ಬಜೆಟ್‌ನಲ್ಲಿ ಕರ್ನಾಟಕದ ನಿರೀಕ್ಷೆ ಹಲವು

Vidhanasoudha
Published on

ಬೆಂಗಳೂರು: ಕೇಂದ್ರ ಸರ್ಕಾರವು ಶನಿವಾರ ಮಂಡಿಸುತ್ತಿರುವ 2025-26ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕವು ವಿವಿಧ ಕ್ಷೇತ್ರದಲ್ಲಿ ಅನುಕೂಲಕರ ಘೋಷಣೆ ಹೊರಬೀಳಬಹುದೆಂದು ನಿರೀಕ್ಷೆ ಇಟ್ಟುಕೊಂಡಿದೆ. ಕಾಂಗ್ರೆಸೇತರ ಸರ್ಕಾರ ಇರುವ, ಎನ್‌ಡಿಎ ಮೈತ್ರಿ ಸರ್ಕಾರ ಇಡುವ ಕಡೆಗಳಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯ, ಕೈಗಾರಿಕೆ ಉತ್ತೇಜನಕ್ಕೆ ವಿಶೇಷ ಅನುದಾನಗಳು, ಪ್ಯಾಕೇಜ್‌ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಅದೇ ರೀತಿ ಕರ್ನಾಟಕವೂ ಸಹ ಅಪೇಕ್ಷೆ ಇಟ್ಟುಕೊಂಡಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ಕೇಂದ್ರದ ಮುಂದೆ ಬೇಡಿಕೆ ಸಲ್ಲಿಸಿದ್ದು, ಬಜೆಟ್‌ನಲ್ಲಿ ಪರಿಗಣಿಸುವಂತೆ ಕೋರಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಿಗೆ ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ರೂ. ಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹಣಕಾಸು ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಜತೆಗೆ ಸಿಎಂ ಕೂಡ ಅದೇ ಭಾವನೆ ವ್ಯಕ್ತಪಡಿಸಿದ್ದಾರೆ. ಭೌಗೋಳಿಕ ವೈಶಿಷ್ಟ್ಯ ಮತ್ತು ಪರಿಸರ ಸಂಬಂಧಿ ಗುಣಲಕ್ಷಣಗಳಿಂದಾಗಿ ರಾಜ್ಯದ ಪಶ್ಚಿಮಘಟ್ಟ ಪ್ರದೇಶ ಹಲವಾರು ಬಗೆಯ ಸವಾಲುಗಳನ್ನು ಎದುರಿಸುತ್ತಿದ್ದು, ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಪಶ್ಚಿಮಘಟ್ಟದ ಸಂರಕ್ಷಣೆಗಾಗಿ ಮಲೆನಾಡು ಪ್ರದೇಶದ ಸಮಗ್ರ ಅಭಿವೃದ್ದಿಗಾಗಿ ಐದು ವರ್ಷಗಳ ಅವಧಿಗೆ 10,000 ರೂಪಾಯಿಗಳ ವಿಶೇಷ ಅನುದಾನವನ್ನು ಘೋಷಿಸಬೇಕು ಎಂಬುದು ರಾಜ್ಯದ ಪ್ರಧಾನ ಬೇಡಿಕೆಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ನೆರವು ಪ್ರಕಟಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಗೆ ೋಷಣೆ ಮಾಡಿದ ಹಣವನ್ನು ಬಿಡುಗಡೆ ಮಾಡಬೇಕೆಂಬುದು ಕೋರಿಕೆಯಾಗಿದೆ. ಅದೇ ರೀತಿ ಬೆಂಗಳೂರು ನಗರಕ್ಕೆ ವಿಶೇಷ ಅನುದಾನ, ಬೆಳೆಯುತ್ತಿರುವ ರಾಜ್ಯದ ಪ್ರಮುಖ ನಗರಗಳಿಗೆ ಅನುದಾನ ಕೊಡಬೇಕೆಂಬ ಅಪೇಕ್ಷೆ ಇದೆ.

ಕೇಂದ್ರ ಸರ್ಕಾರ ಕಿವುಡಾಗಿದೆ. ಕೇಂದ್ರ ಸರ್ಕಾರದಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ. - ಸಿದ್ದರಾಮಯ್ಯ ಮುಖ್ಯಮಂತ್ರಿ

ಬಯಕೆ, ಅಪೇಕ್ಷೆಗಳು

1. ಕಳೆದ ಬಾರಿ ದೇಶದಲ್ಲಿ 12 ಕೈಗಾರಿಕಾ ಸ್ಮಾರ್ಟ್‌ಸಿಟಿ ೋಷಿಸಿದ್ದು, ಈ ಬಾರಿ ಕರ್ನಾಟಕಕ್ಕೆ ಒಂದಾದರೂ ಕೈಗಾರಿಕಾ ಸ್ಮಾರ್ಟ್ ಸಿಟಿ ಮತ್ತು ಏಮ್ಸ್ ಘೋಷಣೆ ನಿರೀಕ್ಷೆ 2. ಬಹು ನಿರೀಕ್ಷಿತ ಹೊಸ ರೈಲ್ವೆ ಮಾರ್ಗಗಳ ಘೋಷಣೆ, ಕುಂಟುತ್ತಾ ಸಾಗಿರುವ ಹೊಸ ಮಾರ್ಗಗಳಿಗೆ ಹೆಚ್ಚಿನ ಅನುದಾನದ ಬಯಕೆ. ಜತೆಗೆ ಬುಲೆಟ್ ಟ್ರೈನ್ ಯೋಜನೆ ಘೋಷಣೆ. 3. ರಾಜ್ಯದಲ್ಲಿ ಮತ್ತೆ 2-3 ಹೊಸ ರಾಷ್ಟ್ರೀಯ ಹೆದ್ದಾರಿಗಳ ಪ್ರಸ್ತಾವನೆಗಳಿಗೆ ಒಪ್ಪಿಗೆ ಸಿಗಬೇಕೆಂಬ ಬಯಕೆ. 4. ಗುಜರಾತ್‌ನಲ್ಲಿರುವ ಗಿಫ್ಟ್ ಸಿಟಿಯಂತೆ ಬೆಂಗಳೂರಿನಲ್ಲಿ ಜಾಗತಿಕ ಹಣಕಾಸು ಮತ್ತು ಐಟಿ ಹಬ್ ಸೃಷ್ಟಿಸಲು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಸ್ಥಾಪನೆ 5. ಬೆಂಗಳೂರು ದಕ್ಷಿಣ, ಪಶ್ಚಿಮ, ಮತ್ತು ಹೊರವಲಯಗಳಲ್ಲಿಯೂ ಮೆಟ್ರೋ ಸಂಪರ್ಕ ವಿಸ್ತರಣೆಗೆಗಾಗಿ ಮೆಟ್ರೋ 4ನೇ ಹಂತಕ್ಕೆ ಹೆಚ್ಚಿನ ಅನುದಾನ.

ಸಾಮಾನ್ಯ ಬೇಡಿಕೆ, ರಾಜ್ಯ ಸರ್ಕಾರದ್ದೂ ದನಿ

  1. ಸಂಪನ್ಮೂಲ ಹಂಚಿಕೆಯ ವಿಚಾರದಲ್ಲಿ ರಾಜ್ಯಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕು, ಅವುಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಕೇಂದ್ರ ಹಣಕಾಸು ಆಯೋಗ ತಾನು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಮೊತ್ತದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದೆ. ಈ ನಿಲುವು ಬದಲಾಗಬೇಕು.
  2. ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ವಸೂಲು ಮಾಡುತ್ತಿರುವ ಸೆಸ್ ಮತ್ತು ಸರ್ಚಾರ್ಜ್‌ಗಳಲ್ಲಿ ರಾಜ್ಯಗಳಿಗೆ ಪಾಲು ನೀಡಲಾಗುತ್ತಿಲ್ಲ. ಸೆಸ್, ಸರ್ಚಾಜಲ್ಲೂ ಪಾಲು ಸಿಗಬೇಕು.
  3. ಜಿಎಸ್ಟಿ ನಷ್ಟ ಪರಿಹಾರಕ್ಕೆ ಸೆಸ್ ಬದಲಿಗೆ ಹೆಚ್ಚುವರಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ ಜಿಎಸ್‌ಟಿ) ಸಂಗ್ರಹಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಬೇಕು.
  4. 1985ರಿಂದ ಸೇವಾ ತೆರಿಗೆ ಪರಿಷ್ಕರಿಸಿಲ್ಲ. ಸೇವಾ ತೆರಿಗೆಯ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿಮಾಡಬೇಕು. ಬಂಡವಾಳ ವೆಚ್ಚಕ್ಕೆ ವಿಶೇಷ ನೆರವು ನೀಡುವ ಯೋಜನೆ ಸ್ವಾಗತಾರ್ಹವಾದುದು. ಆದರೆ ವಿಶೇಷ ನೆರವು ಯೋಜನೆಯ ಮಾನದಂಡವನ್ನು ಬದಲಾಯಿಸಬೇಕು.
  5. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಗೌರವಧನ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಾಗಿ ಕೇಂದ್ರದ ಪಾಲು ಹೆಚ್ಚಿಸಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯಡಿ ಕೇಂದ್ರ ಸರ್ಕಾರ ಪ್ರತಿಯೊಂದು ಮನೆ ನಿರ್ಮಾಣಕ್ಕೆ ಅನುದಾನ ಹೆಚ್ಚಿಸಬೇಕು.
  6. ರೈಲ್ವೆ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಭೂಸ್ವಾಧೀನದ ಸಂಪೂರ್ಣ ವೆಚ್ಚದ ಅರ್ಧಪಾಲು, ನಿರ್ಮಾಣ ವೆಚ್ಚ ಪೂರ್ಣವಾಗಿ ಕೇಂದ್ರವೇ ನೀಡಬೇಕು.
  7. ಕೇಂದ್ರ ಅನುದಾನಿತ ಯೋಜನೆಗಳ ಒಟ್ಟು ಸ್ವರೂಪ ಬದಲಾಯಿಸಬೇಕಾದ ಅಗತ್ಯವಿದ್ದು, ಯೋಜನೆಗಳಿಗೆ ಅನುಮತಿ ನೀಡಿದಾಗಲೇ ಪೂರ್ಣ ವೆಚ್ಚ ಬಿಡುಗಡೆ ಮಾಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net