

ಭಾರತದ ಹಲವು ಭಾಷೆಗಳಲ್ಲಿ ಸುಮಾರು 50 ಸಾವಿರ ಹಾಡುಗಳನ್ನು ಹಾಡಿದ ಧೀಮಂತ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಸುಧೀರ್ಘ ಹೋರಾಟದ ನಂತರ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಸಾವಿರಾರು ಹಾಡುಗಳಿಗೆ ತಮ್ಮ ಧ್ವನಿಯ ಮೂಲಕ ಜೀವ ನೀಡಿದ್ದ ಬಾಲಸುಬ್ರಹ್ಮಣ್ಯಂ ಅವರು ಇನ್ನಿಲ್ಲ ಎನ್ನುವುದು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇದುವರೆಗೂ ಅನೇಕ ಹೀರೋಗಳಿಗೆ ಹಾಡಿದ್ದಾರೆ. ಮೂಲಗಳ ಪ್ರಕಾರ, ಎಸ್ಪಿಬಿ ಅವರು ಇದುವರೆಗೂ 150ಕ್ಕೂ ಹೆಚ್ಚು ಹೀರೋಗಳಿಗೆ ಹಾಡಿದ್ದಾರಂತೆ. ಆದರೆ, ಭಾರತೀಯ ಚಿತ್ರರಂದ ಮೇರು ನಟ ಅಮಿತಾಭ್ ಬಚ್ಚನ್ ಅವರಿಗೆ ಮಾತ್ ಬಾಲಸುಬ್ರಹ್ಮಣ್ಯಂ ಅವರು ಹಾಡಿರಲಿಲ್ಲ ಎಂಬ ವಿಷಯ ಅವರನ್ನು ಕೊನೆಯವರೆಗೂ ಕಾಡುತಿತ್ತು.
ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ, ಎಸ್ಪಿಬಿ ಅವರು ತಮ್ಮನ್ನು ಕೊರೆಯುತ್ತಿರುವ ಒಂದು ವಿಷಯವನ್ನು ಹೇಳಿಕೊಂಡಿದ್ದಾರೆ. 'ನಾನು ಇದುವರೆಗೂ ಹಲವು ನಟರಿಗೆ ಹಾಡಿದ್ದರೂ, ನಾನು ಅಮಿತಾಬ್ ಬಚ್ಚನ್ ಅವರಿಗೆ ಮಾತ್ರ ಹಾಡುವುದಕ್ಕೆ ಇದುವರೆಗೂ ಸಾಧ್ಯವಾಗಲಿಲ್ಲ. ಈ ಕೊರಗು ಇದ್ದೇ ಇದೆ' ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇಷ್ಟಕ್ಕೂ ಅಮಿತಾಭ್ ಅವರಿಗೆ ಹಾಡುವುದಕ್ಕೆ ಯಾಕೆ ಸಾಧ್ಯವಾಗಲಿಲ್ಲ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಇದಕ್ಕೆ ನಿರ್ಧಿಷ್ಟವಾದ ಕಾರಣಗಳೇನಿಲ್ಲ. ಅಮಿತಾಭ್ ಅವರು ಪೀಕ್ನಲ್ಲಿದ್ದಾಗ ಅವರಿಗೆ ಕಿಶೋರ್ ಕುಮಾರ್ ಹಾಡುತ್ತಿದ್ದರು. ನಂತರದ ವರ್ಷಗಳಲ್ಲಿ ಸುದೇಶ್ ಭೋಂಸ್ಲೇ, ಅಮಿತ್ ಕುಮಾರ್, ಮೊಹಮ್ಮದ್ ಅಜೀಜ್ ಮುಂತಾದವರು ಹಾಡುತ್ತಿದ್ದರು. ಖುದ್ದು ಅಮಿತಾಭ್ ಅವರೇ ತಮಗಾಗಿ ಹಾಡಿಕೊಂಡಿದ್ದಾರೆ. ಹಾಗಾಗಿ ಎಸ್;ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊನೆಯವರೆಗೂ ಅಮಿತಾಭ್ ಅವರಿಗೆ ಹಾಡುವುದಕ್ಕೆ ಸಾಧ್ಯವಾಗಲೇ ಇಲ್ಲ ಎನ್ನುವ ಕೊರಗು ಅವರಿಗೂ ಇತ್ತು.