

ಬೆಂಗಳೂರು: ಸೆಲ್ವಮುರುಗನ್ ಬಿ. ಮೊದಲ ಆವೃತ್ತಿಯ ಬೆಂಗಳೂರು ಇಂಟರ್ನ್ಯಾಷನಲ್ ಗ್ರಾಂಡ್ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿಯ ಬಿ ಕೆಟಗರಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ತಮಿಳುನಾಡಿನ 23 ವರ್ಷದ ಸೆಲ್ವಮುರುಗನ್ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 10ನೇ ಹಾಗೂ ಅಂತಿಮ ಸುತ್ತಿನಲ್ಲಿ ಕರ್ನಾಟಕದ ಯಶ್ ಅಭಿಜಿತ್ ಪಾಟೀಲ್ ಎದುರು ಡ್ರಾ ಸಾಧಿಸುವ ಮೂಲಕ ಪ್ರಶಸ್ತಿ ಒಲಿಸಿಕೊಂಡರು. ಪುದುಚೇರಿಯ 12 ವರ್ಷದ ಮಾದೇಶ್ ಕುಮಾರ್ ಕೂಡ 9 ಅಂಕಗಳ ಸಮಬಲ ಸಾಧಿಸಿದರೂ, ಟೈ&ಬ್ರೇಕ್ ಸ್ಕೋರ್ನಲ್ಲಿ ಮೇಲುಗೈ ಸಾಧಿಸಿದ ಸೆಲ್ವಮುರುಗನ್ ಟ್ರೋಫಿ ಜತೆಗೆ 1.25 ಲಕ್ಷ ರೂ. ಬಹುಮಾನ ಗೆದ್ದುಕೊಂಡರು.
ಮಾದೇಶ್ ಕುಮಾರ್ ರನ್ನರ್ಅಪ್ ಟ್ರೋಫಿ ಜತೆಗೆ 1 ಲಕ್ಷ ರೂ. ಬಹುಮಾನ ಪಡೆದರು. ತಮಿಳುನಾಡಿನ ಮತ್ತೋರ್ವ ಆಟಗಾರ ಜೈದಂಬರೀಶ್ ಎನ್ಆರ್ (8.5 ಅಂಕ) 3ನೇ ಸ್ಥಾನದೊಂದಿಗೆ 80 ಸಾವಿರ ರೂ. ಗಳಿಸಿದರು.
ಟೂರ್ನಿಯ ಎ ಕೆಟಗರಿಯಲ್ಲಿ ಇನ್ನಷ್ಟು ರೋಚಕ ಪೈಪೋಟಿ ನಿರೀಸಲಾಗಿದೆ. ಎ ಕೆಟಗರಿಯ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 26ರಂದು ನಡೆಯಲಿದೆ.