

ರಾಘವೇಂದ್ರ ಪೈ ಕುಂದಾಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳ ವಯೋಮಿತಿ ಈ ವರ್ಷದಿಂದ ಬದಲಾದ ಕಾರಣ ಪ್ರಾಥಮಿಕ ಶಾಲಾ ಮಕ್ಕಳು ಪ್ರೌಢಶಾಲೆ ಮಕ್ಕಳೊಂದಿಗೆ ಪಂದ್ಯಗಳನ್ನು ಆಡುವಂತಾಗಿದೆ. ವಯೋಮಿತಿಯ ಆಧಾರದಲ್ಲಿ ಕ್ರೀಡಾಕೂಟ ನಡೆಸುತ್ತಿರುವುದರಿಂದ 14ರ ವಯೋಮಿತಿ ಒಳಗಿನ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರೌಢಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳೂ ಭಾಗವಹಿಸುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳು ತಮಗಿಂತ ಹಿರಿಯ ಹಾಗೂ ಬಲಿಷ್ಠರೊಂದಿಗೆ ಸೆಣಸಾಡಿ ಗೆಲುವು ಸಾಧಿಸುವುದು ಸುಲಭವಿಲ್ಲ.
ಈ ಹಿಂದೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿಭಾಗದಲ್ಲಿ ಕ್ರೀಡಾಕೂಟಗಳು ನಡೆಯುತ್ತಿದ್ದವು. ಆದರೆ ಈ ವರ್ಷ ಮಕ್ಕಳ ವಯೋಮಾನ ಪರಿಗಣಿಸಿ ಕ್ರೀಡಾಕೂಟ ನಡೆಸಲಾಗುತ್ತಿದೆ. ಈಗಾಗಲೇ ವಲಯ ಮಟ್ಟದ ಕ್ರೀಡಾಕೂಟ ಆರಂಭವಾಗಿದ್ದು ಪ್ರೌಢಶಾಲೆಗಳಿಂದ ಭಾಗವಹಿಸಿದ ತಂಡಗಳೇ ಬಹುತೇಕ ಕಡೆ ಜಯಶಾಲಿಯಾದವು. 8, 9ನೇ ತರಗತಿಯ ಪ್ರೌಢಶಾಲಾ ವಿದ್ಯಾರ್ಥಿಗಳ ವಯೋಮಾನ 14ರ ಒಳಗಿದ್ದರೂ ಅವರ ಕ್ರೀಡಾಕೂಟ ಅನುಭವ ಹೆಚ್ಚಿರುವುದರಿಂದ ಹಾಗೂ ದೈಹಿಕವಾಗಿಯೂ ಪ್ರಾಥಮಿಕ ಶಾಲೆ ಮಕ್ಕಳಿಗಿಂತ ಬಲಿಷ್ಠವಾಗಿರುವುದರಿಂದ ಗೆಲುವು ಸುಲಭಸಾಧ್ಯ. ಕಬಡ್ಡಿ ಆಟದಲ್ಲಿ ಹೈಸ್ಕೂಲ್ ಮಕ್ಕಳ ರೈಡ್‌ಗೆ ಪ್ರಾಥಮಿಕ ಶಾಲಾ ಮಕ್ಕಳು 5, 6 ಅಡಿ ಅಂಕಣದಿಂದ ಹೊರಗೆ ಹೋಗಿ ಬೀಳುತ್ತಿದ್ದ ಉದಾಹರಣೆಗಳಿವೆ. ವಾಲಿಬಾಲ್‌ನಲ್ಲಿ ಹಿರಿಯ ವಿದ್ಯಾರ್ಥಿಗಳು ಎಸೆದ ಬಾಲ್ ರಿಸೀವ್ ಮಾಡಲೂ ಕಿರಿಯ ವಿದ್ಯಾರ್ಥಿಗಳು ಒದ್ದಾಡುತ್ತಿದ್ದರು. ಕಿರಿಯ ವಯಸ್ಸಿನ ವಿದ್ಯಾರ್ಥಿಗಳು ತಮಗಿಂತ ಹಿರಿಯರಾದ ಬಲಿಷ್ಠರೊಂದಿಗೆ ಹೋರಾಡುವುದ ಕಷ್ಟಸಾಧ್ಯ. ಕೆಲವೊಮ್ಮೆ ದೈಹಿಕವಾಗಿ ಪೆಟ್ಟಾಗುವ ಸಾಧ್ಯತೆಗಳೂ ಹೆಚ್ಚಿರುತ್ತದೆ.
ಈ ಮೊದಲಿನಂತೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ 6 ಮತ್ತು 7ನೇ ತರಗತಿಯ ಮಕ್ಕಳಿಗೆ ಮಾತ್ರ ಆಡಲು ಅವಕಾಶ ನೀಡಬೇಕು. 14 ವರ್ಷ ಒಳಗಿನ 8 ಮತ್ತು 9ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕ ತಾಲೂಕು ಮಟ್ಟದ ಕ್ರೀಡಾಕೂಟ ಮಾಡಿ ಎರಡು ತಂಡವನ್ನು ಆಯ್ಕೆ ಮಾಡುವುದು. ಗೆದ್ದ 2 ತಂಡ ಮತ್ತು ವಲಯ ಮಟ್ಟದಲ್ಲಿ ಗೆದ್ದಿರುವ ತಂಡಗಳನ್ನು ಸೇರಿಸಿ ತಾಲೂಕು ಮಟ್ಟದ ಕ್ರೀಡಾಕೂಟ ಮಾಡಿ ಗೆದ್ದ ತಂಡದ ಜತೆ ಶೇ.30ರಷ್ಟು ಮಕ್ಕಳನ್ನು ಆಯ್ಕೆ ಮಾಡಿ ಜಿಲ್ಲಾಮಟ್ಟಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಆಗಬೇಕು. ಆಗ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ಮಕ್ಕಳ ಪ್ರಯತ್ನಕ್ಕೆ ಫಲ ಸಿಕ್ಕಂತಾಗುತ್ತದೆ. ಅಥವಾ 17ರ ವಯೋಮಿತಿಗೆ 10ನೇ ತರಗತಿ ಇರುವ ಹಾಗೆ 14ರ ವಯೋಮಿತಿಗೆ 7ನೇ ತರಗತಿ ಇರುವಂತೆ ಮಾಡಬೇಕು. ಇಲ್ಲವಾದರೆ ವಯೋಮಿತಿ 13 ಎಂದಾದರೂ ಬದಲಾಯಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.
ಡಾ.ಎಲ್.ಆರ್.ವೈದ್ಯನಾಥನ್ ವರದಿ ಪ್ರಕಾರ 6ರಿಂದ 10ನೆ ತರಗತಿವರೆಗೆ ದೈಹಿಕ ಶಿಕ್ಷಣ ಕಡ್ಡಾಯಯವಾಗಿ ಬೋಧಿಸಬೇಕು. ಪ್ರತಿಯೊಂದು ಹಿ.ಪ್ರಾ. ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು ಎಂದಿದೆ. ಆದರೆ, 200ಕ್ಕಿಂತ ಕಡಿಮೆ ಮಕ್ಕಳಿದ್ದರೆ, 7 ಸಹ ಶಿಕ್ಷಕರಿದ್ದರೆ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಖ್ಯೆ ಹೆಚ್ಚುವರಿ ಎಂದು ದೈಹಿಕ ಶಿಕ್ಷಣ ಶಿಕ್ಷಕರನ್ನು ವರ್ಗಾವನೆ ಮಾಡಲಾಗಿದೆ. ಇದರಿಂದಾಗಿ 7ನೇ ತರಗತಿವರೆಗೆ ಮಾತ್ರ ಇರುವ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ಇಲ್ಲದಂತಾಗಿದೆ.
ರಾಜ್ಯದ 39,308 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. 43,492 ಪ್ರಾಥಮಿಕ ಶಾಲೆಗಳ ಪೈಕಿ 4,752 ದೈಹಿಕ ಶಿಕ್ಷಣ ಶಿಕ್ಷಕರು, 4,696 ಪ್ರೌಢಶಾಲೆಗಳ ಪೈಕಿ 4,128 ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಈ ವರ್ಷ ಹಾಗೂ ಕಳೆದ ವರ್ಷದಲ್ಲಿ ಅನೇಕರು ನಿವೃತ್ತರಾಗಿದ್ದರೆ, ಕೆಲವರು ವಿಷಯ ಪರಿವೀಕ್ಷಕರಾಗಿ ಭಡ್ತಿ ಹೊಂದಿದ ಕಾರಣ ಶಿಕ್ಷಕರ ಕೊರತೆ ಉಂಟಾಗಿದೆ. 2007ರ ನಂತರ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಆಗಿಲ್ಲ. 2017ರಲ್ಲಿ ಪ್ರೌಢಶಾಲೆಗೆ 250 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಬಿಟ್ಟರೆ ಬೇರೆ ನೇಮಕಾತಿ ನಡೆದಿಲ್ಲ. ನಿಯಮಾನುಸಾರ 2 ಸಾವಿರ ಪ್ರಾಥಮಿಕ, 1,500 ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಆಗಬೇಕಿದೆ.
ಈವರೆಗೆ ಯಾರಿಂದಲೂ ಕ್ರೀಡಾಕೂಟದ ವಯೋಮಿತಿ ಬದಲಿಸುವಂತೆ ಮನವಿ ಬಂದಿಲ್ಲ. ಮನವಿ ಬಂದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು. - ಸಿ.ಲೋಕೇಶ್, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ, ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ಈ ರೀತಿ ಪಂದ್ಯಾವಳಿ ನಡೆಸುವುದಾದರೆ ಅನೇಕ ಶಾಲೆಯಿಂದ ಯಾವ ಕ್ರೀಡಾಕೂಟಕ್ಕೂ ಮಕ್ಕಳನ್ನು ಕಳುಹಿಸುವುದಿಲ್ಲ. ಈ ರೀತಿಯ ಕಸರತ್ತುಗಳನ್ನು ಮಾಡುವ ಮುನ್ನ ಶಿಕ್ಷಣ ಇಲಾಖೆ ಯೋಚಿಸಬೇಕು. ಈ ಬಗ್ಗೆ ಮನವಿ ಸಲ್ಲಿಸಲಾಗುವುದು. -ಅಬ್ದುಲ್ ಸಲಾಂ ಚಿತ್ತೂರು, ಜಿಲ್ಲಾಧ್ಯಕ್ಷ, ಶಾಲಾಭಿವೃದ್ಧಿ ಸಮಿತಿ ಸಮನ್ವಯ ವೇದಿಕೆ https://www.vijayavani.net/raksha-bandhan-celebration-with-mescom-staff https://www.vijayavani.net/aati-nenehu-program-by-kaup-bunt-association