ಆ ಇಬ್ಬರಿಂದಲೇ ನಾವು WTC Final ಗೆದ್ದಿದ್ದು: ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಹೇಳಿಕೆ ವೈರಲ್​! Temba Bavuma

Temba Bavuma
Published on

Temba Bavuma : ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ದೀರ್ಘ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತರಾಗಿ ಹೊರಹೊಮ್ಮಿದ ದಕ್ಷಿಣ ಆಫ್ರಿಕಾ, 27 ವರ್ಷಗಳ ನಂತರ ಎರಡನೇ ಐಸಿಸಿ ಪ್ರಶಸ್ತಿಯನ್ನು ಗೆದ್ದಿದೆ. ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ಹರಿಣಗಳ ಪಡೆ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆದ್ದಿದೆ. ಈ ಮೂಲಕ ಅನೇಕ ವರ್ಷಗಳಿಂದ ಕೇಳಿಬರುತ್ತಿದ್ದ ಚೋಕರ್ಸ್​ ಎಂಬ ಹಣೆ ಪಟ್ಟಿಯನ್ನು ಕಳಚಿದೆ.

ಆಸೀಸ್ ತಂಡ ನೀಡಿದ್ದ 282 ರನ್​ಗಳ ಗುರಿಯನ್ನು ಪ್ರೋಟಿಯಸ್ ತಂಡ 5 ವಿಕೆಟ್ ನಷ್ಟಕ್ಕೆ ತಲುಪಿತು. ಪಂದ್ಯಶ್ರೇಷ್ಠ ಐಡೆನ್ ಮಾರ್ಕ್ರಾಮ್ (136) ದಕ್ಷಿಣ ಆಫ್ರಿಕಾದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರೊಂದಿಗೆ ಟೆಂಬಾ ಬವುಮಾ (66) ನಾಯಕನ ಇನ್ನಿಂಗ್ಸ್ ಆಡಿದರು. ಅದೇ ರೀತಿ, ಬೌಲರ್​ಗಳು ಎರಡೂ ಇನ್ನಿಂಗ್ಸ್​​ಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದರು.

ಕಾಗಿಸೋ ರಬಾಡ ಒಟ್ಟಾರೆ ಎರಡು ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್‌ಗಳನ್ನು ಪಡೆದರೆ, ಲುಂಗಿ ಎನ್‌ಗಿಡಿ ಮೂರು ಮತ್ತು ಮಾರ್ಕೋ ಜಾನ್ಸನ್ ನಾಲ್ಕು ವಿಕೆಟ್‌ಗಳನ್ನು ಪಡೆದರು. ಪಂದ್ಯದ ನಂತರ ಈ ಅದ್ಭುತ ಗೆಲುವಿನ ಬಗ್ಗೆ ಮಾತನಾಡಿದ ನಾಯಕ ಟೆಂಬಾ ಬವುಮಾ, ಈ ದಿನಕ್ಕಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು ಎಂದರು.

ಈ ಗೆಲುವು ನಮಗೆ ತುಂಬಾ ವಿಶೇಷವಾಗಿದೆ. ಮೊದಲನೆಯದಾಗಿ, ಲಾರ್ಡ್ಸ್​ ಮೈದಾನದಲ್ಲಿ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದಗಳು. ಅವರ ಈ ಬೆಂಬಲದಿಂದಾಗಿಯೇ ನಾನು ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿರುವಂತೆ ಭಾಸವಾಯಿತು. ನಾವು ಹಲವು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆವು. ಇದಕ್ಕಾಗಿ ನಾವು ತುಂಬಾ ಶ್ರಮಿಸಿದ್ದೇವೆ. ಒಂದು ದಿನ ಈ ಕ್ಷಣ ನಮಗೆ ಬಂದೇ ಬರುತ್ತದೆ ಎಂಬ ನಂಬಿಕೆಯೊಂದಿಗೆ ನಾವು ಮುಂದುವರೆದೆವು. ಆದರೆ, ಅದೇ ಸಮಯದಲ್ಲಿ, ಹಲವು ಅನುಮಾನು ನಮ್ಮಲ್ಲಿದ್ದವು. ಆದರೆ, ಇಂದು ನಾವು ಅದೆಲ್ಲವನ್ನೂ ನಿವಾರಿಸಿದ್ದೇವೆ. ಒಂದು ತಂಡವಾಗಿ ನಮಗಿದು ಹೆಮ್ಮೆಯ ಗೆಲುವು ಎಂದು ಹೇಳಿದರು.

ನಾವು ಹಲವು ವರ್ಷಗಳಿಂದ ಈ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದೆವು. ಕೆಲ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಲ್ಲಿ ಸೋತ ನಂತರ ನಾವು ಸಾಕಷ್ಟು ನೋವನ್ನು ಅನುಭವಿಸಿದ್ದೇವೆ. ಆದರೆ ನಾವು ಎಂದಿಗೂ ಹಿಂದೆ ಸರಿಯಲಿಲ್ಲ. ನಾವು ಇದೇ ಶಕ್ತಿ ಮತ್ತು ಹೋರಾಟದ ಮನೋಭಾವದಿಂದ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ನಾವು ಕೊನೆಗೂ ನಮ್ಮ ಗುರಿಯನ್ನು ತಲುಪಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾಗಿಸೋ ರಬಾಡ ಅದ್ಭುತ ಆಟಗಾರ. ಎರಡು ದಿನಗಳ ಹಿಂದೆ ನಾನು ಐಸಿಸಿ ಹಾಲ್ ಆಫ್ ಫೇಮ್ ಕಾರ್ಯಕ್ರಮಕ್ಕೆ ಹೋಗಿದ್ದೆ. ಮುಂಬರುವ ಸಮಯದಲ್ಲಿ ರಬಾಡ ಖಂಡಿತವಾಗಿಯೂ ಐಸಿಸಿ ಹಾಲ್ ಆಫ್ ಫೇಮ್‌ನಲ್ಲಿ ಸ್ಥಾನ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯಕ್ಕೂ ಮುನ್ನ ಅವರು ವಿವಾದದಲ್ಲಿ ಸಿಲುಕಿದ್ದರು. ಆದರೆ, ಈ ಅಂತಿಮ ಪಂದ್ಯದಲ್ಲಿ ಅವರು ಚಾಂಪಿಯನ್ ಪ್ರದರ್ಶನ ನೀಡಿದರು. ಮತ್ತೊಂದೆಡೆ, ಮಾರ್ಕ್ರಾಮ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಮಾರ್ಕ್ರಾಮ್ ಅವರು ಟೆಸ್ಟ್ ತಂಡದಲ್ಲಿ ಏಕೆ ಇದಾರೆ ಎಂದು ಅನೇಕ ಜನರು ಕೇಳಿದ್ದಾರೆ. ಆದರೆ, ಮಾರ್ಕ್ರಾಮ್ ಅವರೆಲ್ಲರಿಗೂ ತಮ್ಮ ಬ್ಯಾಟ್‌ನಿಂದ ಉತ್ತರಿಸಿದರು ಎಂದರು.

ಎರಡನೇ ಇನ್ನಿಂಗ್ಸ್‌ನಲ್ಲಿ, ಕೊನೆಯವರೆಗೂ ಯಾರಾದರೂ ಕ್ರೀಸ್‌ನಲ್ಲಿ ಇರಬೇಕೆಂದು ನಾವು ನಿರ್ಧರಿಸಿದ್ದೆವು. ಮಾರ್ಕ್ರಾಮ್ ಆ ಜವಾಬ್ದಾರಿಯನ್ನು ವಹಿಸಿಕೊಂಡರು. ಅಂತಿಮ ಪಂದ್ಯದಲ್ಲಿ ಈ ರೀತಿ ಪ್ರದರ್ಶನ ನೀಡಲು ನನಗೆ ತುಂಬಾ ಸಂತೋಷವಾಗಿದೆ. ನನಗೆ ಮಾತುಗಳು ಬರುತ್ತಿಲ್ಲ. ನಮ್ಮ ದೇಶದ ಜನರು ಸಹ ನಮ್ಮ ಆಚರಣೆಯ ಭಾಗವಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಬವುಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಂದಹಾಗೆ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಇತಿಹಾಸದಲ್ಲಿ ಟೆಂಬಾ ಬವುಮಾ ಅವರ ಹೆಸರು ಸ್ಮರಣೀಯವಾಗಿ ಉಳಿಯುತ್ತದೆ. ದಕ್ಷಿಣ ಆಫ್ರಿಕಾಕ್ಕೆ ಎರಡನೇ ಐಸಿಸಿ ಪ್ರಶಸ್ತಿಯನ್ನು ನೀಡಿದ ನಾಯಕನಾಗಿ ಬವುಮಾ ಇತಿಹಾಸದಲ್ಲಿ ಸೇರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net