

ನವದೆಹಲಿ: ಕರೊನಾ ಹಾವಳಿಯಿಂದಾಗಿ ಈ ಬಾರಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಪ್ರವೇಶ ಇರಲಿಲ್ಲ. ಇದರ ಜತೆಗೆ ಚಿಯರ್‌ಲೀಡರ್‌ಗಳ ಕುಣಿತವೂ ಇರಲಿಲ್ಲ. ಆದರೂ ಐಪಿಎಲ್ 13ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮಾತ್ರ ಚಿಯರ್‌ಲೀಡರ್ ಅನ್ನು ಹೊಂದಿತ್ತಂತೆ! ಅಲ್ಲದೆ ಆ ಚಿಯರ್‌ಲೀಡರ್‌ಗೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆಯನ್ನೂ ನೀಡಿದೆಯಂತೆ! ಆ ಚಿಯರ್‌ಲೀಡರ್ ಹೆಸರು ಗ್ಲೆನ್ ಮ್ಯಾಕ್ಸ್‌ವೆಲ್ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮಾಷೆಯಾಗಿ ಹೇಳುವ ಮೂಲಕ ಆಸ್ಟ್ರೇಲಿಯಾದ ಆಲ್ರೌಂಡರ್‌ಗೆ ಟಾಂಗ್ ನೀಡಿದ್ದಾರೆ.
ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬರೋಬ್ಬರಿ 10.75 ಕೋಟಿ ರೂಪಾಯಿ ನೀಡಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿತ್ತು. ಆದರೆ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ ಅವರಿಂದ ನಿರೀಕ್ಷಿತ ಆಟ ಬಂದಿರಲಿಲ್ಲ. ಹೀಗಾಗಿ ಸೆಹ್ವಾಗ್ ಅವರು, ಮ್ಯಾಕ್ಸ್‌ವೆಲ್ ತಂಡದ ಪಾಲಿಗೆ ಕೇವಲ ಚಿಯರ್‌ಲೀಡರ್‌ನಂತೆ ಮಾತ್ರ ಇದ್ದರು ಎಂದು ಹೇಳಿದ್ದಾರೆ.
ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪರ ಆಡಿದ 13 ಪಂದ್ಯಗಳಲ್ಲಿ ಒಟ್ಟು 108 ರನ್ ಮಾತ್ರ ಸಿಡಿಸಿದ್ದರು. 101.88ರ ಸ್ಟ್ರೈಕ್‌ರೇಟ್ ಮತ್ತು 15.42ರ ಸರಾಸರಿಯಲ್ಲಿ ಅವರು ರನ್ ಗಳಿಸಿದ್ದರು. ಐಪಿಎಲ್ ವೇಳೆ ಜನಪ್ರಿಯಗೊಂಡ ಸೆಹ್ವಾಗ್ ಅವರ ‘ವೀರೂ ಕಿ ಬೈಠಕ್’ ಇನ್‌ಸ್ಟಾಗ್ರಾಂ ಕಾರ್ಯಕ್ರಮದಲ್ಲಿ, ‘10 ಕೋಟಿ ರೂ. ಮೊತ್ತದ ಚಿಯರ್‌ಲೀಡರ್ ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಅತ್ಯಂತ ದುಬಾರಿಯಾದರು. ಯುಎಇಯಲ್ಲಿ ರಜಾದಿನಗಳನ್ನು ಆನಂದಿಸಲು ಮ್ಯಾಕ್ಸ್‌ವೆಲ್ ಅವರಿಗೆ ಪಂಜಾಬ್ ತಂಡ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಾವತಿಸಬೇಕಾಯಿತು’ ಎಂದು ಛೇಡಿಸಿದ್ದಾರೆ.