ಯೋಗಕ್ಷೇಮ: ಸಮರ್ಥ ಪಿನಿಯಲ್ ಗ್ರಂಥಿಗಾಗಿ ಸೂರ್ಯಪಾನ

Sudina-1
Published on

ಸೂರ್ಯಪಾನಯೋಗಿ ಎಂದೇ ಪ್ರಖ್ಯಾತರಾದ 64 ವರ್ಷದ ಹೀರಾರತನ್ ಮಾನೇಕ್ ಅವರನ್ನು ಪರೀಕ್ಷೆಗೆ ಗುರಿಮಾಡಿದ್ದ ಅಹಮದಾಬಾದಿನ ಡಾ. ಸುಧೀರ್ ಷಾ ಅವರ ವಾದ ಹೀಗಿದೆ. ಸೂರ್ಯಪಾನದ ಪ್ರತ್ಯಕ್ಷ ಪ್ರಮಾಣವಾದ ಮಾನೇಕ್ ಅವರನ್ನು 411 ದಿನಗಳ ವೈದ್ಯಕೀಯ ನಿರೀಕ್ಷಣೆಯಲ್ಲಿರಿಸಿದಾಗ ಅವರು ಯಾವುದೇ ಆಹಾರವನ್ನು ಸೇವಿಸುತ್ತಿಲ್ಲ ಎಂಬುದು ಖಚಿತವಾಗಿತ್ತು ಹಾಗೂ ಅವರು ಈ ನಿರಾಹಾರದಿಂದ ಯಾವುದೇ ನಿಶ್ಯಕ್ತಿಗೆ ಗುರಿಯಾಗಿರಲಿಲ್ಲ. ಅವರು ತಮ್ಮ ಎಂದಿನ ಚಟುವಟಿಕೆಯಲ್ಲಿ ನಿರತರಾಗಿದ್ದರು. (ಮಾಹಿತಿ: http://sungazing.vpinf.com/shah-hypoth-411fast2.html) ಷಾ ಅವರ ಪ್ರಕಾರ, ‘ಈ ಪ್ರಕ್ರಿಯೆಗೆ ಕಾರಣ ಮೂರನೆಯ ಕಣ್ಣು ಎಂದು ಕರೆಯಲ್ಪಡುವ ಮನುಷ್ಯನ ಮಿದುಳಿನಲ್ಲಿರುವ ಅತಿ ಚಿಕ್ಕ ಗಾತ್ರದ ಪಿನಿಯಲ್ ಗ್ಲಾಂಡ್. ಒಂದು ಬಟಾಣಿ ಕಾಳಿನ ಗಾತ್ರದ ಈ ಗ್ರಂಥಿಯ ಸಾಧಾರಣ ಗಾತ್ರ 6 ಮಿ.ಮೀ. x 6 ಮಿ.ಮೀ. ಎಂದು ಕ್ಯಾಟ್​ಸ್ಕ್ಯಾನ್​ನಿಂದ ಸಾಬೀತಾಗಿದೆ.

ಸುಮಾರು 0.1 ಗ್ರಾಂ ತೂಕದ ವಿಕಾಸದ ಪಳೆಯುಳಿಕೆ ಎನಿಸಿಕೊಳ್ಳುವ ಮಿದುಳಿನ ಮಧ್ಯಭಾಗದಲ್ಲಿ ಭ್ರೂಮಧ್ಯೆ ಇರುವ ಪಿನಿಯಲ್ ಗ್ರಂಥಿಯ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಬಹಳ ದಿನಗಳವರೆಗೆ ಇದರ ಕೆಲಸವೇನು ಎಂಬುದು ವಿಜ್ಞಾನಿಗಳಿಗೆ ತಿಳಿದಿರಲಿಲ್ಲ. ಈಗ ಅನೇಕ ವಿಜ್ಞಾನಿಗಳು - ಈ ಅಂಗವು ದೇಹದ ಶಾಖ, ಆರ್ದ್ರತೆ ಇತ್ಯಾದಿ ಭೌತಿಕ ಸಂತುಲವನ್ನು ಕಾಪಾಡುವುದರೊಟ್ಟಿಗೆ, ಅತೀಂದ್ರಿಯ ಜ್ಞಾನದಂತಹ ಅಭೌತಿಕ ಅರಿವನ್ನು ನೀಡುವ ಕೆಲಸ ಮಾಡುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಪಿನಿಯಲ್ ಗ್ರಂಥಿಯ ಪ್ರಮುಖ ಕಾರ್ಯಗಳಲ್ಲಿ ಕಾನ್ಸರ್ ನಿಯಂತ್ರಣ, ಭಾವನಾಸಂಸ್ಕಾರ, ಸ್ತ್ರೀಯರ ಹಾಮೋನ್ ಸಂತುಲಿತ ಬಿಡುಗಡೆ, ಹೃದಯ ಹಾಗೂ ನಿದ್ರಾ ಸಂಬಂಧಿ ಚಟುವಟಿಕೆ ಸಹಕಾರಿ ಮತ್ತು ಮೆಂಟೋಸಿನ್ ಉತ್ಪಾದನೆಗೆ ಕಾರಣವಾಗಿದೆ.

ಇದು ಫೋಟೋ ರಿಸೆಪ್ಟರ್ ಕಣಗಳನ್ನು ಸ್ಪಂದಿಸುವ ಅಂಗವಾಗಿ ಷಾ ಅವರು ಪರಿಗಣಿಸುತ್ತಾರೆ. ಸಸ್ಯಗಳು ಯಾವ ರೀತಿ ತಮ್ಮಲ್ಲಿರುವ ಕ್ಲೋರೋಫಿಲ್​ನಿಂದ ದ್ಯುತಿಸಂಶ್ಲೇಷಣಾ ಕ್ರಿಯೆಯಲ್ಲಿ ಭಾಗವಹಿಸಿ ಸಸ್ಯಕ್ಕೆ ಬೇಕಾದ ಶಕ್ತಿಯನ್ನು ಪಡೆದುಕೊಳ್ಳುತ್ತವೆಯೋ ಹಾಗೆಯೇ ಸೂರ್ಯನನ್ನು ನೇರವಾಗಿ ಕಣ್ಣಿನ ಮೂಲಕ ನೋಡುವುದರಿಂದ ಪಿನಿಯಲ್ ಗ್ಲಾಂಡ್ ಇಂತಹ ಕೆಲಸವನ್ನು ಮಾಡುತ್ತಿರಬೇಕು ಎಂಬ ನಿರ್ಧಾರಕ್ಕೆ ಷಾ ಬರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಮಾನೇಕ್ ಅವರ ಕ್ಯಾಟ್ ಸ್ಕಾನ್ ಮಾಡಿದಾಗ ದೊರಕಿದ ಫಲಿತಾಂಶದತ್ತ ಗಮನ ಸೆಳೆಯುತ್ತಾರೆ. ಮಾನೇಕ್ ಅವರ ಪಿನಿಯಲ್ ಗ್ಲಾಂಡ್​ನ ಗಾತ್ರ 8 ಮಿ.ಮೀ.x 11 ಮಿ.ಮೀ. ಇದು ಇನ್ನಿತರ ಸೂರ್ಯಪಾನಿಗಳ ಕ್ಯಾಟ್ ಸ್ಕಾನ್ ವರದಿಗಳಲ್ಲೂ ಕಾಣಿಸುತ್ತದೆ. ಆಧ್ಯಾತ್ಮಿಕವಾಗಿ ನೋಡುವುದೇ ಆದರೆ ಈ ಅಂಗವನ್ನೇ ಸಾಧಕರು ಆಜ್ಞಾಚಕ್ರವೆಂದು ಕರೆಯುತ್ತಾರೆ.

ಪತಂಜಲಿ ಮಹರ್ಷಿಗಳು, ‘ಸೂರ್ಯನ ಮೇಲೆ ಸಂಯಮ ಮಾಡಿದರೆ ಭುವನದ ಜ್ಞಾನವುಂಟಾಗುತ್ತದೆ (ಭುವನಜ್ಞಾನಂ ಸೂರ್ಯು ಸಂಯಮಾತ್) ಎಂದಿರುವರು. ಮೂಲಾಧಾರಾದಿ ಆರು ಚಕ್ರಗಳೆಲ್ಲ ಸುಷುಮ್ನಾ ನಾಡಿಯ ಮಧ್ಯದಲ್ಲಿವೆ. ಅವು ಈ ಚಕ್ರಗಳಲ್ಲೇ ಹಾದುಹೋಗುತ್ತದೆ. ಇಡಾ, ಪಿಂಗಳಾ, ಸುಷುಮ್ನೆಗಳು ಸೇರುವ ಸ್ಥಾನಕ್ಕೆ ಮುಕ್ತ ತ್ರಿವೇಣಿ ಎಂದೂ, ಪುನಃ ಮೇಲೆ ಆಜ್ಞಾಚಕ್ರದಲ್ಲಿ ಇವು ಮೂರು ಸಂಗಮಿಸುವ ಸ್ಥಾನಕ್ಕೆ ತ್ರಿಕೂಟವೆಂದು ಹೆಸರಿಸಲಾಗಿದೆ. ಪಿಂಗಳಾನಾಡಿಯನ್ನು ಸೂರ್ಯನಾಡಿಯೆಂದು ಕರೆಯುತ್ತಾರೆ.

ಆಜ್ಞಾಚಕ್ರದಲ್ಲಿ ಮನಸ್ಸನ್ನು ಸ್ಥಿರಗೊಳಿಸಿ ಸೂರ್ಯಧ್ಯಾನ ಮಾಡುವುದರಿಂದ ದಿವ್ಯದರ್ಶನಗಳುಂಟಾಗುತ್ತವೆ. ವಾಕ್ಸಿದ್ಧಿಯು ಲಭಿಸುತ್ತದೆ. ಉಪಾಸನಾ ದೇವತೆಯ ದರ್ಶನಭಾಗ್ಯ ಉಂಟಾಗುತ್ತದೆ. ಅಣಿಮಾದಿ ಅಷ್ಟ ಸಿದ್ಧಿಗಳ ಪ್ರಾಪ್ತಿಯಾಗುತ್ತವೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net