

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರಿಂದ ವಾಹನ ಸವಾರರು ನಿಟ್ಟುಸಿರು ಸವಾರರು ಬಿಡುವಂತಾಗಿದೆ. ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಎರಡನೇ ಹಂತದ 35 ಕಿ.ಮೀ. ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕಳೆದ ವರ್ಷ ಆರಂಭವಾಗಿದೆ. ಡಿಪಿ ಜೈನ್ ಕಂಪನಿಯವರು ಎಲ್ಲೆಂದರಲ್ಲಿ ರಸ್ತೆ ಅಗೆದುಹಾಕಿ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದರು. ಈ ಮಳೆಗಾಲದಲ್ಲಿ ವಾಹನ ಸವಾರರು ಸಾಕಷ್ಟು ಪರದಾಟ ನಡೆಸಿ ಹಿಡಿಶಾಪ ಹಾಕುವಂತಾಗಿತ್ತು. ಬಳಿಕ ಕಾಮಗಾರಿಯನ್ನು ಮುಗ್ರೋಡಿ ಕಕನ್ಸ್ಟ್ರಕ್ಷನ್ಗೆ ಒಳಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಇದರ ಬಳಿಕ ಕಾಮಗಾರಿಗೆ ವೇಗ ಸಿಕ್ಕಿದ್ದು ತ್ವರಿತ ಕಾಮಗಾರಿ ನಡೆಯುತ್ತಿದೆ. *ಅಹರ್ನಿಶಿ ಕಾಮಗಾರಿ: ಮಳೆ ಇಲ್ಲದ ಕಾರಣ ರಸ್ತೆಯ ಕಾಮಗಾರಿ ವೇಗವಾಗಿ ಸಾಗುತ್ತಿದೆ.ಆಗೆದು ಹಾಕಲಾದ ಕಡೆಗಳಲ್ಲಿ ಜಲ್ಲಿ ಹಾಕುವ, ಡಾಂಬರೀಕರಣ ನಡೆಸುವ, ಚರಂಡಿಗಳನ್ನು ಕಟ್ಟುವ ಕೆಲಸ ನಡೆಯುತ್ತಿದೆ. ರಾತ್ರಿ ಪಾಳಿಯಲ್ಲೂ ಕೆಲಸ ಸಾಗುತ್ತಿದೆ. ಹಗಲಲ್ಲಿ ವಾಹನ ಓಡಾಟ ಇರುವ ಕಾರಣ ರಸ್ತೆ ಕೆಲಸಗಳನ್ನು ಎಲ್ಲ ಕಡೆ ನಡೆಸಲು ಸಾಧ್ಯವಾಗುವುದಿಲ್ಲ ಇಂತಹ ಸ್ಥಳಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಡೆಯುತ್ತಿದೆ. ಒಟ್ಟಿನಲ್ಲಿ ಕಳೆದ ಒಂದು ವಷರ್ದಿಂದ ವಾಹನ ಸಂಚಾರಕ್ಕೆ ಪರದಾಟ ನಡೆಸುತ್ತಿರುವ ಇಲ್ಲಿನ ಜನರಿಗೆ ಇದರಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಚರಂಡಿ ಕಾಮಗಾರಿ ಡಿಪಿ ಜೈನ್ ಕಂಪನಿಯವರು ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಚರಂಡಿಗಳನ್ನು ಕೆಲವೆಡೆ ತೆರವುಗೊಳಿಸಿ ಹೊಸ ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲಲ್ಲಿ ರಸ್ತೆ ಅಗಲೀಕರಣ ಕೆಲಸ ಭರದಿಂದ ಸಾಗುತ್ತಿದೆ. ಅಗತ್ಯ ಸ್ಥಳಗಳಲ್ಲಿ ಗುರುತಿಸಲಾದ ಮರಗಳ ತೆರವು, ವಿದ್ಯುತ್ ಕಂಬ, ಪರಿವರ್ತಕಗಳ ಸ್ಥಳಾಂತರ ನಡೆಯುತ್ತಿದೆ.
ಈ ಹಿಂದೆ ಅಗೆದು ಹಾಕಲಾದ ಸ್ಥಳಗಳ ಕಾಮಗಾರಿ ಸಂಪೂರ್ಣಗೊಂಡ ಬಳಿಕ ಉಳಿದ ಕಡೆಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಬೆಳ್ತಂಗಡಿ, ಮುಂಡಾಜೆ ಮೊದಲಾದ ಕಡೆ ನೂತನ ಸೇತುವೆಗಳ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದೆ. ಶಿವ ಪ್ರಸಾದ್ ಅಜಿಲ,ಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ,ದಕ. ಕಳೆದ ಮಳೆಗಾಲದಲ್ಲಿ ಸಂಚಾರಕ್ಕೆ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ, ಕಳೆದ ಒಂದು ತಿಂಗಳಿನಿಂದ ಕಾಮಗಾರಿ ವೇಗವಾಗಿ ಸಾಗುತ್ತಿದ್ದು ಸಂಚಾರಕ್ಕೆ ಸಮಸ್ಯೆ ಇದ್ದ ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿರುವುದು ಸಮಾಧಾನದ ವಿಚಾರ. ಇದೇ ಗತಿಯಲ್ಲಿ ಕಾಮಗಾರಿ ಸಾಗಿದರೆ ಮುಂದಿನ ಕೆಲವೇ ದಿನಗಳಲ್ಲಿ ಉತ್ತಮ ರಸ್ತೆ ನಿರ್ಮಾಣವಾಗುವ ಸಾಧ್ಯತೆ ಇದೆ. ಸುಂದರ, ವಾಹನ ಸವಾರ, ಚಾರ್ಮಾಡಿ