

ಉಳ್ಳಾಲ: ಇಂದಿನ ವೇಗದ ಜೀವನ ಶೈಲಿ, ಮಾನಸಿಕ ಒತ್ತಡ ಹಾಗೂ ಫಾಸ್ಟ್ಫುಡ್ ಸೇವನೆಯಿಂದ ಜನರಲ್ಲಿ ಅನಾರೋಗ್ಯ ಹೆಚ್ಚುತ್ತಿದ್ದು ಕ್ಯಾನ್ಸರ್ನಂತಹ ಮಾರಕ ರೋಗಗಳು ಹೆಚ್ಚುತ್ತಿವೆ. ಜನರು ಕಾಯಿಲೆಯ ಮೊದಲ ಹಂತದಲ್ಲಿಯೇ ಆಯುರ್ವೇದದ ಪಂಚಗವ್ಯ ಚಿಕಿತ್ಸೆಯಿಂದ ಕಾಯಿಲೆ ಗುಣಪಡಿಸಿಕೊಳ್ಳಬಹುದು ಎಂದು ಪಂಚಗವ್ಯ ಚಿಕಿತ್ಸಾ ವಿಶೇಷ ಸಂದರ್ಶಕ ಡಾ.ಡಿ.ಪಿ.ರಮೇಶ್ ಹೇಳಿದರು.
ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ನಡೆಯುವ ಧರ್ಮ ಶಿಕ್ಷಣ ಕಾರ್ಯಕ್ರಮದಲ್ಲಿ ತಲಪಾಡಿ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಆಯುರ್ವೇದ ಚಿಕಿತ್ಸಾ ಕ್ರಮಗಳ ವಿಶೇಷ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಸ್ಪತ್ರೆ ಪಂಚಕರ್ಮ ವಿಭಾಗ ಮುಖ್ಯಸ್ಥ ಡಾ.ಶಿಲ್ಪ ಸೂರಜ್ ಅವರು ಬೆನ್ನುನೋವು, ಸಂದುನೋವು, ಪಾರ್ಶ್ವವಾಯು, ಅಲರ್ಜಿ, ಚರ್ಮರೋಗಗಳಿಗೆ ಆಸ್ಪತ್ರೆಯಲ್ಲಿ ಲಭ್ಯವಿರುವ ವಿಶೇಷ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು. ಇಂಟರ್ನ್ ವೈದ್ಯರಾದ ಡಾ.ಅನನ್ಯ, ಡಾ.ಶಿಫಾಲಿ ಹಾಗೂ ಡಾ.ಆರಿಫಾ ಅವರು ದಿನಚರ್ಯೆಯ ಬಗ್ಗೆ ಮಾಹಿತಿ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕಜೆ ಮತ್ತಿತರರು ಉಪಸ್ಥಿತರಿದ್ದರು. ಆಶಾ ಕಾರ್ಯಕ್ರಮ ನಿರೂಪಿಸಿದರು.