

ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳ ಮೇಲೆ ದಾಖಲೆ ಬರೆದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರೆಲ್ಲರೂ ಕ್ರಿಕೆಟ್ಗಾಗಿ ಅಲ್ಲ ಬದಲಿಗೆ ಕರೊನಾ ವಿರುದ್ಧದ ಜಾಗೃತಿಗಾಗಿ ಮತ್ತೊಮ್ಮೆ ಕ್ಯಾಮರಾ ಮುಂದೆ ನಿಂತಿದ್ದಾರೆ.
ಹೌದು... ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆರಂಭಿಸಿರುವ #TeamMaskForceನ ಭಾಗವಾಗಿ ದಿಗ್ಗಜ ಆಟಗಾರರು ಸ್ವತಃ ತಾವೇ ವಿನ್ಯಾಸಗೊಳಿಸಿರುವ ಮಾಸ್ಕ್ಗಳನ್ನು ಧರಿಸುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಧರಿಸುವ ಮಹತ್ವವನ್ನು ಸಾರುತ್ತಿದ್ದಾರೆ.
ಈ ಮಾಸ್ಕ್ಗಳ ಮೇಲೆ ತಮ್ಮ ಸಾಧನೆಯನ್ನು ಸಾರುವ, ತಮ್ಮ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಚುಟುಕುಹೆಸರುಗಳು, ಅದೃಷ್ಟ ಸಂಖ್ಯೆ ಅಥವಾ ತಮ್ಮ ಹೆಸರಿನ ಲಾಂಛನವನ್ನು ಆಟಗಾರರು ಅಳವಡಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.
ಬಿಸಿಸಿಐ ಟ್ವೀಟ್ ಮಾಡಿರುವ ವಿಡಿಯೋ ತುಣುಕಿನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ 10 ಸದಸ್ಯರು ಮಾಸ್ಕ್ ಧರಿಸಿ, ಸುರಕ್ಷಿತವಾಗಿ ಇರುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಮಾಸ್ಕ್ ಮೇಲೆ ವಿ ಎಂಬ ಇಂಗ್ಲಿಷ್ ಅಕ್ಷರ ಹಾಕಿಕೊಂಡಿದ್ದರೆ, ಗಂಗೂಲಿ ದಾದಾ ಎಂದು ಬರೆದುಕೊಂಡಿದ್ದಾರೆ. ರಾಹುಲ್ ದ್ರಾವಿಡ್ ವಾಲ್ ಎಂದು ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಆರಂಭವಾಗುವ ವಿಡಿಯೋ ತುಣುಕಿನಲ್ಲಿ ಸೌರವ್ ಗಂಗೂಲಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೆನ್ಷೇಷನ್ ಸ್ಮೃತಿ ಮಂದನಾ, ರೋಹಿತ್ ಶರ್ಮ, ಹರ್ಭಜನ್ ಸಿಂಗ್, ಮಹಿಳಾ ಕ್ರಿಕೆಟ್ ತಂಡದ ನಾಯಕ ಹರ್ಮನ್ಪ್ರೀತ್ ಕೌರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಮಿಥಾಲಿ ರಾಜ್ ಹಾಗೂ ನಂ.10 ಸಚಿನ್ ತೆಂಡುಲ್ಕರ್ ಕ್ರಮವಾಗಿ ಕಾಣಿಸಿಕೊಳ್ಳುತ್ತಾರೆ.