

ವಿಜಯಪುರ: ಕೂಡಲ ಸಂಗಮದಲ್ಲಿ ಏ. 20 ರಂದು ಪಂಚಮಸಾಲಿ ಸಮಾಜದ ಸಭೆ ಆಯೋಜಿಸಲಾಗಿದ್ದು, ಅಂದು ಸಮಾಜಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದೆಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ದೇವರಹಿಪ್ಪರಗಿ ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂಚ ಉಚ್ಚಾಟನೆಗೊಳಿಸಿರುವುದು, ಶಾಸಕ ವಿಜಯಾನಂದ ಕಾಶಪ್ಪನವರ ನೀಡುತ್ತಿರುವ ಹೇಳಿಕೆ, ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ಕುರಿತು ನೀಡುತ್ತಿರುವ ಹೇಳಿಕೆಗಳು ಹೀಗೆ ಮುಂತಾದ ವಿಷಯಗಳ ಕುರಿತು ಅಂದು ಸಮಗ್ರವಾಗಿ ಚರ್ಚಿಸಲಾಗುವುದೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಲಕ್ಷಾಂತರ ಪಂಚಮಸಾಲಿಗಳು ಭಾಗವಹಿಸಿದ ಹೋರಾಟದಲ್ಲಿ ಗೈರಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನೇ ಸಮಾಜ ಎಂದೋ ಮನಸ್ಸಿನ ಉಚ್ಚಾಟನೆ ಮಾಡಿದಂತಿದೆ, ಆದರೆ ಅವರು ಪಂಚಮಸಾಲಿ ಶ್ರೀಗಳ ಉಚ್ಚಾಟನೆ ಮಾಡುವ ಮಾತನಾಡಿರುವುದು ದುರ್ದೈವ. ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳಂತಹ ಸ್ವಾಮೀಜಿ ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ. ಸ್ವಾಮೀಜಿಗಳನ್ನು ಜಗದ್ಗುರು ಆಗಿ ಸ್ವೀಕರಿಸಿದ್ದು ಸಮಸ್ತ ಸಮಾಜ. ಅವರನ್ನು ಉಚ್ಚಾಟನೆ ಮಾಡುವ ಅಧಿಕಾರ ಟ್ರಸ್ಟ್ ನವರಿಗೆ ಇಲ್ಲ, ಭೂಮಿ, ಆಸ್ತಿ ನಿಮ್ಮ ಹೆಸರಲ್ಲಿ ಇರಬೇಕು, ಆದರೆ ಶ್ರೀಗಳು ಸಮಾಜದ ಆಸ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದರು.
ಪಂಚಮಸಾಲಿ ಸಮಾಜಕ್ಕೆ 2-ಎ ಹೋರಾಟಕ್ಕೆ ದೊಡ್ಡ ಆಂದೋಲನ ಸ್ಪರ್ಶ ನೀಡಿದ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ವಿರುದ್ಧ ನಮ್ಮ ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮನಸ್ಸಿಗೆ ನೋವುಂಟು ಮಾಡುವ ಹೇಳಿಕೆಯನ್ನು ಇಲ್ಲಿಗೆ ನಿಲ್ಲಿಸಲಿ ಎಂದರು.
ಸಮಾಜದ ಋಣ ತೀರಿಸಿ ಹೊರತು ಗೊಂದಲ ಸೃಷ್ಟಿಸಬೇಡಿ, ನಿಮ್ಮ ಹೇಳಿಕೆಗಳಿಂದ ಸಮಾಜಕ್ಕೆ ಹಿನ್ನೆಡೆಯಾಗುತ್ತಿದೆ, ಹೀಗಾಗಿ ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಖಂಡ ಈರಣ್ಣ ಶಿರಮಗೊಂಡ ಮಾತನಾಡಿ, ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಪ್ರಹಾರ ನಡೆದಾಗ ಅದನ್ನು ಖಂಡಿಸಬೇಕಾದ ವಿಜಯಾನಂದ ಕಾಶಪ್ಪನವರ ಸಮಾಜದವರು ತಾವೇ ಹೊಡೆದುಕೊಂಡಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು ಎಂದರು.
ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿದರು. ನ್ಯಾಯವಾದಿ ದಾನೇಶ ಅವಟಿ, ನಿಂಗನಗೌಡ ಸೊಲ್ಲಾಪೂರ, ಶ್ರೀಶೈಲ ಮುಳಜಿ, ಸಿದ್ದು ಹಳ್ಳೂರ, ಈರಣ್ಣ ಶಿರಮಗೊಂಡ, ಬಸಲಿಂಗಪ್ಪ ಜಂಗಮಶೆಟ್ಟಿ, ಮಂಜುನಾಥ ನಿರ್ವಾಣಿ, ಸಂಗು ಬಿರಾದಾರ, ಸಂತೋಷ ಬಿರಾದಾರ ಮತ್ತಿತರರಿದ್ದರು.