ಉಕ್ಕೇರಿದ ಸೌಪರ್ಣಾಕಾ ನದಿ, ಕೃಷಿ ಭೂಮಿಗಳು ಜಲಾವೃತ

Published on

ಬೈಂದೂರು: ಕೊಲ್ಲೂರು ಘಾಟಿ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಸೌಪರ್ಣಿಕಾ ನದಿ ಪಾತ್ರದ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ, ಮರವಂತೆ ಭಾಗದಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇನ್ನೊಂದೆಡೆ ತ್ರಾಸಿ ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚನಾ ಫಲಕ ಹಾಗೂ ಬಲೆಗಳನ್ನು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್.ನಾಯ್ಕ ಮತ್ತು ಸಿಬ್ಬಂದಿ ಅಳವಡಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ನೆರೆ ಪೀಡಿತ ಮತ್ತು ಕಡಲ್ಕೊರೆತ ಪ್ರದೇಶವನ್ನು ಡ್ರೋನ್ ಮೂಲಕ ವೀಕ್ಷಿಸಲಾಯಿತು. ನೆರೆ ಸ್ವಲ್ಪ ಇಳಿಮುಖ ಕಂಡಿದ್ದದ್ದರೂ ಘಾಟಿ ಪ್ರದೇಶದಲ್ಲಿ ಮತ್ತೆ ಮಳೆಯಾದರೆ ನೆರೆ ಬರುವ ಸಾಧ್ಯತೆ ಹೆಚ್ಚಿದೆ.

ನಾವುಂದ ಮತ್ತು ನಾಡ ಕುದ್ರುವಿನಲ್ಲೂ ನೆರೆ ಆವರಿಸಿದ್ದು, ಇಲ್ಲಿನ ಹಲವಾರು ಮನೆಯವರು ಆತಂಕದಲ್ಲೇ ದಿನ ಕಳೆಯುವಂತಾಗಿದೆ. ಕುದ್ರುವಿನ ಸುತ್ತಲೂ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದೆ. ವರ್ಷವಿಡೀ ದೋಣಿಯನ್ನೇ ಆಶ್ರಯಿಸಿರುವ ಇಲ್ಲಿನ ನಿವಾಸಿಗಳು ಈಗ ನೆರೆಯಿಂದಾಗಿ ದೋಣಿಯಲ್ಲೂ ಸಂಚರಿಸಲು ಕಷ್ಟಪಡುವಂತಾಗಿದೆ.

ಪ್ರತಿವರ್ಷ ನೆರೆ ಬಂದಾಗ ಮಣ್ಣು ಕೊಚ್ಚಿ ಹೋಗುತ್ತಿದ್ದು, ನದಿ ದಡದಲ್ಲಿ ತಡೆಗೋಡೆ ಇಲ್ಲದಿರುವುದರಿಂದ ವರ್ಷದಿಂದ ವರ್ಷಕ್ಕೆ ನದಿ ಕೊರೆತ ಜಾಸ್ತಿಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net