

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕದಾಟದಲ್ಲಿ ಭಾರತೀಯರ ಓಟ ಇದೀಗ ಮುಕ್ತಾಯಗೊಂಡಿದ್ದು, ಇತ್ತೀಚೆಗಷ್ಟೇ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್, ಪಂದ್ಯ ಆರಂಭಕ್ಕೂ ಮುನ್ನ ದೇಹ ತೂಕದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚಿದ್ದ ಕಾರಣ ಅಂತಿಮ ಸುತ್ತಿನಿಂದ ಅನರ್ಹಗೊಂಡರು. ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಅವರನ್ನು ಫೈನಲ್ ಪಂದ್ಯದಿಂದ ಐಒಸಿ ಅನರ್ಹಗೊಳಿಸಿತು.
ಇದನ್ನೂ ಓದಿ: ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಲಿ
ಒಲಿಂಪಿಕ್ಸ್‌ನ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ಅಧಿಕ ತೂಕದ ಕಾರಣದಿಂದ ಪದಕ ವಂಚಿತಗೊಂಡಿದ್ದಕ್ಕೆ ಭಾರತೀಯರ ಹಾಗೂ ಕ್ರೀಡಾ ಅಭಿಮಾನಿಗಳು ಭಾರೀ ಅಸಮಾಧಾನ ಹೊರಹಾಕಿದ್ದರು. ಫೋಗಟ್ ಅನರ್ಹ ಎಂದು ಹೇಳುತ್ತಿದ್ದಂತೆ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ ನೆಟ್ಟಿಗರು, ವಿನೇಶ್ ಅವರ ಪರಿಶ್ರಮಕ್ಕೆ ಬೆಳ್ಳಿ ಪದಕ ಕೊಡಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದ ಕುಸ್ತಿಪಟು, ತಾನು ಎರಡು ಬೆಳ್ಳಿ ಪದಕಕ್ಕೆ ಅರ್ಹ ಎಂದು ತಿಳಿಸಿದ್ದಾರೆ.
ಈ ಕುರಿತು ಸಿಎಎಸ್ ಆ.10ರ 9 ಗಂಟೆಯೊಳಗೆ ತೀರ್ಪು ನೀಡಬೇಕಿತ್ತು. ಆದ್ರೆ, ಅದನ್ನು ಮುಂದೂಡಿದ ನ್ಯಾಯಾಲಯ ಇಂದು (ಆ.11) ಘೋಷಿಸುತ್ತೇವೆ ಎಂದು ತಿಳಿಸಿತ್ತು. ಕೋಟ್ಯಾಂತರ ಅಭಿಮಾನಿಗಳು ವಿನೇಶ್ರಿಗೆ ನ್ಯಾಯ ಸಿಗಬೇಕು. ಬೆಳ್ಳಿ ಪದಕ ದೊರಕಬೇಕು, ಇದನ್ನೇ ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ತಿಳಿಸಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಆದರೆ, ಇಂದು ಕೂಡ ತೀರ್ಪು ಘೋಷಿಸದ ಸಿಎಎಸ್, ಇದೀಗ ಆ.13ಕ್ಕೆ ಮುಂದೂಡಿದೆ.
ಇನ್ನು ವಿನೇಶ್ ಫೋಗಟ್ ಪರ ಧ್ವನಿ ಎತ್ತಿದ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ, "ವಿನೇಶ್ ಬೆಳ್ಳಿ ಪದಕಕ್ಕೆ ಅರ್ಹರು. ನನಗೆ ನಿಯಮಾವಳಿಗಳು ಏನಿದೆಯೋ ಅದರ ಬಗ್ಗೆ ಅರಿವಿಲ್ಲ. ಅವರು ಫೈನಲ್ ತಲುಪಿದ್ದಾರೆ ಅಂದಮೇಲೆ ಅವರು ಪದಕಕ್ಕೆ ಅರ್ಹರು ಎಂದೇ ಅರ್ಥ. ಅಂತಿಮ ಹಣಾಹಣಿಯ ಹಂತವನ್ನು ತಲುಪಿದ್ದೀರಾ ಎಂದರೆ ಖಂಡಿತ ಚಿನ್ನ ಅಥವಾ ಬೆಳ್ಳಿ ಪದಕ ಪಡೆಯಬೇಕು. ಫೋಗಟ್ರ ಅನರ್ಹತೆ ಸರಿ ಇದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಆದ್ರೆ, ಕನಿಷ್ಠ ಪಕ್ಷ ಮೆಡಲ್ಗೆ ಆಕೆ ಅರ್ಹ" ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).