

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಚಾರದಲ್ಲಿ ನಿವೇಶನ ರಹಿತರ 52 ಅರ್ಜಿಗಳು ಬಂದಿದ್ದು, ಅರ್ಹರನ್ನು ಗುರುತಿಸಿ ಮೊದಲ ಪ್ರಯತ್ನದಲ್ಲಿ ನಿವೇಶನ ಹಂಚಿಕೆಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ದಿನೇಶ್ ಕುಮಾರ್ ಶೆಟ್ಟಿ ಹೇಳಿದರು.
ಚಾರ ಗ್ರಾಮ ಪಂಚಾಯಿತಿಯಿಂದ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಾರದ 105 ಸರ್ವೇ ನಂಬರ್‌ನಲ್ಲಿ ಪ್ಲಾಟಿಂಗ್ ಸಮಸ್ಯೆ ಇದ್ದು, ಸಾರ್ವಜನಿಕರಿಗೆ ಅನನುಕೂಲವಾಗುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟವರು ಶೀಘ್ರವೇ ಕ್ರಮ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಿಥುನ್ ಶೆಟ್ಟಿ ಬಾವಿಗದ್ದೆ ಒತ್ತಾಯಿಸಿದರು. ಅಧಿಕಾರಿಗಳು ಉತ್ತರಿಸಿ, ಸರ್ಕಾರಿ ಮಟ್ಟದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.
ಚಾರ ಮೇಲ್ಬಟ್ಟು ಶ್ರೀ ಬ್ರಹ್ಮ ಬೈದರ್ಕಳ ಶಿವರಾಯ ಗರಡಿಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಸ್ಥಳೀಯರಾದ ಸಿ.ಎಂ. ಪ್ರಸನ್ನ ಶೆಟ್ಟಿ ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆಯ ಶ್ರೀನಿವಾಸ್ ಬಿ.ವಿ. ನೋಡಲ್ ಅಧಿಕಾರಿಯಾಗಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣ ನಾಯ್ಕ, ಪಿಡಿಒ ಅಶೋಕ್, ಸದಸ್ಯರಾದ ಕುಸುಮಾ ಪ್ರಭು, ರಾಘವೇಂದ್ರ, ಶಶಿಕಲಾ, ಸಂತೋಷ್ ಶೆಟ್ಟಿ, ಜಯಲಕ್ಷ್ಮೀ, ದೇವದಾಸ ಶೆಟ್ಟಿ, ಮಮತಾ ಶೆಟ್ಟಿ, ರುಕ್ಮಿಣಿ, ಸಿಬ್ಬಂದಿ, ಗ್ರಾಮಸ್ಥರಿದ್ದರು. ಪಿಡಿಒ ಅಶೋಕ್ ನಿರೂಪಿಸಿ, ಸ್ವಾಗತಿಸಿದರು. ಪಲ್ಲವಿ ವರದಿ ವಾಚಿಸಿದರು.
ಗ್ರಾಮಸಭೆಯಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಅಂಗವಿಕಲರ ಸಹಾಯಧನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ ನಡೆಯಿತು. ಚಾರ ಗ್ರಾಮದ ಸ್ವಚ್ಛತೆಗೆ ವಿಶೇಷ ಸಹಕಾರ ನೀಡಿದ ಹೆಬ್ರಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಚಾರ -ಬೇಳಂಜೆ ಪದಾಧಿಕಾರಿಗಳನ್ನು ಗೌರವಿಸಲಾಯಿತು.