

ಬುಲವಾಯೊ: ಟೆಸ್ಟ್ ಕ್ರಿಕೆಟ್ನಲ್ಲಿ ಈಗ ದಾಖಲೆಗಳ ಧಮಾಕಾದ ಸಮಯ. ಶುಭಮಾನ್ ಗಿಲ್ ಸಾರಥ್ಯದ ಭಾರತ ತಂಡ ಎಜ್ಬಾಸ್ಟನ್ನಲ್ಲಿ ರನ್ಮಳೆ ಹರಿಸಿ ಹಲವಾರು ದಾಖಲೆಗಳನ್ನು ಬರೆದ ಬೆನ್ನಲ್ಲೇ ಜಿಂಬಾಬ್ವೆಯ ಬುಲವಾಯೊದಲ್ಲೂ ದಾಖಲೆಗಳ ಸುರಿಮಳೆಯಾಗಿದೆ. ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಮತ್ತು ಹಂಗಾಮಿ ನಾಯಕ ವಿಯಾನ್ ಮುಲ್ಡರ್ (367*ರನ್, 334 ಎಸೆತ, 49 ಬೌಂಡರಿ, 4 ಸಿಕ್ಸರ್) ಆತಿಥೇಯ ಜಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅಮೋ ತ್ರಿಶತಕ ಸಿಡಿಸುವ ಮೂಲಕ ಹಲವಾರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರ 400 ರನ್ಗಳ ವಿಶ್ವದಾಖಲೆಯನ್ನೂ ಮುರಿಯುವ ಅಪೂರ್ವ ಅವಕಾಶವೂ ಮುಲ್ಡರ್ ಮುಂದಿದ್ದರೂ, ಇನಿಂಗ್ಸ್ ಡಿಕ್ಲೇರ್ ಘೋಷಿಸಿ ಗೆಲುವಿಗೆ ಆದ್ಯತೆ ನೀಡುವ ಕೇವಲ 34 ರನ್ಗಳಿಂದ ಅದನ್ನು ತಪ್ಪಿಸಿಕೊಂಡರು.
ಪಂದ್ಯದ ಮೊದಲ ದಿನವೇ 264 ರನ್ ಸಿಡಿಸಿ ಆರ್ಭಟಿಸಿದ್ದ 27 ವರ್ಷದ ಮುಲ್ಡರ್, 2ನೇ ದಿನ ಭೋಜನ ವಿರಾಮದವರೆಗೆ ಬ್ಯಾಟಿಂಗ್ ಮಾಡಿ ಮತ್ತೆ 103 ರನ್ ಕಲೆಹಾಕಿದರು. ಆದರೆ ಭೋಜನ ವಿರಾಮದ ಬಳಿಕ ಮರಳಿ ಬ್ಯಾಟಿಂಗ್ಗೆ ಇಳಿಯದೆ, 114 ಓವರ್ಗಳಲ್ಲಿ 5 ವಿಕೆಟ್ಗೆ 626 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಇದರಿಂದ ಲಾರಾ ದಾಖಲೆ ಮುರಿಯುವ ನಿರೀೆ ಹುಸಿಯಾಯಿತು.
ಮುಲ್ಡರ್ ದಕ್ಷಿಣ ಆಫ್ರಿಕಾದ 2ನೇ ತ್ರಿಶತಕ ಸಾಧಕ ಮತ್ತು ಸರ್ವಾಧಿಕ ರನ್ ಸ್ಕೋರರ್ ಎನಿಸಿದರು. ಹಾಶಿಂ ಆಮ್ಲ ದಕ್ಷಿಣ ಆಫ್ರಿಕಾದ ಮೊದಲ ತ್ರಿಶತಕವೀರ ಮತ್ತು 2012ರ ಓವಲ್ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಗಳಿಸಿದ್ದ ಅಜೇಯ 311 ರನ್ ಹರಿಣಗಳ ಪರ ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಗೆಲುವಿನ ಬಳಿಕ ದಕ್ಷಿಣ ಆಫ್ರಿಕಾ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಜಿಂಬಾಬ್ವೆ ವಿರುದ್ಧ ಸರಣಿ ಆಡುತ್ತಿದ್ದು, ಮೊದಲ ಟೆಸ್ಟ್ನಲ್ಲಿ ಹಂಗಾಮಿ ನಾಯಕರಾಗಿದ್ದ ಕೇಶವ್ ಮಹಾರಾಜ್ ಗಾಯಗೊಂಡ ಕಾರಣ 2ನೇ ಟೆಸ್ಟ್ನಲ್ಲಿ ನಾಯಕತ್ವ ಮುಲ್ಡರ್ ಹೆಗಲೇರಿತ್ತು. ಅವರೀಗ ನಾಯಕತ್ವದ ಮೊದಲ ಟೆಸ್ಟ್ನಲ್ಲೇ ತ್ರಿಶತಕ ಸಿಡಿಸಿದ ಮೊದಲ ನಾಯಕ ಎನಿಸಿದ್ದಾರೆ. ನ್ಯೂಜಿಲೆಂಡ್ನ ಗ್ರಹಾಂ ಡೌಲಿಂಗ್ 239 ರನ್ ಗಳಿಸಿದ್ದು ಹಿಂದಿನ ಗರಿಷ್ಠ.
ಲಾರಾ ದಾಖಲೆ ಸುರಕ್ಷಿತ
ಬ್ರಿಯಾನ್ ಲಾರಾ 2004ರ ಸೇಂಟ್ ಜಾನ್ಸ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಎದುರು ಅಜೇಯ 400 ರನ್ ಗಳಿಸಿದ್ದು ಟೆಸ್ಟ್ ಕ್ರಿಕೆಟ್ನಲ್ಲಿ ಸರ್ವಾಧಿಕ ವೈಯಕ್ತಿಕ ರನ್ ಎನಿಸಿದೆ. 21 ವರ್ಷಗಳ ಬಳಿಕ ಈ ದಾಖಲೆ ಮುರಿಯುವ ಅವಕಾಶ ಮುಲ್ಡರ್ ಮುಂದಿತ್ತು. ತ್ರಿಶತಕ ಸಿಡಿಸಿದ ಬಳಿಕ ಮತ್ತಷ್ಟು ಬಿರುಸಾಗಿ ಆಡಿದ ಮುಲ್ಡರ್ 37 ಎಸೆತಗಳಲ್ಲೇ ಮುಂದಿನ 67 ರನ್ ಸಿಡಿಸಿದರು. ಇದರಿಂದ ಅವರು ಲಾರಾ ದಾಖಲೆ ಮುರಿಯಲು ಯತ್ನಿಸುವ ನಿರೀಕ್ಷೆ ಮೂಡಿದರೂ, ವಿರಾಮದ ನಂತರ ಡಿಕ್ಲೇರ್ ಮಾಡುವ ನಿಸ್ವಾರ್ಥ ನಿರ್ಧಾರ ತೆಗೆದುಕೊಂಡಿದ್ದು ಅಚ್ಚರಿ ಸೃಷ್ಟಿಸಿತು. ವಿರಾಮಕ್ಕೆ ಮೊದಲೇ ದಿಗ್ಗಜರಾದ ಲೆನ್ ಹಟನ್ (364), ಗ್ಯಾರಿ ಸೋಬರ್ಸ್ (365*) ದಾಖಲೆ ಮುರಿದಿದ್ದ ಮುಲ್ಡರ್ ಮುಂದೆ, ಜಯವರ್ಧನೆ (374), ಲಾರಾ (375), ಹೇಡನ್ (380) ದಾಖಲೆಗಳನ್ನು ಮುರಿಯುವ ಅವಕಾಶವೂ ಇತ್ತು.
300 ಎಸೆತದೊಳಗೆ ತ್ರಿಶತಕ
ಮುಲ್ಡರ್ ಟೆಸ್ಟ್ ಕ್ರಿಕೆಟ್ನಲ್ಲಿ 300 ಎಸೆತದೊಳಗೆ ತ್ರಿಶತಕ ಸಿಡಿಸಿದ ಕೇವಲ 2ನೇ ಬ್ಯಾಟರ್ ಎನಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನ 2ನೇ ಅತಿವೇಗದ ತ್ರಿಶತಕ ಸಾಧನೆ ಮಾಡಿದರು. ಮುಲ್ಡ್ 297 ಎಸೆತಗಳಲ್ಲಿ ತ್ರಿಶತಕ ಪೂರೈಸಿದರೆ, 2008ರ ಚೆನ್ನೆ ಟೆಸ್ಟ್ನಲ್ಲಿ ಆಫ್ರಿಕಾ ಎದುರು ಭಾರತದ ವೀರೇಂದ್ರ ಸೆಹ್ವಾಗ್ 278 ಎಸೆತಗಳಲ್ಲೇ ತ್ರಿಶತಕ ಸಿಡಿಸಿದ್ದು ಅತಿವೇಗದ ಸಾಧನೆಯಾಗಿದೆ. ಮುಲ್ಡರ್ 109.88 ಸ್ಟ್ರೆಕ್ರೇಟ್ನಲ್ಲಿ ರನ್ ಗಳಿಸಿದರು. ಇದು ತ್ರಿಶತಕ ಸಾಧಕರ ಪೈಕಿ ಗರಿಷ್ಠ ಸ್ಟ್ರೆಕ್ರೇಟ್ ಆಗಿದೆ.
29: ಮುಲ್ಡರ್ ಟೆಸ್ಟ್ ಕ್ರಿಕೆಟ್ನಲ್ಲಿ 29ನೇ ತ್ರಿಶತಕವೀರ ಮತ್ತು ನಾಯಕನಾಗಿ ತ್ರಿಶತಕ ಸಿಡಿಸಿದ 9ನೇ ಆಟಗಾರ ಎನಿಸಿದರು.
49: ಮುಲ್ಡರ್ ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಸರ್ವಾಧಿಕ ಬೌಂಡರಿ ಬಾರಿಸಿದ ಬ್ಯಾಟರ್ ಎನಿಸಿದರು. ಗ್ರಹಾಂ ಗೂಚ್, ಬ್ರಿಯಾನ್ ಲಾರಾ, ಜಯವರ್ಧನೆ ತಲಾ 43 ಬೌಂಡರಿ ಸಿಡಿಸಿದ್ದು ಹಿಂದಿನ ಗರಿಷ್ಠ.
220: ಮುಲ್ಡರ್ ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಬೌಂಡರಿ (49), ಸಿಕ್ಸರ್ (4) ಮೂಲಕವೇ 2ನೇ ಗರಿಷ್ಠ 220 ರನ್ ಗಳಿಸಿದ ಬ್ಯಾಟರ್ ಎನಿಸಿದರು. ಜಾನ್ ಎಂಡ್ರಿಚ್ 238 ರನ್ (52 ಬೌಂಡರಿ, 5 ಸಿಕ್ಸರ್) ಗಳಿಸಿದ್ದು ಗರಿಷ್ಠ.
367: ಬ್ಯಾಟರ್ ಓರ್ವ ವಿದೇಶಿ ನೆಲದಲ್ಲಿ ಗಳಿಸಿದ ಗರಿಷ್ಠ ರನ್ ಇದಾಗಿದೆ. 1958ರಲ್ಲಿ ಪಾಕಿಸ್ತಾನದ ಹನ್ೀ ಮೊಹಮದ್ ವಿಂಡೀಸ್ನ ಬ್ರಿಜ್ಟೌನ್ನಲ್ಲಿ 337 ರನ್ ಗಳಿಸಿದ್ದು ಹಿಂದಿನ ಗರಿಷ್ಠ.
264: ಮುಲ್ಡರ್ ಮೊದಲ ದಿನ ಗಳಿಸಿದ್ದ 264 ರನ್, ಬ್ಯಾಟರ್ ಒಬ್ಬ ದಿನವೊಂದರಲ್ಲಿ ಗಳಿಸಿದ 6ನೇ ಗರಿಷ್ಠ ಗಳಿಕೆಯಾಗಿದೆ. ಡಾನ್ ಬ್ರಾಡ್ಮನ್ 1930ರಲ್ಲಿ 309 ರನ್ ಸಿಡಿಸಿದ್ದು ಗರಿಷ್ಠವಾಗಿದೆ.