

ಗುರುರಾಜ್ ಬಿ.ಎಸ್. ಬೆಂಗಳೂರು
ಕಳೆದ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದಿದ್ದ ಮಯಾಂಕ್ ಅರ್ಗವಾಲ್, ಆರ್. ಸಮರ್ಥ್, ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್ ಕುಮಾರ್ ಹಾಗೂ ವಾಸುಕಿ ಕೌಶಿಕ್ ದಕ್ಷಿಣ ವಲಯ ಪರ ದುಲೀಪ್ ಟ್ರೋಫಿಯ ಫೈನಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ದಕ್ಷಿಣ ವಲಯದ 75 ರನ್‌ಗಳ ಗೆಲುವಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಕನ್ನಡಿಗ ವಾಸುಕಿ ಕೌಶಿಕ್ (36ಕ್ಕೆ4) ಹಾಗೂ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ (57ಕ್ಕೆ4) ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ದಕ್ಷಿಣ ವಲಯ ತಂಡ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ಎದುರು 75 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿ, ಹಾಲಿ ದೇಶೀಯ ಕ್ರಿಕೆಟ್ ಋತುವಿನ ಮೊದಲ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದೆ. 13 ವರ್ಷಗಳ ಬಳಿಕ ಪ್ರಶಸ್ತಿ ಜಯಿಸಿದ ಹನುಮ ವಿಹಾರಿ ಸಾರಥ್ಯದ ದಕ್ಷಿಣ ವಲಯ ತಂಡ, ಕಳೆದ ವರ್ಷದ ಫೈನಲ್ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.
ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಕುತೂಹಲ ಮೂಡಿಸಿದ ಪಂದ್ಯದ 5ನೇ ಹಾಗೂ ಅಂತಿಮ ದಿನ, ದಕ್ಷಿಣದ 298 ರನ್ ಸವಾಲಿಗೆ ಪ್ರತಿಯಾಗಿ 4ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 182 ರನ್‌ಗಳಿಂದ ಪಶ್ಚಿಮ ವಲಯ ಚೇಸಿಂಗ್ ಮುಂದುವರಿಸಿತು. ಗೆಲುವಿಗೆ ಭಾನುವಾರ ಇನ್ನೂ 116 ರನ್ ಗಳಿಸಬೇಕಾಗಿದ್ದ ಪಶ್ಚಿಮ ವಲಯ ತಂಡ ಭೋಜನಾ ವಿರಾಮಕ್ಕೂ ಮುನ್ನವೇ 84.2 ಓವರ್‌ಗಳಲ್ಲಿ 222 ರನ್‌ಗಳಿಗೆ ಸರ್ವಪತನ ಕಂಡಿತು. ಶನಿವಾರ ಐದು ಗಂಟೆಗೂ ಅಧಿಕ ಕಾಲ ಬ್ಯಾಟಿಂಗ್ ನಡೆಸಿ ಗೆಲುವಿನ ಆಸೆ ಜೀವಂತವಿರಿಸಿದ್ದ ನಾಯಕ ಪ್ರಿಯಾಂಕ್ ಪಾಂಚಾಲ್ (95) ಹಿಂದಿನ ದಿನದ ಮೊತ್ತಕ್ಕೆ 3 ರನ್ ಸೇರಿಸಿ ದಿನದ 3ನೇ ಓವರ್‌ನಲ್ಲಿ ವಿದ್ವತ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಧಮೇಂದ್ರ ಸಿನ್ಹಾ ಜಡೇಜಾ (15), ಚಿಂತನ್ ಗಜ ಹಾಗೂ ಆತಿತ್ ಸೇಠ್ (9) ವೇಗವಾಗಿ ರನ್‌ಗಳಿಸುವ ಭರದಲ್ಲಿ ಸಾಯಿ ಕಿಶೋರ್ ಸ್ಪಿನ್ ಜಾಲಕ್ಕೆ ಬಿದ್ದರು.
ದಕ್ಷಿಣ ವಲಯ: 213 ಹಾಗೂ 230; ಪಶ್ಚಿಮ ವಲಯ: 146 ಹಾಗೂ 84.2 ಓವರ್‌ಗಳಲ್ಲಿ 222 (ಪ್ರಿಯಾಂಕ್ 95, ಡಿ. ಜಡೇಜಾ 15, ಚಿಂತನ್ 0, ವಿ. ಕೌಶಿಕ್ 36ಕ್ಕೆ 4, ಸಾಯಿ ಕಿಶೋರ್ 57ಕ್ಕೆ 4).
ವಿದ್ವತ್ ಕಾವೇರಪ್ಪಗೆ ಅವಳಿ ಸಂಭ್ರಮ
ದುಲೀಪ್ ಟ್ರೋಫಿಯ ಸೆಮಿೈನಲ್‌ನಲ್ಲಿ ಉತ್ತರ ವಲಯ ವಿರುದ್ಧ 7 ವಿಕೆಟ್ ಹಾಗೂ ಫೈನಲ್‌ನಲ್ಲಿ 9 ಟೂರ್ನಿಯಲ್ಲಿ ಒಟ್ಟು 15 ವಿಕೆಟ್ ಕಬಳಿಸಿದ ಕೊಡಗಿನ ಕುವರ ವಿದ್ವತ್ ಕಾವೇರಪ್ಪ ಪಂದ್ಯಶ್ರೇಷ್ಠ ಜತೆಗೆ ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.