ಬೆಂಗಳೂರಿನಲ್ಲಿ ಅಖಿಲ ಭಾರತ ರಕ್ಷಣಾ ಲೆಕ್ಕಪತ್ರ ಇಲಾಖೆಯ ಕ್ರಿಕೆಟ್ ಟೂರ್ನಿಗೆ ಚಾಲನೆ

ಪುರುಷರು ಮತ್ತು ಮಹಿಳೆಯರ ದಕ್ಷಿಣ ವಲಯ ಪಂದ್ಯಾವಳಿ ಆರಂಭ; ಐದು ತಂಡಗಳ ನಡುವೆ ಪೈಪೋಟಿ
army sports
ಉದ್ಘಾಟನಾ ಸಮಾರಂಭದ ನೋಟಏಜೆನ್ಸಿ
Published on: 

ಬೆಂಗಳೂರು: ರಕ್ಷಣಾ ಲೆಕ್ಕಪತ್ರ ಇಲಾಖೆಯ 12ನೇ ಅಖಿಲ ಭಾರತ ಕ್ರಿಕೆಟ್ (ಪುರುಷರು ಮತ್ತು ಮಹಿಳೆಯರು) ಟೂರ್ನಿಯ ದಕ್ಷಿಣ ವಲಯ ಸುತ್ತಿಗೆ ಬೆಂಗಳೂರಿನಲ್ಲಿ ಸೋಮವಾರ ಚಾಲನೆ ದೊರೆಯಿತು.

ನಗರದ ರಾಜೇಂದ್ರ ಸಿಂಜಿ ಆರ್ಮಿ ಆಫೀಸರ್ಸ್ ಇನ್‌ಸ್ಟಿಟ್ಯೂಷನ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಧ್ವಜ ಹಾಗೂ ರಕ್ಷಣಾ ಲೆಕ್ಕಪತ್ರ ಕ್ರೀಡಾ ನಿಯಂತ್ರಣ ಮಂಡಳಿಯ ಧ್ವಜಾರೋಹಣ ಮತ್ತು ಡ್ರೋನ್ ಪ್ರದರ್ಶನ ಗಮನ ಸೆಳೆದವು.

ರಕ್ಷಣಾ ಸಚಿವಾಲಯದ ಅಧೀನದಲ್ಲಿ ರಕ್ಷಣಾ ಲೆಕ್ಕಪತ್ರ ಕ್ರೀಡಾ ನಿಯಂತ್ರಣ ಮಂಡಳಿ (DASCB) ನವದೆಹಲಿ ಆಯೋಜಿಸಿರುವ ಐದು ದಿನಗಳ ಪಂದ್ಯಾವಳಿಗೆ ಬೆಂಗಳೂರಿನ ಪ್ರಧಾನ ರಕ್ಷಣಾ ಲೆಕ್ಕಪತ್ರ ನಿಯಂತ್ರಕ ಪ್ರಮೋದ್ ಕುಮಾರ್ ನೇತೃತ್ವ ವಹಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಹ್ಲಾದ್ ರಾವ್ ಶ್ರೀನಿವಾಸ ಮೂರ್ತಿ ಭಾಗವಹಿಸಿದ್ದರು. ಮಿಲಿಟರಿ ಎಂಜಿನಿಯರಿಂಗ್ ಗ್ರೂಪ್ (MEG) ಬ್ಯಾಂಡ್‌ನ ಸಂಗೀತ ಪ್ರದರ್ಶನ, ಎನ್‌ಸಿಸಿ ಕೆಡೆಟ್‌ಗಳ ಆಕರ್ಷಕ ಪಥಸಂಚಲನ ಹಾಗೂ ಕರ್ನಾಟಕದ ಜಾನಪದ ನೃತ್ಯ ಕಾರ್ಯಕ್ರಮ ಸಮಾರಂಭಕ್ಕೆ ಮೆರುಗು ನೀಡಿದವು.

ಪಂದ್ಯಾವಳಿಯಲ್ಲಿ ಪಿಸಿಡಿಎ ಬೆಂಗಳೂರು, ಪಿಸಿಡಿಎ ಆರ್‌ ಆ್ಯಂಡ್‌ ಡಿ ಹೈದರಾಬಾದ್, ಸಿಡಿಎ ಚೆನ್ನೈ, ಸಿಡಿಎ ಆರ್‌ ಆ್ಯಂಡ್‌ ಡಿ ಬೆಂಗಳೂರು ಹಾಗೂ ಸಿಡಿಎ ಸಿಕಂದರಾಬಾದ್ ತಂಡಗಳು ಪಾಲ್ಗೊಳ್ಳುತ್ತಿವೆ.

ನ.16ರಿಂದ 18ರವರೆಗೆ ರಾಜೇಂದ್ರ ಸಿಂಜಿ ಆರ್ಮಿ ಆಫೀಸರ್ಸ್ ಇನ್‌ಸ್ಟಿಟ್ಯೂಷನ್ ಹಾಗೂ ಎಎಸ್‌ಸಿ ನಾರ್ತ್ ಕ್ರಿಕೆಟ್ ಮೈದಾನಗಳಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ನವೆಂಬರ್ 19ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ.

ರಕ್ಷಣಾ ಲೆಕ್ಕಪತ್ರ ಇಲಾಖೆಯ ಸಿಬ್ಬಂದಿಯಲ್ಲಿ ದೈಹಿಕ ಕ್ಷಮತೆ, ತಂಡದ ಮನೋಭಾವ, ಶಿಸ್ತು ಹಾಗೂ ಕ್ರೀಡಾಸ್ಫೂರ್ತಿ ಬೆಳೆಸುವ ಜತೆಗೆ ದಕ್ಷಿಣ ವಲಯದ ವಿವಿಧ ಘಟಕಗಳ ಸಿಬ್ಬಂದಿ ನಡುವೆ ಸೌಹಾರ್ದ ಮತ್ತು ಬಾಂಧವ್ಯ ವೃದ್ಧಿಸುವುದು ಈ ಪಂದ್ಯಾವಳಿಯ ಉದ್ದೇಶವಾಗಿದೆ.