ಹರಪನಹಳ್ಳಿ: ಮುಂಗಾರು ಮಳೆಗಾಗಿ ಕಾದಿರುವ ತಾಲೂಕಿನ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಈಗಾಗಲೇ ಭೂಮಿ ಹದಗೊಳಿಸಿದ್ದಾರೆ . ಅಲ್ಲದೆ ಗೊಬ್ಬರ, ಬಿತ್ತನೆ ಬೀಜಗಳನ್ನು ಸಂಗ್ರಹಿಸುತ್ತಿದ್ದಾರೆ.
ರೈತರು ರೋಹಿಣಿ ಮಳೆಗೆ ಊಟದ ಜೊಳವನ್ನು ಬಿತ್ತಬೇಕಾಗಿತ್ತು. ಆದರೆ ಕಳೆದ ವರ್ಷಕ್ಕಿಂತ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಮುಂಗಾರು ಬಿತ್ತನೆಯಲ್ಲಿ ಸ್ವಲ್ಪ ಹಿನ್ನಡೆಯಾಗುವ ಲಕ್ಷಣ ಕಂಡು ಬರುತ್ತಿದೆ.
ಇದನ್ನೂ ಓದಿ: ಬಿತ್ತನೆ ಬೀಜ ವಿತರಣೆ ತ್ವರಿತವಾಗಲಿ – ಸಚಿವ ಸತೀಶ ಜಾರಕಿಹೊಳಿ
88,662 ಹೆಕ್ಟೇರ್ ಬಿತ್ತನೆ ಗುರಿ
ಜೋಳ, ಮೆಕ್ಕೆಜೋಳ, ರಾಗಿ, ಗೋದಿ ಸೇರಿದಂತೆ ವಾಣಿಜ್ಯ ಬೆಳೆ ಒಳಗೊಂಡು ತಾಲೂಕಿನಲ್ಲಿ 88,662 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಬಾರಿ ಮಳೆಯು ಸಕಾಲಕ್ಕೆ ಬಾರದಿದ್ದರೆ ಬಿತ್ತನೆ ಪ್ರಮಾಣ ಕಡಿಮೆಯಾಗಲಿದೆ.
ತಾಲೂಕಿನ ಚಿಗಟೇರಿ, ತೆಲಿಗಿ, ಅರಸೀಕೆರೆ, ಕಸಬಾ ಹೋಬಳಿ ಹಾಗೂ ಹೆಚ್ಚುವರಿಯಾಗಿ ಹಲುವಾಗಲು, ಸಾಸ್ವಿಹಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಇಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಶೇಂಗಾ, ಹೆಸರು, ಉದ್ದು, ಹತ್ತಿ, ಕಬ್ಬು ಒಳಗೊಂಡು ಒಟ್ಟು 85,518 ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತದೆ. ಅಲ್ಲದೆ ಬಿತ್ತನೆಯ ಬೀಜಗಳ ಪ್ರತಿ ಬ್ಯಾಗ್ ಅನ್ನು ಬಾರ್‌ಕೋಡ್ ಮೂಲಕ ವಿತರಣೆ ಮಾಡಲಾಗುತ್ತಿದೆ.
5ಎಕರೆ ಹೊಂದಿರುವ ಸಣ್ಣ ರೈತರಿಗೆ ಮಾತ್ರ ಸಹಾಯಧನದ ಮೂಲಕ ಬೀಜಗಳ ಹಂಚಿಕೆಯಾಗಲಿದೆ. ಇದರಿಂದ ಸರ್ಕಾರದ ಹಣ ವ್ಯರ್ಥವಾಗದೆ, ಪಾರದರ್ಶಕವಾಗಿ ರೈತರಿಗೆ ಬೀಜ ಸಿಗಲು ಅನುಕೂಲವಾಗಲಿದೆ.
7008 ಮೆ.ಟನ್ ಗೊಬ್ಬರ ಮಾರಾಟ ನಿರೀಕ್ಷೆ
ಅರಸೀಕೆರೆ 4, ಚಿಗಟೇರಿ 5, ಕಸಬಾ 4, ತೆಲಿಗಿ 4 ಸೇರಿದಂತೆ ಒಟ್ಟು 17 ವ್ಯವಸಾಯ ಉತ್ಪನ್ನ ಮಾರುಕಟ್ಟೆ ಕೇಂದ್ರಗಳ ಜತೆಗೆ ಅರಸೀಕೆರೆ 27, ಚಿಗಟೇರಿ 14, ಕಸಬಾ 29, ತೆಲಿಗಿಯಲ್ಲಿ 30 ಸೇರಿ ಒಟ್ಟು 100 ಖಾಸಗಿ ಕೇಂದ್ರಗಳ ಮೂಲಕ ಪ್ರಸಕ್ತ ವರ್ಷ ಯೂರಿಯಾ-3315 ಮೆ.ಟನ್, ಡಿಎಪಿ 1276 ಮೆ.ಟನ್, ಕಾಂಪೋಸ್ಟ್ 2377 ಮೆ.ಟನ್, ಎಂಒಪಿ 40 ಮೆ.ಟನ್ ಸೇರಿ ಒಟ್ಟು 7008 ಮೆ.ಟನ್ ಗೊಬ್ಬರ ಮಾರಾಟವಾಗುವ ನಿರೀಕ್ಷೆ ಇದೆ.
23 ಹುದ್ದೆಗಳು ಖಾಲಿ
ತಾಲೂಕು ನಾಲ್ಕು ಹೋಬಳಿಗಳನ್ನು ಹೊಂದಿದ್ದು, ರೈತರಿಗೆ ಅಗತ್ಯ ಸೌಲಭ್ಯ, ಸಲಹೆ, ಮಾರ್ಗದರ್ಶನ ನೀಡುವ ಅಗತ್ಯವಿದೆ. ಆದರೆ, ಇಲ್ಲಿನ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿ 7, ಸಹಾಯಕ ಕೃಷಿ ಅಧಿಕಾರಿ 10, ದ್ವಿ.ದ.ಸ.1, ಬೆರಳಚ್ಚುಗಾರರು 1, ವಾಹನ ಚಾಲಕರು 1, ಡಿ.ದರ್ಜೆ 3 ಸೇರಿ ಒಟ್ಟು 34 ಹುದ್ದೆಗಳ ಪೈಕಿ 23 ಖಾಲಿ ಇವೆ. ಕೂಡಲೇ ಭರ್ತಿ ಮಾಡುವ ಮೂಲಕ ರೈತರಿಗೆ ಕೃಷಿ ಇಲಾಖೆ ನೇರವಾಗಬೇಕಿದೆ.
ಒಂದು ವಾರದಿಂದ ಮಳೆ ಕಡಿಮೆಯಾಗಿದೆ. ಮುಂಗಾರು ಆರಂಭವಾಗಲಿದೆ. ಸೋಮವಾರ ಬಿದ್ದ ಮಳೆಗೆ ರೈತರು ಬಿತ್ತನೆಗೆ ಸಿದ್ಧ್ದತೆ ಮಾಡಿಕೊಳ್ಳಬೇಕು. ಬಿತ್ತನೆ ಬೀಜ, ಗೊಬ್ಬರಕ್ಕೆ ಯಾವುದೇ ಸಮಸ್ಯೆ ಇಲ್ಲ.
| ಗೊಂದಿ ಮಂಜುನಾಥ, ಎಡಿ, ಕೃಷಿ ಇಲಾಖೆ, ಹರಪನಹಳ್ಳಿ
ರೋಹಿಣಿ ಮಳೆ ಉತ್ತಮವಾಗಿದೆ. ಬೀಜ, ಗೊಬ್ಬರದ ಬೆಲೆ ಹಿಂದಿನ ವರ್ಷಕ್ಕಿಂತ ದುಬಾರಿಯಾಗಿದೆ. ಮೆಕ್ಕೆಜೋಳ, ಈರುಳ್ಳಿ ಬಿತ್ತನೆಗೆ ಅನಿವಾರ್ಯವಾಗಿ ಸಿದ್ಧ್ದತೆ ಮಾಡಿಕೊಳ್ಳುತ್ತಿದ್ದೇವೆ.
| ಎನ್.ಅಜ್ಜಯ್ಯ, ರೈತ, ಬಾಗಳಿ