ಚೊಚ್ಚಲ ಪಂದ್ಯದಲ್ಲಿ ಬ್ಯಾಟಿಂಗ್ ವೈಭವ: ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ 14 ವರ್ಷದ ಸೂರ್ಯವಂಶಿ

New Project (1) (1)
Published on

ಜೈಪುರ: ಸ್ಲಾಗ್ ಓವರ್‌ಗಳಲ್ಲಿ ವೇಗಿ ಆವೇಶ್ ಖಾನ್ (37ಕ್ಕೆ 3) ನಡೆಸಿದ ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರು 2 ರನ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರೆ, ಸತತ 4ನೇ ಸೋಲು ಕಂಡ ರಾಜಸ್ಥಾನ ರಾಯಲ್ಸ್ 8ನೇ ಸ್ಥಾನದಲ್ಲೇ ಉಳಿಯಿತು.

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಲಖನೌ 54 ರನ್‌ಗಳಿಗೆ ಅಗ್ರ ಮೂವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜತೆಗೂಡಿದ ಮಾರ್ಕ್ರಮ್ ಹಾಗೂ ಬಡೋನಿ ಸಮಯೋಚಿತ ಆಟದ ಬಲದಿಂದ 5 ವಿಕೆಟ್‌ಗೆ 180 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (74 ರನ್, 52 ಎಸೆತ, 5 ಬೌಂಡರಿ, 4 ಸಿಕ್ಸರ್) ಜೈಸ್ವಾಲ್ ಹಾಗೂ 14 ವರ್ಷದ ವೈಭವ್ ಒದಗಿಸಿದ ಭರ್ಜರಿ ಆರಂಭದ ನಡುವೆಯೂ ರಾಜಸ್ಥಾನ ತಂಡ 5 ವಿಕೆಟ್‌ಗೆ 178 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ ಸತತ 2ನೇ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ 9 ರನ್‌ಗಳಿಸಲಾಗದೆ ಗೆಲುವಿನ ಸನಿಹದಲ್ಲಿ ಮುಗ್ಗರಿಸಿತು.

14 ವರ್ಷದ ವೈಭವ್ ಪದಾರ್ಪಣೆ

ಬಿಹಾರ ಮೂಲದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ (14 ವರ್ಷ, 23 ದಿನ) ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ಕ್ರಿಕೆಟರ್ ಎನಿಸಿದರು. ಐಪಿಎಲ್ ಟೂರ್ನಿ ಶುಕ್ರವಾರವಷ್ಟೇ 18ನೇ ವರ್ಷಕ್ಕೆ ಕಾಲಿಟ್ಟಿದ್ದು, ಆ ನಂತರ ಅಂದರೆ 2011ರಲ್ಲಿ ಜನಿಸಿರುವ ವೈಭವ್ ಪದಾರ್ಪಣೆ ವಿಶೇಷ ಎನಿಸಿದೆ. ಜೈಸ್ವಾಲ್ ಜತೆಯಾಗಿ ಚೇಸಿಂಗ್‌ಗೆ ಇಳಿದ ಸೂರ್ಯವಂಶಿ

ಚೊಚ್ಚಲ ಪಂದ್ಯದಲ್ಲಿ ಬ್ಯಾಟಿಂಗ್ ವೈಭವ ತೋರಿದರು. ತಾನೆದುರಿಸಿದ ಮೊದಲ ಎಸೆತದಲ್ಲೇ ಎಕ್ಸ್‌ಟ್ರಾ ಕವರ್ಸ್‌ನಲ್ಲಿ ಸಿಕ್ಸರ್ ಬಾರಿಸಿದ ವೈಭವ್, 3 ಸಿಕ್ಸರ್, 2 ಬೌಂಡರಿ ಸಹಿತ 170ರ ಸ್ಟ್ರೈಕ್‌ರೇಟ್‌ನಲ್ಲಿ 34 ರನ್ ಗಳಿಸಿದರು. ರಾಜಸ್ಥಾನಕ್ಕೆ ಉತ್ತಮ ಆರಂಭ ಒದಗಿಸಿದ ವೈಭವ್ 9ನೇ ಓವರ್‌ನಲ್ಲಿ ಸ್ಟಂಪ್‌ಔಟ್ ಆದರು. ಡಗೌಟ್‌ಗೆ ಮರಳುವಾಗ ಭಾವುಕರಾಗಿ ಕಣ್ಣಿರು ಸುರಿಸಿದರು. ರಾಜಸ್ಥಾನ ತಂಡ ₹1.10 ಕೋಟಿ ನೀಡಿ ಮೆಗಾ ಹರಾಜಿನಲ್ಲಿ ವೈಭವ್‌ರನ್ನು ಖರೀದಿಸಿತ್ತು. ಪ್ರಯಾಸ್ ರೇ ಬರ್ಮನ್ (16 ವರ್ಷ, 157 ದಿನ) ಐಪಿಎಲ್ ಆಡಿದ ಹಿಂದಿನ ಕಿರಿಯ ಆಟಗಾರ.

10. ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ 10ನೇ ಬ್ಯಾಟರ್ ಎನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net