

ಮಂಡ್ಯ: ಸಂಪ್ರದಾಯ ಹಾಗೂ ಮೌಢ್ಯದ ಹೆಸರಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳ ಶೋಷಣೆ ಮಾಡಲಾಗುತ್ತಿದೆ ಎಂದು ಮಿಮ್ಸ್ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ.ಯೋಗೇಂದ್ರಕುಮಾರ್ ಬೇಸರ ವ್ಯಕ್ತಪಡಿಸಿದರು.
ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಮಹಿಳಾ ಕುಂದು ಕೊರತೆ ವಿಭಾಗದ ವತಿಯಿಂದ ಆಯೋಜಿಸಿದ್ದ ಹರಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳ ಕುರಿತ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಆರೋಗ್ಯ ವಿಚಾರದಲ್ಲಿ ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೆ ಶೋಷಣೆ ನಡೆಸಲಾಗುತ್ತಿದೆ ಎಂದು ವಿಷಾಧಿಸಿದರು.
ಹದಿಹರೆಯದ ಹೆಣ್ಣು ಮಕ್ಕಳ ಜೀವನದಲ್ಲಿ ಋತುಚಕ್ರ ಮತ್ತು ಋತುಸ್ರಾವ ಒಂದು ಸಹಜ ದೈಹಿಕ ಪ್ರಕ್ರಿಯೆ. ಇಂತಹ ಸಂದರ್ಭದಲ್ಲಿ ಅವರನ್ನು ಪ್ರತ್ಯೇಕವಾಗಿರಿಸುವುದು ಕಂಡುಬರುತ್ತಿದೆ. ಈ ಮೂಲಕ ಮಾನಸಿಕವಾಗಿ ಬಳಲುವ ಅನಿಷ್ಟ ಪದ್ದತಿಗಳನ್ನು ಹೇರಲಾಗಿದೆ. ವೈಜ್ಞಾನಿಕ, ವಿಜ್ಞಾನದ ಜ್ಞಾನವಿಲ್ಲದಂತೆ ಬದುಕು ಸಾಗುತ್ತಿದ್ದಾರೆ ಎಂದು ನುಡಿದರು.
ಭಾರತದಲ್ಲಿ ಇರುವಂತ ಕಾನೂನುಗಳು ಹಾಗೂ ಹೆಣ್ಣು ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಆರೋಗ್ಯ ಸೌಲಭ್ಯಗಳು ಕುರಿತಾಗ ಮಾಹಿತಿಯನ್ನು ತಿಳಿದುಕೊಳ್ಳಿ. ಆರೋಗ್ಯದ ಅರಿವು ಹೊಂದಿದ ಹೆಣ್ಣು ಮಗಳು ಕುಟುಂಬದ ವೈದ್ಯರು ಎಂಬ ಸಂದೇಶನ್ನು ಮರೆಯದಿರಿ. ಹೆಣ್ಣು ಮಕ್ಕಳ ಆರೋಗ್ಯ ಅಭಿವೃದ್ಧಿಯೇ ಈ ದೇಶದ ಆರೋಗ್ಯ ಸ್ಥಿತಿಗತಿಯ ದಾರಿದೀಪವಾಗಿದೆ ಎಂದರು.
ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ್ ಮಾತನಾಡಿದರು. ಪ್ರಾಂಶುಪಾಲ ಡಾ.ಜೆ.ಮಹದೇವ, ಸಂಚಾಲಕಿ ಪ್ರೊ. ಮಹಾಲಕ್ಷ್ಮೀ ಇತರರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಅನೇಕ ಸಮಸ್ಯೆಗಳನ್ನು ಚೀಟಿಯಲ್ಲಿ ಬರೆದು ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು.