

ವಿಜಯವಾಣಿ ಸುದ್ದಿಜಾಲ ಹೆಬ್ರಿ
ರಾಜ್ಯದ ಬುಡಕಟ್ಟು, ಭೂರಹಿತ ಮತ್ತು ಅರಣ್ಯ ಸಮುದಾಯಗಳು ಕೃಷಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಭೂಮಿಗೆ ದಶಕಗಳಿಂದ ಹಕ್ಕುಪತ್ರಗಳು ಇಲ್ಲದೆ ಜನತೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಿಂದ ವಂಚಿತರಾಗಿದ್ದು, ಸರ್ಕಾರ ಸದ್ಯ ಮಹತ್ವದ ನಿರ್ಧಾರ ಮಾಡಿ ಬಗರ್‌ಹುಕುಂ, ಅಕ್ರಮಸಕ್ರಮ ಅರ್ಜಿಗಳ ವಿಲೇವಾರಿಗಾಗಿ ಭೂದಾಖಲೆ ಮತ್ತು ಭೂಮಾಪನ ಇಲಾಖೆಯಿಂದ ಆಧುನಿಕ ತಂತ್ರಜ್ಞಾನದ ರೋವರ್ ಸರ್ವೇ ಕಾರ್ಯ ಮಾಡಿಸಿ ಶೀಘ್ರ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಮುಂದಾಗಿದೆ. ಇದರ ಭಾಗವಾಗಿ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಕೃಷಿ ಕ್ಷೇತ್ರದಲ್ಲಿ ಬಗರ್‌ಹುಕುಂ ಅರ್ಜಿಗಳ ವಿಲೇವಾರಿಗೆ ಆಧುನಿಕ ತಂತ್ರಜ್ಞಾನದ ರೋವರ್ ಸರ್ವೇ ಕಾರ್ಯ ಭೂಮಾಪನ ಇಲಾಖೆಯ ಅಧಿಕಾರಿಗಳಿಂದ ಶುಕ್ರವಾರ ಆರಂಭಗೊಂಡಿದೆ.
ಉಡುಪಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಾವಿರಾರು ಅರ್ಜಿಗಳು ಬಾಕಿಯಿದ್ದು, ಜಿಲ್ಲೆಯ ಲಕ್ಷಾಂತರ ಮಂದಿ ಹಕ್ಕು ಪತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಕಂದಾಯ ಸಚಿವರು ಮುಂದಿನ 6 ತಿಂಗಳಿನ ಒಳಗಾಗಿ ಬಹುತೇಕ ಬಾಕಿಯಿರುವ ಬಗರ್‌ಹುಕುಂ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿ ಮಾಡಿ ಭೂಮಿಯ ವಾರೀಸುದಾರರಿಗೆ ಶಾಶ್ವತ ಹಕ್ಕುಪತ್ರ ನೀಡಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಮಳೆ ನಡುವೆಯೂ ಸರ್ವೇ ಕಾರ್ಯ ಬಿರುಸುಗೊಂಡಿದೆ.
ನಾವು ಕೃಷಿ ಮಾಡಿಕೊಂಡು ಕಳೆದ ಹಲವು ವರ್ಷಗಳಿಂದ ಜೀವನ ನಡೆಸಿಕೊಂಡು ಬಂದಿದ್ದೇವೆ. ಅರ್ಜಿ ಕೊಟ್ಟು ಹಲವು ವರ್ಷಗಳೇ ಕಳೆದಿವೆ. ಈಗ ನಮ್ಮ ಸರ್ಕಾರದ ಅಧಿಕಾರಿಗಳೇ ನಮ್ಮ ಮನೆಬಾಗಿಲಿಗೆ ಬಂದು ನಮ್ಮ ಜಾಗದ ಸರ್ವೇ ಕಾರ್ಯ ನಡೆಸಿ ಕಡತ ತಯಾರಿಸಿ ಮುಂದೆ ಹಕ್ಕುಪತ್ರಕ್ಕಾಗಿ ಮಂಡಿಸುತ್ತಿರುವುದು ಮಹತ್ವದ ಕಾರ್ಯ, ನಮಗೆ ಅತ್ಯಂತ ಖುಷಿಯಾಗಿದೆ. ಇದರಿಂದ ಯಾವುದೇ ಮಾಹಿತಿ ಅರಿಯದೆ ಹಕ್ಕುಪತ್ರ ಪಡೆಯದ ಸಾವಿರಾರು ಮಂದಿಗೆ ವರದಾನವಾಗಲಿದೆ. -ಪಾಪಣ್ಣ ನಾಯ್ಕ ಮುನಿಯಾಲು, ಬಗರ್ ಹುಕುಂ ಅರ್ಜಿದಾರ. https://www.vijayavani.net/problem-solved-with-electric-crematorium https://www.vijayavani.net/the-northern-part-of-the-sitanadi-river-is-in-danger