ಇಂದಿನಿಂದ ಭಾರತ-ಕಿವೀಸ್​ ಏಕದಿನ ಕದನ; ರೋ-ಕೊ ಮರಳಿ ಕಣಕ್ಕೆ

ಮುಂದಿನ ವರ್ಷದ ವಿಶ್ವಕಪ್​ ಸಿದ್ಧತೆಗೆ ವೇದಿಕೆ
cricket
ಏಕದಿನ ಸರಣಿಯ ಟ್ರೋಫಿಯೊಂದಿಗೆ ಉಭಯ ತಂಡಗಳ ನಾಯಕರಾದ ಮಿಚೆಲ್​ ಸ್ಯಾಂಟ್ನರ್​ ಮತ್ತು ಶುಭಮಾನ್ ಗಿಲ್​.ಏಜೆನ್ಸಿ
Published on: 

ಆಕ್ಲೆಂಡ್​: ನ್ಯೂಜಿಲೆಂಡ್​ ಪ್ರವಾಸದ ಟಿ20 ಸರಣಿಯಲ್ಲಿ ಭಾರತದ ಯುವ ಆಟಗಾರರು ಭರ್ಜರಿ ನಿರ್ವಹಣೆ ತೋರಿ ಸರಣಿ ವಶಪಡಿಸಿಕೊಂಡಿದ್ದರೆ, ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ ಅನುಭವಿಗಳ ಬಲದೊಂದಿಗೆ ಅಂಥದ್ದೇ ನಿರ್ವಹಣೆ ಪುನರಾವರ್ತಿಸುವ ನಿರೀಕ್ಷೆ ಇದೆ. ಮುಂದಿನ ವರ್ಷದ ವಿಶ್ವಕಪ್​ ಸಿದ್ಧತೆಗೂ ನೆರವಾಗಲಿರುವ 5 ಪಂದ್ಯಗಳ ಏಕದಿನ ಸರಣಿಗೆ ವೇದಿಕೆ ಸಜ್ಜಾಗಿದ್ದು, ಅನುಭವಿ ಬ್ಯಾಟರ್​ಗಳಾದ ರೋಹಿತ್​ ಶರ್ಮ=ವಿರಾಟ್​ ಕೊಹ್ಲಿ ಕಣಕ್ಕಿಳಿಯಲಿರುವುದರಿಂದ ಈ ಸರಣಿ ಹೆಚ್ಚಿನ ಆಕರ್ಷಣೆ ಪಡೆದುಕೊಂಡಿದೆ. ಬುಧವಾರ ಆಕ್ಲೆಂಡ್​ನ ಈಡನ್​ ಪಾರ್ಕ್​ನಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಶುಭಮಾನ್​ ಗಿಲ್​ ಪಡೆ ಶುಭಾರಂಭ ಕಾಣುವ ವಿಶ್ವಾಸದಲ್ಲಿದೆ.

ಏಕದಿನ-ಟೆಸ್ಟ್​ ಸರಣಿಯ ನಡುವೆ ಕೇವಲ 3 ದಿನಗಳ ಅಂತರ ಇರುವುದರಿಂದ ಉಭಯ ತಂಡಗಳು ಸರಣಿಯ ಮೊದಲ 3 ಪಂದ್ಯಗಳಲ್ಲಿ ಮಾತ್ರ ಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸಲಿವೆ. ಕೊನೇ 2 ಪಂದ್ಯಗಳಿಗೆ ನಾಯಕ ಗಿಲ್​, ಕೆಎಲ್​ ರಾಹುಲ್​ ಮತ್ತಿತರ ಟೆಸ್ಟ್​ ಆಟಗಾರರು ಗೈರಾಗಲಿದ್ದು, ಶ್ರೇಯಸ್​ ಅಯ್ಯರ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಅದಕ್ಕೆ ಮುನ್ನ ಗಿಲ್​ 2027ರ ವಿಶ್ವಕಪ್​ಗೆ ತಂಡ ಸಂಯೋಜನೆ ಬಲಪಡಿಸುವ ಪ್ರಯತ್ನ ನಡೆಸಲಿದ್ದಾರೆ. ಆತಿಥೇಯ ಕಿವೀಸ್​ ಟಿ20ಯಂತೆ ಏಕದಿನದಲ್ಲೂ ಗಾಯದ ಸಮಸ್ಯೆಗಳ ನಡುವೆ ಕಣಕ್ಕಿಳಿಯುತ್ತಿದೆ.

ಆಧುನಿಕ ಕ್ರಿಕೆಟ್​ ಬ್ಯಾಟಿಂಗ್​ ದಿಗ್ಗಜರಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಅವರಿಗೆ ವೃತ್ತೀಜಿವನದ ಕೊನೇ ನ್ಯೂಜಿಲೆಂಡ್​ ಪ್ರವಾಸದಲ್ಲಿ ಗೆಲುವಿನ ಕಾಣಿಕೆ ನೀಡಬೇಕಾದ ಸವಾಲು ಕೂಡ ಭಾರತ ತಂಡಕ್ಕಿದೆ.

ಬೌಲಿಂಗ್​ ವಿಭಾಗದ ಕಳವಳ

ಭಾರತಕ್ಕೆ ವಿಶ್ವಕಪ್​ ಸಿದ್ಧತೆಯಲ್ಲಿ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಹೆಚ್ಚಿನ ಚಿಂತೆ ಇಲ್ಲ. ಆದರೆ ಬೌಲಿಂಗ್​ ವಿಭಾಗವನ್ನು ಸಜ್ಜುಗೊಳಿಸಬೇಕಾದ ಅಗತ್ಯವಿದೆ. ಬುಮ್ರಾ, ಹಾರ್ದಿಕ್​ ಜತೆಗೆ ಪ್ರಸಿದ್ಧಕೃಷ್ಣ ಮತ್ತು ಹರ್ಷಿತ್​ ರಾಣಾ ಕೂಡ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಇದರಿಂದ ಮೊಹಮದ್​ ಸಿರಾಜ್​ ವೇಗದ ಬೌಲಿಂಗ್​ ವಿಭಾಗದ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ. ತಂಡದಲ್ಲಿರುವ ಇತರ ನಾಲ್ವರು ವೇಗಿಗಳಾದ ಅರ್ಷದೀಪ್​ ಸಿಂಗ್​, ಗುರುನೂರ್​ ಬ್ರಾರ್​, ಅಂಶುಲ್​ ಕಂಬೋಜ್​ ಮತ್ತು ಅಕಿಬ್​ ನಬಿ ಒಟ್ಟಾರೆ 29 ಏಕದಿನ ಪಂದ್ಯಗಳ ಅನುಭವವನ್ನಷ್ಟೇ ಹೊಂದಿದ್ದಾರೆ. ಇನ್ನು ಸ್ಪಿನ್​ ವಿಭಾಗದಲ್ಲಿ ಕುಲದೀಪ್​ ಯಾದವ್​ ತಂಡದ ಹಾಲಿ ಬೌಲರ್​ಗಳಲ್ಲಿ ಅತ್ಯಧಿಕ ವಿಕೆಟ್​ (201) ಕಬಳಿಸಿದ ಅನುಭವಿಯಾಗಿದ್ದಾರೆ. ಆದರೆ ಟೀಮ್​ ಮ್ಯಾನೇಜ್​ಮೆಂಟ್​ ಇತ್ತೀಚೆಗೆ ಆಲ್ರೌಂಡರ್​ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ, ಸ್ಪಿನ್​ ವಿಭಾಗದ ಹೊಣೆ ಅಕ್ಷರ್​&ನಮನ್​ ಧೀರ್​ ಹೆಗಲೇರಲಿದೆ. ಇದರಿಂದ ಕುಲದೀಪ್​ ಬೆಂಚು ಕಾಯಿಸಬೇಕಾಗುತ್ತದೆ. ಟಿ20 ಸರಣಿಯಲ್ಲಿ ದುಬಾರಿಯಾಗಿದ್ದ ನಮನ್​&ನಿತೀಶ್​ ರೆಡ್ಡಿ ಏಕದಿನ ಸರಣಿಯ ಬೌಲಿಂಗ್​ನಲ್ಲಿ ಸುಧಾರಿತ ನಿರ್ವಹಣೆ ತೋರಬೇಕಿದೆ.

ಟೀಮ್​ ನ್ಯೂಸ್​:

ಭಾರತ: ಇಬ್ಬರು ಪ್ರಮುಖ ಆಟಗಾರರಾದ ಜಸ್​ಪ್ರೀತ್​ ಬುಮ್ರಾ, ಹಾರ್ದಿಕ್​ ಪಾಂಡ್ಯ ಗೈರಿನ ನಡುವೆ ಭಾರತ ಸಮತೋಲನದ ತಂಡ ಸಂಯೋಜಿಸಬೇಕಿದೆ. ಕಳೆದ ವಿಂಡೀಸ್​ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ನಮನ್​ ಧೀರ್​, ಹಾಲಿ ಪ್ರವಾಸದ ಟಿ20 ಸರಣಿಯ ಯಶಸ್ಸಿನ ಬಳಿಕ ಇಲ್ಲೂ ಅವಕಾಶ ಪಡೆಯಬಹುದು. ಇದರಿಂದ ತಜ್ಞ ಸ್ಪಿನ್ನರ್​ ಕುಲದೀಪ್​ ಯಾದವ್​ ಮತ್ತೆ ಹೊರಗುಳಿಯಲಿದ್ದಾರೆ. ಕೋಚ್​ ಗಂಭೀರ್​ ಯೋಜನೆಯಂತೆ ಭಾರತ ಎಂದಿನಂತೆ ಮತ್ತೆ ಆಲ್ರೌಂಡರ್​ಗಳಿಗೆ ಹೆಚ್ಚಿನ ಒತ್ತು ನೀಡಲಿದೆ.

ಸಂಭಾವ್ಯ ತಂಡ: ರೋಹಿತ್​, ಗಿಲ್​ (ನಾಯಕ), ಕೊಹ್ಲಿ, ಶ್ರೇಯಸ್​, ರಾಹುಲ್​ (ವಿ.ಕೀ), ನಮನ್​ ಧೀರ್​, ನಿತೀಶ್​ ರೆಡ್ಡಿ, ಅಕ್ಷರ್​, ಗುರುನೂರ್​, ಸಿರಾಜ್​, ಅರ್ಷದೀಪ್​.

ನ್ಯೂಜಿಲೆಂಡ್​: ಡೆವೊನ್​ ಕಾನ್​ವೇ ಪಂದ್ಯಕ್ಕೆ ಅಲಭ್ಯರಾಗಿರುವುದರಿಂದ ಟಿಮ್​ ಸೈರ್ಟ್​ ಏಕದಿನದಲ್ಲೂ ಇನಿಂಗ್ಸ್​ ಆರಂಭಿಸುವ ಅವಕಾಶ ಪಡೆಯಲಿದ್ದಾರೆ. ಚಾಪ್​ಮನ್​ ಮತ್ತು ರಚಿನ್​ ರವೀಂದ್ರ ಅಲಭ್ಯತೆಯ ಹಿನ್ನಡೆಯೂ ಕಿವೀಸ್​ ತಂಡಕ್ಕಿದೆ.

ಸಂಭಾವ್ಯ ತಂಡ: ವಿಲ್​ ಯಂಗ್​, ಟಿಮ್​ ಸೈರ್ಟ್​, ಡೆರಿಲ್​ ಮಿಚೆಲ್​, ಫಿಲಿಪ್ಸ್​, ಲಾಥಮ್​ (ವಿ.ಕೀ), ಬ್ರೇಸ್​ವೆಲ್​, ಸ್ಯಾಂಟ್ನರ್​ (ನಾಯಕ), ನಾಥನ್​ ಸ್ಮಿತ್​, ಜೇಮಿಸನ್​, ಹೆನ್ರಿ/ಟಿಕ್ನರ್​, ಡಫಿ.

ಏಕದಿನ ಸರಣಿ ವೇಳಾಪಟ್ಟಿ

ಪಂದ್ಯ ದಿನಾಂಕ ಸ್ಥಳ

1. ನ.4 ಆಕ್ಲೆಂಡ್​

2. ನ.7 ವೆಲ್ಲಿಂಗ್ಟನ್​

3. ನ. 10 ಹ್ಯಾಮಿಲ್ಟನ್​

4. ನ.13 ಮೌಂಟ್​ ಮೌಂಗನುಯಿ

5. ನ. 15 ಮೌಂಟ್​ ಮೌಂಗನುಯಿ

ಎಲ್ಲ ಪಂದ್ಯ ಆರಂಭ: ಬೆಳಗ್ಗೆ 7.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​

5-6ರಲ್ಲಿ ಏರಿಳಿತ, ಗಿಲ್​ ಸುಳಿವು

ಮುಂದಿನ ವರ್ಷದ ವಿಶ್ವಕಪ್​ಗೆ ಭಾರತ ತಂಡದ ಅಗ್ರ 4 ಬ್ಯಾಟರ್ಸ್​ ಫಿಕ್ಸ್​ ಅಗಿದ್ದಾರೆ. 5-6ನೇ ಕ್ರಮಾಂಕದಲ್ಲಿ ಸ್ವಲ್ಪ ಏರಿಳಿತ ಇರಲಿದೆ ಮತ್ತು ಹಾರ್ದಿಕ್​ ಪಾಂಡ್ಯ ಮರಳಿದ ಬಳಿಕ 7-8ನೇ ಕ್ರಮಾಂಕದ ಸಮಸ್ಯೆಯೂ ಬಗೆಹರಿಯಲಿದೆ ಎಂದು ಭಾರತ ತಂಡದ ನಾಯಕ ಶುಭಮಾನ್​ ಗಿಲ್​ ತಿಳಿಸಿದ್ದಾರೆ. ಅಗ್ರ 4ರಲ್ಲಿ ಬಲಗೈ ಬ್ಯಾಟರ್​ಗಳೇ ಇರುವುದರಿಂದ, ಅಗತ್ಯಬಿದ್ದಾಗ 5ನೇ ಕ್ರಮಾಂಕದಲ್ಲಿ ಅಕ್ಷರ್​ ಪಟೇಲ್​ ಆಡಿಸುವೆವು. ಕೆಲ ಪರಿಸ್ಥಿತಿಗಳಲ್ಲಿ ಕೆಎಲ್​ ರಾಹುಲ್​ ಅವರೇ ಆ ಕ್ರಮಾಂಕದಲ್ಲಿ ಆಡಬಹುದು. ಹಾರ್ದಿಕ್​ ಪಾಂಡ್ಯ ಗಾಯದಿಂದ ಚೇತರಿಸಿಕೊಂಡು ಮರಳಿದಾಗ ತಂಡಕ್ಕೆ ಹೆಚ್ಚಿನ ಸಮತೋಲನವೂ ಸಿಗಲಿದೆ ಎಂದು ಗಿಲ್​ ವಿವರಿಸಿದ್ದಾರೆ.

*ರೋಹಿತ್​-ಕೊಹ್ಲಿ ಈಗಲೂ ಉತ್ತಮವಾಗಿ ಆಡುತ್ತಿದ್ದಾರೆ. ವಿಂಡೀಸ್​ ವಿರುದ್ಧದ ಕಳೆದ ಸರಣಿಯಲ್ಲಿ ಅವರ ಆಟ ಗಮನಿಸಿದ್ದೆ. ಹೀಗಾಗಿ ಅವರಿಗೆ ಬೌಲಿಂಗ್​ ಮಾಡುವಾಗ ಅತ್ಯಂತ ಶಿಸ್ತುಬದ್ಧವಾಗಿರುವಂತೆ ಮತ್ತು ಕಾರ್ಯತಂತ್ರಕ್ಕೆ ತಕ್ಕಂತೆ ಬೌಲಿಂಗ್​ ಮಾಡುವಂತೆ ಬೌಲರ್​ಗಳಿಗೆ ಸೂಚಿಸಿರುವೆ.

| ಮಿಚೆಲ್​ ಸ್ಯಾಂಟ್ನರ್​, ಕಿವೀಸ್​ ನಾಯಕ

ಮೊದಲ ಪಂದ್ಯಕ್ಕೆ ಕಾನ್​ವೇ ಅಲಭ್ಯ

ನ್ಯೂಜಿಲೆಂಡ್​ ಎಡಗೈ ಆರಂಭಿಕ ಡೆವೊನ್​ ಕಾನ್​ವೇ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅಭ್ಯಾಸದ ವೇಳೆ ಸಹ-ಆಟಗಾರ ಮ್ಯಾಟ್​ ಹೆನ್ರಿಗೆ ಆಕಸ್ಮಿಕ ಢಿಕ್ಕಿಯಾಗಿ ಕನ್​ಕಷನ್​ಗೆ ಒಳಗಾಗಿರುವ ಕಾರಣ ಅವರು ಹೊರಗುಳಿಯಲಿದ್ದು, ಕೊನೇ ಟಿ20ಯಲ್ಲಿ ಮಿಂಚಿದ ಟಿಮ್​ ಸೈರ್ಟ್​ ಬದಲಿಗರಾಗಿ ಆಡಲಿದ್ದಾರೆ.

ಏಕದಿನದಲ್ಲೂ ರನ್​ಮಳೆ ನಿರೀಕ್ಷೆ

ಈಡನ್​ ಪಾರ್ಕ್​ ಮೈದಾನದ ನೇರ ಬೌಂಡರಿ ಕೇವಲ 55 ಮೀ. ದೂರವಿದೆ. ಹೀಗಾಗಿ ಇದು ಹೆಚ್ಚಿನ ರನ್​ ತಂದುಕೊಡುವ ಜಾಗವಾಗಿದೆ. 4 ದಿನಗಳ ಹಿಂದಷ್ಟೇ ಇಲ್ಲಿ ನಡೆದ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್​, ಇದರ ಲಾಭವೆತ್ತಿ 259 ರನ್​ ಕಲೆಹಾಕಿತ್ತು. ಭಾರತವೂ ಆರಂಭಿಕ ಆಘಾತದ ನಡುವೆ 172 ರನ್​ ಸೇರಿಸಿತ್ತು. ಹೀಗಾಗಿ ಇದೀಗ ಏಕದಿನದಲ್ಲೂ ಅದೇ ರೀತಿ ರನ್​ಪ್ರವಾಹ ಮುಂದುವರಿಯುವ ನಿರೀಕ್ಷೆ ಇದೆ.