

ನೆಗೆಟಿವ್ ಥಾಟ್ಸ್ ಅನ್ನೋದು ನಿಮ್ಮನ್ನು ಹೆದರಿಸುವ ಸಿಂಹ, ಹುಲಿ, ಚಿರತೆ ಇದ್ದ ಹಾಗೆ. ಅದರ ಬಾಯೊಳಗೆ ನಾವು ನಮ್ಮ ತಲೆಯನ್ನು ಕೊಟ್ಟು ಬಲಿಯಾಗಬಾರದು. ಮಧ್ಯೆ ಬೇಲಿ ಹಾಕಿಕೊಂಡು, ದೂರದಿಂದಲೇ ನೋಡಿ, ಜಾಗ ಖಾಲಿ ಮಾಡುವುದನ್ನು ಕಲಿಯಬೇಕು. ನಾವು ಯಾವ ಸಿಂಹ, ಹುಲಿ, ಚಿರತೆಗೆ ಹೆದರುತ್ತೀವೋ, ಅದನ್ನೇ ಬೆಕ್ಕಿನ ಮರಿ ಅನ್ನೋ ತರಹ ಕೆಲವರು ಪಳಗಿಸಿ, ಮುದ್ದಾಡುವುದನ್ನು ವಿಡಿಯೋಗಳಲ್ಲಿ ನೋಡಿರುತ್ತೇವೆ. ಆ ವನ್ಯಜೀವಿಗಳು ಎಷ್ಟೇ ಕ್ರೂರವಾದರೂ, ಅವನ್ನು ಪಳಗಿಸಿದರೆ ನಮ್ಮ ಜತೆಗೆ ಪ್ರೀತಿಯಿಂದ ಇರುತ್ತವೆ. ಅದೇ ರೀತಿ ಈ ನಕಾರಾತ್ಮಕ ಚಿಂತನೆಗಳು ಎಂಬ ಕ್ರೂರ ಮೃಗಗಳನ್ನು ಪಳಗಿಸುವುದನ್ನು ನಾವು ಕಲಿಯಬೇಕು. ಏಕೆಂದರೆ, ನಕಾರಾತ್ಮಕ ಚಿಂತನೆಗಳು ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ಒಂದಲ್ಲ ಒಂದು ಹಂತದಲ್ಲಿ ಕಾಡುತ್ತದೆ. ಪ್ರತಿಯೊಬ್ಬರಿಗೂ ಬೇರೆಬೇರೆ ರೂಪಗಳಲ್ಲಿ ಬಂದೇ ಬರುತ್ತದೆ. ಅದಕ್ಕೆ ಹೆದರಿಕೊಂಡು ಕೂರುವ ಬದಲು, ಅದನ್ನು ಪಳಗಿಸುವುದಕ್ಕೆ ಕಲಿಯಬೇಕು.
ಉದಾಹರಣೆಗೆ, ಕೆಲವರಿಗೆ ತಮ್ಮ ಮೇಲೆಯೇ ಅನುಮಾನ ಇರುತ್ತದೆ. ನಾನು ಅವನಷ್ಟು ಬುದ್ಧಿವಂತ ಅಲ್ಲ, ಅವಳಷ್ಟು ಸುಂದರ ಇಲ್ಲ, ನಾನು ದಪ್ಪ, ನಾನು ದಡ್ಡ, ನಾನು ಸೋಡಾಬುಡ್ಡಿ ... ಹೀಗೆ ನಮ್ಮ ಬಗ್ಗೆಯೇ ನಮಗೆ ನಕಾರಾತ್ಮಕ ಯೋಚನೆಗಳು ಇರುತ್ತವೆ. ಕೆಲವರಿಗೆ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುವ ಚಾಳಿ ಇರುತ್ತದೆ. ಅವನಿಗೆ ಆ ಬಿಜಿನೆಸ್ ಡೀಲ್ ಸಿಗಬಾರದು, ಅವಳು ಬೆಳೆಯೋದನ್ನ ತಡೀಬೇಕು, ಅವನಿಗೆ ಆಸ್ತಿಯಲ್ಲಿ ಸಿಗಬೇಕಾದ ಪಾಲು ಸಿಗುವುದಕ್ಕೆ ಬಿಡಬಾರದು ... ಹೀಗೆ ಹಲವು ಪ್ರಾಣಿಗಳ ಕಿರುಚಾಟ, ಕೂಗಾಟ ನಮ್ಮ ತಲೆಯಲ್ಲಿ ಕೇಳಿಸುತ್ತಲೇ ಇರುತ್ತದೆ. ಇದು ಪ್ರತಿಯೊಬ್ಬರಲ್ಲೂ ಸಹಜ. ಆದರೆ, ಅದನ್ನ ನಾವು ಹೇಗೆ ಹ್ಯಾಂಡಲ್ ಮಾಡುತ್ತೇವೆ ಎನ್ನುವುದು ಮುಖ್ಯ. ಪ್ರಮುಖವಾಗಿ ನಾನು ಗಮನಿಸಿರುವಂತೆ ಇಂದಿನ ಸೋಷಿಯಲ್ ಮೀಡಿಯಾದಿಂದ ಯುವಜನತೆಯಲ್ಲಿ ಈ ನಕಾರಾತ್ಮಕ ಯೋಚನೆಗಳು ಹೆಚ್ಚುತ್ತಿವೆ. ಅದರಿಂದ ಹೊರಬಂದು, ಸಕಾರಾತ್ಮಕವಾಗಿ ಯೋಚಿಸದಿದ್ದರೆ, ನಾವು ಬೆಳೆಯುವುದು, ಜೀವನದಲ್ಲಿ ಮುಂದೆ ಬರುವುದು ಬಹಳ ಕಷ್ಟ.
ಈ ನಕಾರಾತ್ಮಕ ಯೋಚನೆಗಳಿಂದ ಹೊರಬರುವುದು ಹೇಗೆ? ನೀವು ಮನೇಲಿ ಟಿವಿ ನೋಡ್ತಿರ್ತೀರಾ. ಯಾವುದೋ ಚಾನಲ್ನಲ್ಲಿ ಯಾವುದೋ ಒಂದು ದೃಶ್ಯ ನಿಮಗೆ ಅಷ್ಟು ಇಷ್ಟ ಆಗ್ಲಿಲ್ಲ ಅಂತಿಟ್ಟುಕೊಳ್ಳಿ. ಆಗ ಏನ್ಮಾಡ್ತೀರಾ? ಚಾನಲ್ ಚೇಂಜ್ ಮಾಡ್ತೀರ ಮತ್ತು ನಿಮಗಿಷ್ಟವಾದ ಚಾನಲ್ಗೆ ಶಿಫ್ಟ್ ಆಗ್ತೀರ. ಅದೇ ತರಹ ನಿಮ್ಮ ಮನಸ್ಸಿನಲ್ಲಿ ದುರಾಲೋಚನೆಗಳು ಬಂದಾಗ ದಯವಿಟ್ಟು ಮನಸ್ಸಿನ ಚಾನಲ್ ಬದಲಾಯಿಸಿ. ಪಾಸಿಟಿವ್ ಚಾನಲ್ಗೆ ಶಿಫ್ಟ್ ಆಗಿ. ಯಾವ ಚಾನಲ್ಗೆ ಹೋಗಬೇಕು ಅಂತ ಹೇಳ್ಲಾ? ನಿನ್ನೆ ರಾತ್ರಿ ಕೋಟ್ಯಂತರ ಜನ ಮಲಗಿದರು. ಅದರಲ್ಲಿ ಇಂದು ಬೆಳಿಗ್ಗೆ ಕೆಲವರು ಏಳಲೇ ಇಲ್ಲ. ನೀವು ಎದ್ದಿದ್ದೀರಾ, ಉಸಿರಾಡ್ತಿದ್ದೀರಾ ಮತ್ತು ಪೇಪರ್ ಓದ್ತಿದ್ದೀರಾ ... ಇದಕ್ಕಿಂತ ಒಳ್ಳೆಯ ಯೋಚನೆ ಬೇಕಾ? ಇದಕ್ಕಿಂತ ಇನ್ನೊಂದು ದೊಡ್ಡ ವರ ಬೇಕಾ? ಚಪ್ಪಲಿ ಇಲ್ಲ ಅಂತ ಕೊರಗೋ ಬದಲು ಕಾಲಿದೆ ಅಂತ ಖುಷಿಪಡಿ. ಎರಡು ವಸ್ತುಗಳು ಒಂದೇ ಜಾಗದಲ್ಲಿ ಒಂದೇ ಸಮಯದಲ್ಲಿ ಇರೋಕೆ ಸಾಧ್ಯವಿಲ್ಲ ಎಂದು ಫಿಸಿಕ್ಸ್ನಲ್ಲಿ ಓದಿದ್ದು ನೆನಪಿರಬಹುದು. ಇದು ಮನಸ್ಸಿಗೂ ಅನ್ವಯಿಸುತ್ತೆ. ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಬಂದಾಗ, ಆ ಜಾಗದಲ್ಲಿ ಸಕಾರಾತ್ಮಕ ಯೋಚನೆಗಳನ್ನು ತುರುಕಿಕೊಳ್ಳಿ. ಆಗ ನಕಾರಾತ್ಮಕ ವಿಷಯಗಳು ಆಟೋಮ್ಯಾಟಿಕ್ ಆಗಿ ಜಾಗ ಖಾಲಿ ಮಾಡುತ್ತವೆ. ಇದು ಕಷ್ಟದ ಕೆಲಸ ಅಂತ ನನಗೆ ಗೊತ್ತಿದೆ. ಅಭ್ಯಾಸ ಮಾಡಿಕೊಂಡರೆ ಖಂಡಿತಾ ಸಾಧ್ಯ. ಇದಕ್ಕಿಂತ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ, ಅದು ಅನವಶ್ಯಕ ಹೋಲಿಕೆ. ನಾವು ಪದೇಪದೇ ಇನ್ನೊಬ್ಬರ ಜೊತೆಗೆ ಹೋಲಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಲೇ ಇರುತ್ತೇವೆ. ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಚೆನ್ನೈನಲ್ಲಿ ಒಂದು ಅಪಾರ್ಟ್ವೆುಂಟ್ನಲ್ಲಿ ವಾಸವಿದ್ದೆ. ಒಂದು ಮನೆಯಲ್ಲಿ ಒಬ್ಬರು ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಅವರದ್ದು 9-6 ಕೆಲಸ. ಇನ್ನೊಂದರಲ್ಲಿ ಒಬ್ಬರು ಬಿಜಿನೆಸ್ವ್ಯಾನ್. ಅವರ ಕೆಲಸಕ್ಕೆ ನಿರ್ದಿಷ್ಟ ಸಮಯ ಇರಲಿಲ್ಲ. ಬ್ಯಾಂಕ್ನಲ್ಲಿ ಕೆಲಸ ಮಾಡೋರಿಗೆ, ಆ ವ್ಯಾಪಾರಿ ತರಹ ಇರೋ ಆಸೆ. ಏಕೆಂದರೆ, ಎಷ್ಟು ಹೊತ್ತಿಗೆ ಬೇಕಾದರೂ ಹೋಗಬಹುದು, ಎಷ್ಟು ಹೊತ್ತಿಗೆ ಬೇಕಾದರೂ ಬರಬಹುದು. ಇನ್ನು ಆ ವ್ಯಾಪಾರಿಗೆ ಹೀರೋ ಆಗೋ ಆಸೆ. ‘ನನಗೂ ನಿಮ್ ತರಹ ಹೀರೋ ಆಗಿ ಸ್ವಿಜರ್ಲ್ಯಾಂಡ್ನಲ್ಲಿ ಹೀರೋಯಿನ್ ಜೊತೆಗೆ ಮರ ಸುತ್ತಬೇಕು’ ಎನ್ನುತ್ತಿದ್ದರು. ಬಿಲ್ಡಿಂಗ್ನ ವಾಚ್ವ್ಯಾನ್ ಇಡೀ ದಿನ ತನ್ನ ಕುಟುಂಬದವರೊಂದಿಗೆ ಇರುವುದನ್ನು ನೋಡಿ, ನಾನು ಸಹ ಮನೆಯಿಂದಲೇ ಏನಾದರೂ ಕೆಲಸ ಮಾಡುವಂತಿದ್ದರೆ ಚೆನ್ನ ಎಂದು ನನ್ನ ಮನೆಯವರು ಆಸೆಪಡುತ್ತಿದ್ದರು.
ಹೀಗೆ ಪ್ರತಿಯೊಬ್ಬರೂ ಇನ್ನೊಬ್ಬರ ಜತೆಗೆ ಹೋಲಿಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಒಳ್ಳೆಯ ಜೀವನ ಇನ್ನೆಲ್ಲೋ ಇದೆ ಎಂದು ಕನಸು ಕಾಣುತ್ತಿರುತ್ತೇವೆ. ಹೀಗೆ ಇನ್ನೊಬ್ಬರ ಜತೆಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು, ಇರುವ ಜಾಗದಲ್ಲೇ, ನಾವು ಮಾಡುತ್ತಿರುವ ಕೆಲಸವನ್ನೇ ಇನ್ನೂ ಶ್ರೇಷ್ಠವಾಗಿ ಹೇಗೆ ಮಾಡಬಹುದು ಎಂದು ನಾವು ಯೋಚಿಸುವುದೇ ಇಲ್ಲ. ಏಕೆಂದರೆ, ಈ ಹೋಲಿಕೆಗಳಿಗೆ ಕೊನೆಯೇ ಇರೋದಿಲ್ಲ. ನೀವ್ಯಾರಾದರೂ ಸರಿ, ನಿಮಗಿಂತ ಒಬ್ಬ ಶ್ರೀಮಂತನಿದ್ದರೆ, ಬಡವನೂ ಇದ್ದೇ ಇರ್ತಾನೆ. ನಿಮಗಿಂತ ಬುದ್ಧಿವಂತ ಹೇಗಿರುತ್ತಾನೋ, ಹಾಗೆಯೇ ದಡ್ಡನೂ ಇರ್ತಾನೆ. ಹೀಗಿರುವಾಗ ಅನವಶ್ಯಕ ಹೋಲಿಕೆ ಬಿಟ್ಟು, ಸರಿಯಾದ ಹೋಲಿಕೆ ಮಾಡಿಕೊಳ್ಳುವುದಕ್ಕೆ ಮುಂದಾಗಬೇಕು. ಸರಿಯಾದ ಹೋಲಿಕೆ ಎಂದರೇನು? What you are and What you can be? ಅಂತ. ಅಂದರೆ, ಈ ಹಿಂದೆ ನಾವೇನಾಗಿದ್ದೆವು, ಈಗೇನಾಗಿದ್ದೇವೆ, ಮುಂದೆ ಏನಾಗಬಹುದು ಎಂದು ನಮ್ಮನ್ನು ನಾವೇ ಹೋಲಿಕೆ ಮಾಡಿಕೊಳ್ಳುವುದೇ ನಿಜವಾದ ಹೋಲಿಕೆ.
ನೀವು ಯಾರೇ ಆಗಿರಬಹುದು. ನಟ, ಗೃಹಿಣಿ, ಆಟೋ ಡ್ರೖೆವರ್... ಹೀಗೆ ಏನೇ ಇರಬಹುದು. ಈಗಾಗಲೇ ನಿಮ್ಮೊಳಗೊಬ್ಬ ಶ್ರೇಷ್ಠವಾದ ವ್ಯಕ್ತಿ ಇದ್ದಾನೆ. 2021ರಲ್ಲಿ ಅವನು ಅಥವಾ ಅವಳನ್ನು ಇನ್ನಷ್ಟು ಹೊರಗೆ ತೆಗೆಯಬೇಕು. ನಿಮ್ಮ ಒಳಗಿರುವ ಮತ್ತು ಅಡಗಿರುವ ಸಾಧ್ಯತೆಗಳು ಹೊರಬರಬೇಕು. ಹೊಸ ವರ್ಷದಲ್ಲಿ ನಿಮ್ಮ ವಿಶ್ವರೂಪ ದರ್ಶನದ ಪರಿಚಯ ಇಡೀ ಪ್ರಪಂಚಕ್ಕಾಗಲಿ. 2021 ನಿಮ್ಮ ಜೀವನದ ಅತೀ ಶ್ರೇಷ್ಠ ವರ್ಷವಾಗಲಿ. ನಿಮ್ಮ ಕನಸಿನ ಉತ್ತಮ ಜೀವನ ನಿಮ್ಮದಾಗಲಿ. ಹಿತವಾದ ಸಂಬಂಧಗಳು, ನವಿರಾದ ಪ್ರೀತಿ, ಆದರ್ಶಮಯವಾದ ಆರೋಗ್ಯ ಮತ್ತು ನೆಮ್ಮದಿ ನಿಮ್ಮದಾಗಲಿ. ಸಕಾರಾತ್ಮಕ ಯೋಚನೆ ಮತ್ತು ಭಾವನೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿ. ಈ ವರ್ಷ ನಿಮ್ಮ ಜೀವನದ ಸಕಾರಾತ್ಮಕ ವರ್ಷವಾಗಲಿ. 2021ರಲ್ಲಿ ನಿಮ್ಮ ವಿಶ್ವರೂಪ ದರ್ಶನಕ್ಕಾಗಿ ಕಾಯುತ್ತಿರುತ್ತೇನೆ ...
ಹ್ಯಾಪಿ ನ್ಯೂ ಇಯರ್ ...
(ಲೇಖಕರು ಖ್ಯಾತ ನಟ, ನಿರ್ದೇಶಕ)