ಖ್ಯಾತ ಚಿಂತಕಿ ಮೀನಾ ಸೆಹರಾವತ್ ವಾದ
ಉಡುಪಿಯಲ್ಲಿ ಬಾಂಗ್ಲಾ-ಪಾಠ ಉಪನ್ಯಾಸ
ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತ ರಾಷ್ಟ್ರವನ್ನು ನಾವೆಲ್ಲ ಮಾತೆಯ ಸ್ವರೂಪದಲ್ಲಿ ನೋಡುತ್ತೇವೆಯೇ ಹೊರತು ಪಿತನ ರೂಪದಲ್ಲಿ ಅಲ್ಲ. ಗಾಂಧೀಜಿಗಿಂತ ಮೊದಲು ದೇಶವಿದ್ದು, ಈ ದೇಶದ ಪುತ್ರ ಅವರು. ಹೀಗಾಗಿ ಮಹಾತ್ಮ ಗಾಂಧೀಜಿ ಎಂದಿಗೂ ರಾಷ್ಟ್ರಪಿತ ಆಗಲಾರ. ಅವರು ಪಾಕಿಸ್ತಾನಕ್ಕೆ ಪಿತ ಆಗಿರಬಹುದು ಎಂದು ಡೆಹರಾಡೂನ್ನ ಖ್ಯಾತ ಚಿಂತಕಿ ಮೀನಾಕ್ಷಿ ಸೆಹರಾವತ್ ತಿಳಿಸಿದರು.
ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನಲ್ಲಿ ಅದಮಾರು ಮಠ ಹಾಗೂ ಶ್ರೀಕೃಷ್ಟ ಸೇವಾ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ 35ನೇ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಹಿರಿಯ ಯತಿ ವಿದ್ಯಾಧೀಶ ತೀರ್ಥ ಶ್ರೀಪಾದರ ಗುರುವಂದನೆ ಸಮಾರಂಭದಲ್ಲಿ ಬಾಂಗ್ಲಾ-ಪಾಠ ಎಂಬ ವಿಚಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದೇಶದ ಮಕ್ಕಳಿಗಿಲ್ಲ ಧರ್ಮ ಜ್ಞಾನ

ಯಾರಿಗೆ ಭಾರತದ ಇತಿಹಾಸ, ಸಂಸ್ಕೃತಿ ಹಾಗೂ ಧರ್ಮದ ಬಗ್ಗೆ ಅರಿವಿಲ್ಲವೋ ಅವರು ನೆಲಕ್ಕುರುಳಿ ಬೀಳಲಿರುವ ಒಣಗಿದ ಮರಕ್ಕೆ ಸಮಾನ. ಮುಸ್ಲಿಂ ಧರ್ಮದ 5ರಿಂದ 10 ವರ್ಷದೊಳಗಿನ ಮಕ್ಕಳಿಗೆ ಅಲ್ಲಾಹನ ಕುರಿತು ಸಂಪೂರ್ಣ ಜ್ಞಾನವಿದೆ. ಆದರೆ, ಹಿಂದು ಧರ್ಮದ 5ರಿಂದ 10 ವರ್ಷದೊಳಗಿನ ಮಕ್ಕಳಿಗೆ ಭಗವದ್ಗೀತೆಯ 10 ಶ್ಲೋಕವೂ ಬರುವುದಿಲ್ಲ. ಶೇ.95ಕ್ಕೂ ಹೆಚ್ಚು ಮಕ್ಕಳಿಗೆ ರಾಮಾಯಣ, ಮಹಾಭಾರತದ ವ್ಯತ್ಯಾಸ ಗೊತ್ತಿಲ್ಲ. ಕಂಸನು ರಾಮನ ಮಾವನೋ, ಕೃಷ್ಣನ ಮಾವನೋ ಎಂಬ ಸಣ್ಣ ಮಾಹಿತಿಯೂ ಇಲ್ಲ. ಇನ್ನು ಸನಾತನ ಧರ್ಮದ ಜ್ಞಾನ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಧನದಾಹೀ ಬಾಂಗ್ಲಾ ದೇಶ
ಧರ್ಮವನ್ನು ಅನುಸರಿಸದ ಬಾಂಗ್ಲಾ ದೇಶದ ಸ್ಥಿತಿ ಹೇಗಾಗಿದೆ ಎನ್ನುವುದು ನಮ್ಮ ಕಣ್ಮುಂದೆಯೇ ಇದೆ. ಅಲ್ಲಿ ಧರ್ಮವನ್ನು ಕಡೆಗಣಿಸಿ ಧನ (ಹಣ) ಗಳಿಕೆಗೇ ಆದ್ಯತೆ ನೀಡಿದ್ದರಿಂದ ವ್ಯಭಿಚಾರ ತಾಂಡವವಾಡುತ್ತಿದೆ. ಮಹಿಳೆಯರ ಅತ್ಯಾಚಾರ ನಿಲ್ಲದಾಗಿದೆ. ಈ ಸ್ಥಿತಿ ಭಾರತಕ್ಕೂ ಬರಬಾರದೆಂದರೆ ಸನಾತನ ಧರ್ಮ ರಕ್ಷಣೆಯಾಗಬೇಕಿದೆ. ಇದಕ್ಕಾಗಿ ನೋ ಚೈಲ್ಡ್ ಪಾಲಿಸಿ ಹಾಗೂ ನೋ ಮ್ಯಾರೇಜ್ ಪಾಲಿಸಿಯನ್ನು ಕಿತ್ತೆಸೆಯಬೇಕಾಗಿದೆ. ಎಲ್ಲರ ಮನೆಯಲ್ಲೂ ರಾಮ-ಕೃಷ್ಣನಂತಹ, ಶಿವಾಜಿ, ಭಗತ್ಸಿಂಗ್, ಆಝಾದ್ನಂತಹ ಮಕ್ಕಳು ಜನಿಸುವಂತಾಗಬೇಕು. ಇದಕ್ಕಾಗಿ ಮಾತೆಯರೆಲ್ಲ ಜೀಜಾಬಾಯಿ, ಯಾನ್ಸಿ ಲಕ್ಷ್ಮೀಬಾಯಿ, ಕಿತ್ತೂರು ಚನ್ನಮ್ಮಳಂತಹ ವೀರ ವನಿತೆಯರಾಗಬೇಕು ಎಂದು ಮೀನಾಕ್ಷಿ ಸೆಹರಾವತ್ ತಿಳಿಸಿದರು.
ಯುವ ಸಮುದಾಯವಾಗಿದೆ ನಪೂಂಸಕ
ಗಾಂಧೀಜಿ ಅವರ ಆಶಯವೆನ್ನುತ್ತ ಅಹಿಂಸಾ ಪರಮೋ ಧರ್ಮ: ಎಂದು ಶ್ಲೋಕವೊಂದರ ಅರ್ಧಸಾಲುಗಳನ್ನೇ ಬೋಧಿಸುತ್ತ, ಅದನ್ನೇ ಲಾಲಿಪಪ್ ತರಹ ಮಕ್ಕಳಿಗೆ ನೀಡುತ್ತ ಬಂದಿರುವುದರಿಂದ ಭಾರತದ ಯುವ ಸಮುದಾಯ ಇಂದು ನಪೂಂಸಕವಾಗಿದೆ. ಹೀಗಾಗಿ ಎಲ್ಲ ಮಾತೆಯರೂ ಭಯಬಿಟ್ಟು ತಮ್ಮ ಮಕ್ಕಳಿಗೆ ಸನಾತನ ಧರ್ಮದ ಬಗ್ಗೆ ತಿಳಿಸಬೇಕು. ದೇಶದ ಸಂಸ್ಕಾರ ಕಲಿಸಬೇಕು. ಶತ್ರುಗಳ ಕುರಿತು ಮಕ್ಕಳಿಗೆ ಸಮಗ್ರ ಜ್ಞಾನ ನೀಡಬೇಕು. ಶಿವಾಜಿಯಂತಹ ಸುಪುತ್ರ ಬೇಕಾದರೆ ಜೀಜಾಬಾಯಿ ಆಗಲು ಮೊದಲು ಸಿದ್ಧರಿರಬೇಕು. ಮುಖ್ಯವಾಗಿ ಶೌರ್ಯ ಮಾತೆಯರಾಗಬೇಕು. ಅದರಿಂದ ಜನಿಸಿದ ಮಕ್ಕಳೂ ಸಹ ಶೌರ್ಯವಂತರಾಗುತ್ತಾರೆ. ದೇಶದಲ್ಲಿಂದು ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುವ ಸ್ಥಿತಿ ಬರುತ್ತಿದೆ ಎಂದು ಮೀನಾಕ್ಷಿ ಸೆಹಾರವತ್ ಕಳವಳ ವ್ಯಕ್ತಪಡಿಸಿದರು.