ಆರೋಗ್ಯದ 'ಸಂಪರ್ಕ ಸೇತು' ವೈದ್ಯಕೀಯ ಪ್ರತಿನಿಧಿಗಳು...

MR Lead
Published on

ವೈದ್ಯರು ಮತ್ತು ಔಷಧ ವಿತರಕರ ಆತ್ಮೀಯತೆಯ ಪರಿಧಿಯೊಳಗೆ ವೃತ್ತಿ ಬದುಕು ಬೆಸೆಯುವ ವೈದ್ಯಕೀಯ ಪ್ರತಿನಿಧಿಗಳು (ಮೆಡಿಕಲ್​ ರೆಪ್ರೆಸೆಂಟೇಟಿವ್​)' ಸಮಾಜದಲ್ಲಿ ಸರಿಯಾಗಿ ಗುರುತಿಸಲ್ಪಡದ ವ್ಯಕ್ತಿತ್ವ. ಸದಾ ಸಂಚಾರಿಯಾಗಿ, ತಮ್ಮ ವೈಯಕ್ತಿಕ ಬದುಕಿಗೂ ಅರ್ಥ' ಹುಡುಕುತ್ತ ಸಾಗುವ ವೈದ್ಯಕೀಯ ಪ್ರತಿನಿಧಿಗಳ ಕಾಯಕ ವಿಶಿಷ್ಟ. ಆದರೆ, ಅವರ ಮೌಲ್ಯಯುತ ಕಾರ್ಯ ಹೆಚ್ಚಿನವರ ಗಮನಕ್ಕಿಲ್ಲ. ಪ್ರತಿವರ್ಷ ಆಗಸ್ಟ್​ 1ರಂದು ದೇಶಾದ್ಯಂತ ವೈದ್ಯಕೀಯ ಪ್ರತಿನಿಧಿಗಳ ದಿನ ಆಚರಿಸಲಾಗುತ್ತದೆ.

ಆಗಸ್ಟ್​ 1 ವೈದ್ಯಕೀಯ ಪ್ರತಿನಿಧಿಗಳ ದಿನ

ಪ್ರಶಾಂತ ಭಾಗ್ವತ ಉಡುಪಿ

ಆಕರ್ಷಕ ವಸ್ತ್ರ ಸಂಹಿತೆ. ಕೈಯಲ್ಲೊಂದು ದೊಡ್ಡ ಬ್ಯಾಗ್​. ಇಂಗ್ಲಿಷ್​ನಲ್ಲಿ ಮಾತುಗಾರಿಕೆ. ಆಸ್ಪತ್ರೆಗಳಲ್ಲಿ ಇವರ ದರ್ಶನ. ಯಾರೆಂದು ತಿಳಿಯಿತಾ? ವೈದ್ಯರ ಸಂದರ್ಶನಕ್ಕಾಗಿ ಆಸ್ಪತ್ರೆಯಲ್ಲಿ ಕಾಯುತ್ತ ಕುಳಿತುಕೊಂಡಿರುವ ಇವರೇ ವೈದ್ಯಕೀಯ ಪ್ರತಿನಿಧಿ (ಮೆಡಿಕಲ್​ ರೆಪ್ರೆಸೆಂಟೇಟಿವ್​)ಗಳು.

ದಿನಕ್ಕೆ ನಾಲ್ಕಾರು ಊರು ಸುತ್ತಾಟ, ಅಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಂಪರ್ಕಿಸಿ ತಮ್ಮ ಸಂಸ್ಥೆಗಳಲ್ಲಿ ಉತ್ಪಾದಿಸುತ್ತಿರುವ ಹೊಸ ಔಷಧಗಳ ಮಾಹಿತಿ, ಪರಿಚಯ ಮಾಡುವುದು ಅವರ ಕಾಯಕ.

ಮಾರುಕಟ್ಟೆಯಲ್ಲಿ ಪ್ರಸಿದ್ಧಿಗೊಂಡ ತಮ್ಮ ಕಂಪನಿಯ ಹಳೆಯ ಬ್ರ್ಯಾಂಡ್​ಗಳನ್ನೂ ವೈದ್ಯರಿಗೆ ನೆನಪಿಸಿ, ಕೆಲಸ ಮಾಡುವ ಕಂಪನಿಯ ಉನ್ನತಿಕರಣ ಅವರ ಕಾರ್ಯ. ಕಂಪನಿಗಳು ಪ್ರತಿನಿಧಿಗಳಿಗೆ ವಿಧಿಸುವ ನಿಗದಿತ ಆರ್ಥಿಕ ಗುರಿ ತಲುಪುವುದು ಇತ್ತೀಚೆಗಂತೂ ಪೈಪೋಟಿ ಪ್ರಪಂಚದಲ್ಲಿ ಸುಲಭವಂತೂ ಅಲ್ಲ.

 6 ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು

MR 5
ದೇಶಾದ್ಯಂತ ಅಂದಾಜು 3 ಸಾವಿರಕ್ಕೂ ಅಧಿಕ ಔಷಧ ಕಂಪನಿಗಳು, 6 ಲಕ್ಷಕ್ಕೂ ಅಧಿಕ ವೈದ್ಯಕೀಯ ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದಾರೆ. ಬೃಹತ್​ ನಗರಗಳಲ್ಲಿ ಮಹಿಳೆಯರೂ ಈ ವೃತ್ತಿ ನೆಚ್ಚಿರುವುದು ಇನ್ನೊಂದು ವಿಶೇಷ. ನಾವಿರುವ ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಡದ ಆದರೆ, ಮಹತ್ವದ ಕಾರ್ಯ ಮಾಡುವ ಸಂಪರ್ಕ ಸೇತು ಇವರು. ಲಕ್ಷಾಂತರ ಕುಟುಂಬಗಳಿಗೆ ಈ ವೃತ್ತಿ ಆಸರೆಯೂ ಆಗಿದೆ.

ಸುಸಂಸ್ಕೃತ ಗ್ರಾಹಕರೊಂದಿಗೆ ಒಡನಾಟ

ಎಂಆರ್​ (ಮೆಡಿಕಲ್​ ರೆಪ್ರೆಸೆಂಟೇಟಿವ್​)ಗಳಿಗೆ ದಿನವೂ ಸುಸಂಸ್ಕೃತ ಗ್ರಾಹಕರೊಂದಿಗೆ ಒಡನಾಟ. ಈ ವೃತ್ತಿಯಲ್ಲಿರುವವರಿಗೆ ದೇಶ ಸುತ್ತು ಕೋಶ ಓದು ಎಂಬ ಮಾತು ಅಕ್ಷರಶ: ಅನ್ವಯಿಸುತ್ತದೆ. ಉತ್ತಮ ಪ್ರವೃತ್ತಿಯನ್ನೂ ರೂಢಿಸಿಕೊಳ್ಳುವ ಅವಕಾಶ ವೈದ್ಯಕೀಯ ಪ್ರತಿನಿಧಿಗಳಿಗೆ ಹೇರಳವಾಗಿದೆ. ಹೀಗಾಗಿಯೇ ಈ ವೃತ್ತಿಯೂ ಸಹ ಯುವ ಜನಾಂಗವನ್ನು ಆಕರ್ಷಿಸುತ್ತಿದೆ.

2
1950ರಲ್ಲಿ ಮುಂಬಯಿಯ ಮಹಾನಗರಿಯಲ್ಲಿ ಪ್ರಾರಂಭವಾದ ಈ ವೃತ್ತಿಯ ಲಾಂಛನವಾಗಿ ಘಾಟ್ಕೋಪರ್​- 9 ಫೀಟ್​ ರಸ್ತೆಯಲ್ಲಿ ಎಂಆರ್​ ಸರ್ಕಲ್​ (ಮೆಡಿಕಲ್​ ರೆಪ್ರೆಸೆಂಟೇಟಿವ್​ ಸರ್ಕಲ್​) ಈಗಲೂ ಇದೆ.

ವೈದ್ಯಕೀಯ ಪ್ರತಿನಿಧಿಗಳ ದಿನಾಚರಣೆಯ ನಿರ್ದಿಷ್ಟ ಸ್ಥಾಪಕರು ಇಲ್ಲ. ಆದರೂ ಸಹ ಅವರ ಪಾತ್ರವು ಭಾರತದಲ್ಲಿ ಗಮನಾರ್ಹವಾಗಿ ವಿಕಸನಗೊಂಡಿದೆ. 1950 ಮತ್ತು 60ರ ದಶಕದಿಂದ ಈಚೆಗೆ ಸಂಘಟಿತ ಔಷಧ ಕಂಪನಿಗಳ ಉದಯದೊಂದಿಗೆ ಈ ವೃತ್ತಿಯ ಉದಯವೂ ಆಗಿದೆ. ಅನೇಕರು ಔಷಧ ಕಂಪನಿಗಳ ಪ್ರತಿನಿಧಿಯಾಗಿ ವೃತ್ತಿ ಜೀವನ ನಡೆಸಿದ್ದಾರೆ. ಈಗಂತೂ ಈ ವೃತ್ತಿಯು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಜಾಲವಾಗಿ ಬೆಳೆದಿದೆ.

ವೈದ್ಯರಿಗೆ ಸೂಕ್ತ ಮಾಹಿತಿ

MR 4
ಪ್ರಮುಖವಾಗಿ ಈ ದಿನಾಚರಣೆಯನ್ನು ಔಷಧಗಳನ್ನು ಉತ್ತೇಜಿಸುವಲ್ಲಿ, ಕಂಪನಿಗಳು ಮತ್ತು ಆರೋಗ್ಯ ಪೂರೈಕೆದಾರರ ನಡುವಿನ ಅಂತರ ಕಡಿಮೆ ಮಾಡುವ ವೈದ್ಯಕೀಯ ಪ್ರತಿನಿಧಿಗಳ ಕೊಡುಗೆ ಗುರುತಿಸಲು ಆಚರಿಸಲಾಗುತ್ತದೆ. ಜನರ ಆರೋಗ್ಯ ರಕ್ಷಣೆ ಮತ್ತು ಔಷಧ ಉದ್ಯಮದಲ್ಲಿ ಅವರ ನಿರ್ಣಾಯಕ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.ಈ ಹಿಂದೆಯೂ ವೈದ್ಯಕೀಯ ಪ್ರತಿನಿಧಿಗಳನ್ನು ಹೆಚ್ಚು ಗೌರವಿಸಲಾಗುತ್ತಿತ್ತು. ವೈದ್ಯರು ಅವರನ್ನು ಮರದ ಕೆಳಗೆ ಭೇಟಿಯಾಗುವ ಸಂಪ್ರದಾಯವಿತ್ತು. ಇಂದು, ಆ ಪ್ರತಿನಿಧಿಗಳು ವೈದ್ಯರಿಗೆ ಹೊಸ ಔಷಧ, ಚಿಕಿತ್ಸೆಗಳ ಮಾಹಿತಿ, ಅಗತ್ಯ ಔಷಧ ಲಭ್ಯತೆ ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಯುನೈಟೆಡ್​ ಸ್ಟೇಟ್ಸ್​ನಲ್ಲಿರುವ ಔಷಧ ಕಂಪನಿಗಳು ತಮ್ಮ ಪ್ರತಿನಿಧಿಗಳನ್ನು ವೈದ್ಯರ ಬಳಿ ಕಳುಹಿಸಿ ಔಷಧೋತ್ಪನ್ನದ ಮಾಹಿತಿ ನೀಡಲು ವಾರ್ಷಿಕವಾಗಿ 5 ಬಿಲಿಯನ್​ ಡಾಲರ್​ ವ್ಯಯಿಸುತ್ತವೆ. ಆ ಪ್ರತಿನಿಧಿಗಳನ್ನು ಅಮೆರಿಕದ ಔಷಧೀಯ ಸಂಶೋಧನೆ ಮತ್ತು ತಯಾರಕರು (ಪಿಎಚ್​ಆರ್​ಎಂಎ) ರಚಿಸಿದ ಆರೋಗ್ಯ ರಕ್ಷಣಾ ವೃತ್ತಿಪರರೊಂದಿಗಿನ ಸಂವಹನಗಳ ಸಂಹಿತೆಯಿಂದ ಸ್ಥಾಪಿಸಿರುವ ನೀತಿಯನ್ವಯ ನಿಯಂತ್ರಿಸಲಾಗುತ್ತದೆ. ಆ ಸಂಹಿತೆಯು 2002ರಲ್ಲಿ ಜಾರಿಗೆ ಬಂತು. ಅಂದಿನಿಂದ ಆರೋಗ್ಯ ರಕ್ಷಣಾ ವೃತ್ತಿಪರರು ಮತ್ತು ಔಷಧ ಕಂಪನಿಗಳ ನಡುವಿನ ನೈತಿಕ ಸಂವಹನಗಳನ್ನು ವ್ಯಾಖ್ಯಾನಿಸಲು ಈ ಸಂಹಿತೆ ಸಹಕಾರಿಯಾಗಿದೆ.

ವೃತ್ತಿಗೆ ಮಾದರಿಯಾದ ಹಂದಿಗೋಣದ ಭಾಗ್ವತ್ರು

GPB
ಜಿ.ಪಿ. ಭಾಗ್ವತ

ವೈದ್ಯಕೀಯ ಪ್ರತಿನಿಧಿಗಳ ವೃತ್ತಿಗೆ ದೇಶಕ್ಕಷ್ಟೇ ಅಲ್ಲ, ವಿಶ್ವದ ವೈದ್ಯಕೀಯ ಲೋಕಕ್ಕೇ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣ ಗ್ರಾಮದ ಜಿ.ಪಿ. ಭಾಗ್ವತ ಮಾದರಿಯಾಗಿದ್ದಾರೆ. 71ರ ವಯಸ್ಸಿನ ಗಣಪತಿ ಭಾಗ್ವತ, ಸುದೀರ್ಘ 50 ವರ್ಷ ಸೇವೆ ಸಲ್ಲಿಸಿರುವುದು ನಿಜಕ್ಕೂ ಆ ವೃತ್ತಿಯಲ್ಲೊಂದು ಹೊಸ ಇತಿಹಾಸ. ಮೇ 1975ರಲ್ಲಿ ನ್ಯೂ ಭುವನೇಂದ್ರ ಆಯುರ್ವೇದಿಕ್​ ಫಾರ್ಮಸಿಯಲ್ಲಿ ವೃತ್ತಿ ಆರಂಭಿಸಿದ ಅವರು, ಏಪ್ರಿಲ್​ 1981ರಲ್ಲಿ ಇರೋಸ್​ ಫಾರ್ಮಾ ಎಂಬ ಕಂಪನಿಯ ಪ್ರತಿನಿಧಿಯಾಗಿ ಈಗಲೂ ಸೇವೆ ಮುಂದುವರಿಸಿದ್ದಾರೆ. ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗೆ ಮೆಚ್ಚಿಕೊಂಡಿರುವ ಕಂಪನಿ, ಪ್ರತಿವರ್ಷವೂ ಅವರ ಸೇವೆಯನ್ನು ನವೀಕರಿಸುತ್ತಲೇ ಇದೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲ ವೈದ್ಯರೂ ಸಹ ಅವರುನ್ನು ಇರೋಸ್​ ಭಾಗ್ವತ್ರು ಎಂದೇ ಗೌರವಿಸುತ್ತಾರೆ. ಭಾಗ್ವತ್ರು ಎಂದರೆ ಮೌಲ್ಯಬದ್ಧ ಸೇವೆ, ಪ್ರಾಮುಖ್ಯ ಸಂಬಂಧಗಳ ಸಂಕೇತ. ಹುದ್ದೆಗೆ ಶ್ರೇಷ್ಠ ಮಾನದಂಡ ನೀಡಿದ ಅವರ ವೃತ್ತಿ ಜೀವನ ಯುವ ಸಮುದಾಯಕ್ಕೆ ಮಾರ್ಗದರ್ಶಕ ಮತ್ತು ಪ್ರೇರಣೆ. ಅವರ ಬದ್ಧತೆಗೆ, ವ್ಯಕ್ತಿತ್ವದ ಉತ್ತುಂಗತೆ ತಲೆಬಾಗಲೇಬೇಕು ಎನ್ನುತ್ತಾರೆ ಶಿರಸಿಯ ವೈದ್ಯ ಡಾ. ರವಿಕಿರಣ ಪಟವರ್ಧನ್​. ಕೆಲವು ಪ್ರತಿಭಾನ್ವಿತರ ವ್ಯಕ್ತಿತ್ವದಿಂದಲೇ ಆ ಹುದ್ದೆಯೇ ಪ್ರಸಿದ್ಧವಾಗುತ್ತದೆ. ಅಂತಹವರ ಸಾಲಿನಲ್ಲಿ ಜಿ.ಪಿ ಭಾಗ್ವತರು ಶೋಭಿಸುತ್ತಿದ್ದಾರೆ. ವೈದ್ಯಕೀಯ ಪ್ರತಿನಿಧಿಗಳ ಸಮೂಹವೇ ಎದೆಯುಬ್ಬಿಸಿ ನಡೆಯುವಂತಹ ಗೌರವವನ್ನು ಆ ಕ್ಷೇತ್ರಕ್ಕೆ ತಂದುಕೊಟ್ಟಿದ್ದಾರೆ. 70ರ ವಯಸ್ಸಲ್ಲೂ ಯುವಕರನ್ನೂ ನಾಚಿಸುವ, ಪಾದರಸದಂತಹ ಚುರುಕುತನ ಅವರ ವೃತ್ತಿಯಲ್ಲಿ ಈಗಲೂ ಕಂಡುಬರುತ್ತಿದೆ. ತಮ್ಮಕಂಪನಿಯ ಔಷಧದ ವಿಶೇಷತೆ ಏನು? ಅದು ಹೇಗೆ ಇತರ ಕಂಪನಿಗಿಂತ ಉತ್ತಮವಾಗಿದೆ ಎನ್ನುವುದನ್ನು ನಿರೂಪಿಸುವ ಅವರ ಭಾಷಾ ಪ್ರೌಢಿಮೆಯ ಸಾಮರ್ಥ್ಯ ಎಲ್ಲ ವೈದ್ಯರಿಗೂ ಅಚ್ಚುಮೆಚ್ಚು ಎನ್ನುತ್ತಾರೆ ಕುಮಟಾದ ಖ್ಯಾತ ವೈದ್ಯ ಡಾ. ಎಂ.ಎಸ್​. ಅವಧಾನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net