಭಾರತವೇ ಸರಣಿ ಗೆದ್ದಿದ್ದರೆ, ಕಿವೀಸ್ 2 ಬಾರಿ (1969-70, 2003-04) ಸಮಬಲ ಸಾಧಿಸಿರುವುದೇ ಶ್ರೇಷ್ಠ ಸಾಧನೆ ಎನಿಸಿದೆ.
ಪಿಚ್ ರಿಪೋರ್ಟ್
ಉದ್ಯಾನನಗರಿಯಲ್ಲಿ ಮಂಗಳವಾರ ದಿನವಿಡೀ ಸುರಿದ ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣ ಹೊದಿಕೆಯಿಂದಲೇ ಆವೃತ್ತವಾಗಿತ್ತು. ಹೀಗಾಗಿ ತೇವಾಂಶದಿಂದ ಕೂಡಿರುವ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ಕಲ್ಪಿಸುವ ನಿರೀೆ ಇದೆ.
ಸರಣಿ ಕ್ಲೀನ್ಸ್ವೀಪ್ ಸಾಧಿಸಿದರೆ ಡಬ್ಲ್ಯುಟಿಸಿ ಫೈನಲ್ ಹಾದಿ ಸುಗಮ
ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ಇನ್ನು 8 ಟೆಸ್ಟ್ ಆಡಲಿದ್ದು, ಈ ಪೈಕಿ ಕೊನೇ 5 ಟೆಸ್ಟ್ಗಳನ್ನು ಆಸ್ಟ್ರೆಲಿಯಾ ನೆಲದಲ್ಲಿ ಆಡುವ ಸವಾಲು ಹೊಂದಿದೆ. ಹೀಗಾಗಿ ಅದಕ್ಕೆ ಮುನ್ನ ತವರಿನಲ್ಲಿ ಆಡಲಿರುವ ಕಿವೀಸ್ ವಿರುದ್ಧದ 3 ಟೆಸ್ಟ್ ಗೆದ್ದರೆ ಡಬ್ಲ್ಯುಟಿಸಿ ಫೈನಲ್ಗೇರುವ ಭಾರತದ ಹಾದಿ ಸುಗಮವಾಗಲಿದೆ. ಭಾರತ ಸದ್ಯ ಶೇ. 74.24 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಅಗ್ರ 2ರಲ್ಲಿ ಸ್ಥಾನ ಉಳಿಸಿಕೊಳ್ಳಲು ಇನ್ನೂ 3 ಜಯ, 1 ಡ್ರಾ ಅಗತ್ಯವಿದೆ. ಕಿವೀಸ್ ಎದುರು 3-0 ಕ್ಲೀನ್ಸ್ವೀಪ್ ಸಾಧಿಸಿದರೆ ಭಾರತ, ಆಸೀಸ್ನಲ್ಲಿ ಕನಿಷ್ಠ 1 ಡ್ರಾ ಸಾಧಿಸಿದರೂ ಡಬ್ಲ್ಯುಟಿಸಿ ಫೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಬಹುದು.
*5: ರೋಹಿತ್ ಶರ್ಮ ಇನ್ನು 5 ಸಿಕ್ಸರ್ ಸಿಡಿಸಿದರೆ, ವೀರೇಂದ್ರ ಸೆಹ್ವಾಗ್ರನ್ನು (91) ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಎನಿಸಲಿದ್ದಾರೆ.
*ನಾವು ಬ್ಯಾಟಿಂಗ್ನಲ್ಲಿ ಈಗಾಗಲೆ ಹಲವಾರು ಆಯ್ಕೆಗಳನ್ನು ಹೊಂದಿದ್ದೇವೆ. ಬೌಲಿಂಗ್ನಲ್ಲೂ ನಾವು ಅದನ್ನೇ ಬಯಸಿದ್ದೇವೆ. ಯಾರಿಗಾದರೂ ಗಾಯವಾದರೂ, ಚಿಂತೆಯಾಗದಂತೆ ಬೌಲಿಂಗ್ನಲ್ಲೂ ಬಲಿಷ್ಠ ಮೀಸಲು ಪಡೆ ಕಟ್ಟುವುದು ನಮ್ಮ ಗುರಿ.
| ರೋಹಿತ್ ಶರ್ಮ, ಟೀಮ್ ಇಂಡಿಯಾ ನಾಯಕ