ಕಾನೂನು ಬಾಹಿರ ಚಟುವಟಿಕೆ ವಿರುದ್ಧ ಕ್ರಮ : ಸುಬ್ರಹ್ಮಣ್ಯಕ್ಕೆ ಭೇಟಿ ಎಸ್‌ಪಿ ಯತೀಶ್ ಹೇಳಿಕೆ

sp bheti
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಎಸ್‌ಪಿ ಯತೀಶ್ ವೀಕ್ಷಿಸಿದರು. ಅಡಿಷನಲ್ ಎಸ್‌ಪಿ ರಾಜೇಂದ್ರ, ಡಿವೈಎಸ್‌ಪಿ ಅರುಣ್‌ನಾಗೇಗೌಡ, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್, ಸಿಬ್ಬಂದಿ ಉಪಸ್ಥಿತರಿದ್ದರು.
Published on

ಸುಬ್ರಹ್ಮಣ್ಯ: ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಕಂಡುಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಲಾಗುವುದು. ಕಾನೂನು ಕಾಪಾಡಲು ಜಿಲ್ಲೆ ಪೊಲೀಸ್ ಇಲಾಖೆ ಬದ್ಧವಾಗಿದ್ದು, ಇಲ್ಲಿನ ಅಧಿಕಾರಿಗಳು ಅನುಭವಸ್ಥರಾಗಿದ್ದು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್.ತಿಳಿಸಿದರು.

ಮಂಗಳವಾರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರ ಜತೆ ಮಾತನಾಡಿದರು. ಸಾಕಾಷ್ಟು ಭಾರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೂ ಆರೋಪಗಳು ವ್ಯಕ್ತವಾಗುತ್ತವೆ. ಅದರಲ್ಲಿ ಯಾವುದೇ ಆರೋಪ ಸಾಬೀತಾದರೂ ಅಂಥ ಅಧಿಕಾರಿ, ಸಿಬ್ಬಂದಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ಚಟುವಟಿಕೆ, ಅವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ. ಜಿಲ್ಲೆಯೊಳಗೆ ಪೊಲೀಸರ ವರ್ಗಾವಣೆ ಆಗಿರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಠಾಣೆ ಶೀಘ್ರ ಉದ್ಘಾಟನೆ

ಸುಬ್ರಹ್ಮಣ್ಯದ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಬೇಕೆಂಬ ಬೇಡಿಕೆಯಂತೆ ಇದೀಗ ಹೊಸ ಕಟ್ಟಡ ಕಾಮಗಾರಿ ಬಹುತೇಕ ಪೂರ್ತಿಗೊಂಡಿದೆ. ಠಾಣೆಗೆ ಸಂಪರ್ಕ ರಸ್ತೆ ಹಾಗೂ ಆವರಣ ಗೋಡೆ ಕಾಮಗಾರಿ ಪೂರ್ತಿಗೊಂಡ ಕೂಡಲೇ ಹೊಸ ಪೊಲೀಸ್ ಠಾಣಾ ಕಟ್ಟಡ ಉದ್ಘಾಟಿಸಲಾಗುವುದು. ಸುಬ್ರಹ್ಮಣ್ಯದ ಪಾರ್ಕಿಂಗ್ ವ್ಯವಸ್ಥೆಗೆ ಪೂರಕ ಕ್ರಮ ಸೇರಿದಂತೆ ಸುಗಮ ಸಂಚಾರಕ್ಕೆ ಬೇಕಾಗಿ ನೂತನವಾಗಿ ಏಕಮುಖ ಸಂಚಾರದಂತ ಯೋಜನೆ ಮೂಲಕ ಸೂಕ್ತ ವ್ಯವಸ್ಥೆ ಇಲ್ಲಿನ ಠಾಣಾಧಿಕಾರಿಗಳು ಮಾಡಿದ್ದಾರೆ ಎಂದರು.

ಠಾಣೆಗೆ ಆಗಮಿಸಿ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಎಸ್‌ಪಿ ಯತೀಶ್ ಸಭೆ ನಡೆಸಿದರು. ಅಡಿಷನಲ್ ಎಸ್‌ಪಿ ರಾಜೇಂದ್ರ, ಡಿವೈಎಸ್‌ಪಿ ಅರುಣ್‌ನಾಗೇಗೌಡ, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net