

ಶಿವಮೊಗ್ಗ: ಸೊನ್ನೆ ಸುತ್ತಿದ 10 ಮಹಿಳಾ ಬ್ಯಾಟರ್‌ಗಳು.., ವೈಯಕ್ತಿಕ ಗರಿಷ್ಠ ಮೊತ್ತವೇ 2 ರನ್.., ಕ್ರಮವಲ್ಲದ ಎಸೆತ (ವೈಡ್)ಗಳಿಂದ ಬಂದ ಮೊತ್ತ 10 ರನ್... 13 ರನ್ ಗುರಿ ಪಡೆದು ಒಂದೇ ಓವರ್‌ನಲ್ಲಿ ಪಂದ್ಯ ಗೆದ್ದ ಎದುರಾಳಿ ತಂಡ.
ಇದು ಶಿವಮೊಗ್ಗ ಜೆಎನ್‌ಎನ್‌ಸಿಇ ಮೈದಾನದಲ್ಲಿ ನಡೆದ 15 ವರ್ಷದೊಳಗಿನ ಅಂತರ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ತಮಿಳುನಾಡು ಮತ್ತು ನಾಗಾಲ್ಯಾಂಡ್ ನಡುವಿನ ಉದ್ಘಾಟನಾ ಪಂದ್ಯವು ವಿಶಿಷ್ಟ ಅನಪೇಕ್ಷಿತ ದಾಖಲೆಗೆ ಸಾಕ್ಷಿಯಾಯಿತು. ಮೊದಲು ಬ್ಯಾಟ್ ಮಾಡಿದ ನಾಗಾಲ್ಯಾಂಡ್ 11.3 ಓವರ್‌ಗೆ 12 ರನ್‌ಗಳಿಗೆ ಆಲೌಟ್ ಆಯಿತು. ನೀತು ಚಟ್ರಿ 2 ರನ್ ಗಳಿಸಿದ್ದ ಗರಿಷ್ಠ ಸ್ಕೋರ್. ವೈಡ್ ರೂಪದಲ್ಲೇ 10 ರನ್ ದಾಖಲಾಯಿತು. ತಮಿಳುನಾಡು ತಂಡದ ಸೋನಿಕಾ 4 ರನ್ ನೀಡಿ ಆರು ವಿಕೆಟ್ ಪಡೆದರು. ಜೋಶ್ನ ಏಜಂಲ್ ಶ್ರೀಯಾ 6 ರನ್ ನೀಡಿ ಮೂರು ವಿಕೆಟ್ ಕಿತ್ತರು. ನೀತು ಚಟ್ರಿ ರನೌಟ್‌ಗೆ ಬಲಿಯಾದರು.
ಸುಲಭದ ಗುರಿ ಬೆನ್ನಟ್ಟಿದ ತಮಿಳುನಾಡು ತಂಡ ಕೇವಲ ಒಂದು ಓವರ್‌ನಲ್ಲೇ 13 ರನ್ ಗಳಿಸಿ 10 ವಿಕೆಟ್‌ಗಳ ಭರ್ಜರಿ ಗೆಲುವು
ದಾಖಲಿಸಿ ಶುಭಾರಂಭ ಮಾಡಿತು. ಕೆಎಸ್‌ಸಿಎ ಮೈದಾನಗಳಲ್ಲಿ ನಡೆದ ಮತ್ತೆರಡು ಪಂದ್ಯಗಳಲ್ಲಿ ಹೈದರಾಬಾದ್ ತಂಡವು ಬಿಹಾರ
ವಿರುದ್ಧ 9 ವಿಕೆಟ್‌ಗಳಿಂದ ಗೆದ್ದು ಬೀಗಿದರೆ, ಕೇರಳ ವಿರುದ್ಧ ಹರಿಯಾಣ ತಂಡವು 60 ರನ್‌ಗಳಿಂದ ಗೆಲುವು ಸಾಧಿಸಿ ಶುಭಾರಂಭ
ಮಾಡಿದವು.
ಪಂದ್ಯಾವಳಿಗೆ ಪಾಲಿಕೆ ಆಯುಕ್ತೆ ಚಾಲನೆ
ಕೆಎಸ್‌ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ)ಯ ಶಿವಮೊಗ್ಗದ ನವುಲೆ ಕ್ರೀಡಾಂಗಣ ಹಾಗೂ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಅಂತರ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಗುರುವಾರದಿಂದ ಆರಂಭಗೊಂಡಿದೆ. ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಅವರು ನವುಲೆಯ ಕೆಎಸ್‌ಇಎ ಕ್ರೀಡಾಂಗಣದಲ್ಲಿ ಹೈದರಾಬಾದ್ ಮತ್ತು ಬಿಹಾರ ನಡುವಿನ ಮೊದಲ ಪಂದ್ಯಕ್ಕೆ ಚಾಲನೆ ನೀಡಿದರು. ಕೆಎಸ್‌ಸಿಎ ವಲಯ ಮಾಜಿ ಸಂಚಾಲಕ, ಎಂಎಲ್‌ಸಿ ಡಿ.ಎಸ್.ಅರುಣ್, ಅಧ್ಯಕ್ಷ ರಾಜೇಂದ್ರ ಕಾಮತ್, ಸಂಚಾಲಕ ಎಚ್.ಎಸ್.ಸದಾನಂದ್, ಮಾಜಿ ಸಂಚಾಲಕ ಡಿ.ಆರ್.ನಾಗರಾಜ್, ಶಿವಮೊಗ್ಗ ಅಂಪೈರ್ ಸುಬ್ರಹ್ಮಣ್ಯ, ಮಾಧ್ಯಮ ಪ್ರಮುಖ ಗೋಪಾಲಕೃಷ್ಣ ಉಪಸ್ಥಿತರಿದ್ದರು.