ಶಿರ್ವ: ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಕ್ರೀಡೆಗೆ ಮಹತ್ತರವಾದ ಸ್ಥಾನವಿದೆ. ಕ್ರೀಡೆಯಲ್ಲಿ ದೈಹಿಕ ಹಾಗೂ ಮಾನಸಿಕವಾಗಿಯೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯವಂತ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಉಡುಪಿ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ವಿಭಾಗ ) ಮತ್ತು ಶಿರ್ವ ಹಿಂದು ಪದವಿಪೂರ್ವ ಕಾಲೇಜು, ಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಕಾಲೇಜಿನ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪದವಿಪೂರ್ವ ವಿಭಾಗದ ಬಾಲಕ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಶಿರ್ವ ಪದವಿ ಪೂರ್ವ ಕಾಲೇಜಿನ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಉಡುಪಿ ಜಿಲ್ಲಾ ಪ.ಪೂ. ದೈಹಿಕ ಶಿಕ್ಷಕ ಉಪನ್ಯಾಸಕರ ಸಂಘ ಅಧ್ಯಕ್ಷ ಸತೀಶ್ ಹೆಗ್ಡೆ, ಶಿರ್ವ ಗ್ರಾ.ಪಂ ಅಧ್ಯಕ್ಷೆ ಸವಿತಾ ಪೂಜಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು ಸುಪ್ರೀತಾ ಅವಿನಾಶ್, ಗ್ರಾ.ಪಂ ಸದಸ್ಯ ರತನ್ ಶೆಟ್ಟಿ, ಕಾಪು ತಾಲ್ಲೂಕು ಕ್ರೀಡಾ ಮೇಲ್ವಿಚಾರಕ ಜೋಸೆಫ್ ಡಿಸೋಜ, ಜ್ಞಾನ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಅಕಾಡೆಮಿಕ್ ಮುಖ್ಯಸ್ಥ ಗುರುಪ್ರಸಾದ್, ಕಾಲೇಜು ಪ್ರಾಂಶುಪಾಲ ಸುಂದರ ಮೇರ, ದೈಹಿಕ ಶಿಕ್ಷಣ ಉಪನ್ಯಾಸಕ ದೇವೇಂದ್ರ ಹೆಗ್ಡೆ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ ವಿಜೇತರಿಗೆ ಬಹುಮಾನ ವಿತರಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ನಿಶಿತಾ ನಿರೂಪಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಶರಣ್ಯಾ ರಾವ್ ವಂದಿಸಿದರು.
ಬಾಲಕರ ವಿಭಾಗದಲ್ಲಿ ಶಿರ್ವ ಹಿಂದು ಪದವಿಪೂರ್ವ ಕಾಲೇಜು ಪ್ರಥಮ, ಅದಮಾರು ಪೂರ್ಣಪ್ರಜ್ಞ ಪ.ಪೂ. ಕಾಲೇಜು ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಶಂಕರಪುರ ಸೇಂಟ್ ಜಾನ್ಸ್ ಪ.ಪೂ.ಕಾಲೇಜು ಪ್ರಥಮ, ಕಟಪಾಡಿ ತ್ರಿಶಾ ಪ.ಪೂ.ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.