ಪತಿಯ ಆಸರೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಮಹಿಳೆಗೆ ಸೂರು ಒದಗಿಸಿದ ಸೋನು ಸೂದ್​

sonu sood
Published on

ನವದೆಹಲಿ: ಬಾಲಿವುಡ್​ ನಟ ಸೋನು ಸೂದ್​ ಇತ್ತೀಚೆಗೆ ತಮ್ಮ ನಟನೆ, ಸಿನಿಮಾಗಳ ಹೊರತಾಗಿ ಸಮಾಜಸೇವೆ ಮೂಲಕ ಭಾರಿ ಜನಪ್ರಿಯತೆ ಗಳಸಿಕೊಳ್ಳುತ್ತಿದ್ದಾರೆ. ಕೋವಿಡ್​-19 ಲಾಕ್​ಡೌನ್​ ಸಮಯದಲ್ಲಿ ತೊಂದರೆಗೀಡಾಗಿದ್ದ ಸಹಸ್ರಾರು ವಲಸೆ ಕಾರ್ಮಿಕರಿಗೆ ಅವರವರ ಊರು ತಲುಪಲು ಬಸ್​ಗಳನ್ನು ವ್ಯವಸ್ಥೆ ಮಾಡಿದ್ದ ಇವರು, ಇದೀಗ ಪತಿಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದ ಮಹಿಳೆಯ ತಲೆ ಮೇಲೊಂದು ಸೂರು ಒದಗಿಸಿ ಹೊಸ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದಾರೆ.

ಸೋನು ಸೂದ್​ ಅವರ ಅಭಿಮಾನಿಯೊಬ್ಬ ಟ್ವಿಟ್ಟರ್​ ಮೂಲಕ ಅವರನ್ನು ಸಂಪರ್ಕಿಸಿ, ಸ್ವಾಮಿ, ಈ ಚಿತ್ರದಲ್ಲಿ ಕಾಣುತ್ತಿರುವ ಮಹಿಳೆಯ ಪತಿ ಸತ್ತುಹೋಗಿದ್ದಾರೆ. ಬಾಡಿಗೆ ಮನೆಯ ಮಾಲೀಕ ಮಕ್ಕಳು ಹಾಗೂ ಸಾಮಾನು ಸಮೇತ ಬೀದಿಗೆ ಹಾಕಿದ್ದಾನೆ. ಈಕೆ ಒಂದು ತಿಂಗಳಿಂದ ಬೀದಿ ಬದಿ ಬಿದ್ದಿದ್ದು, ಮಕ್ಕಳು ಹಸಿವಿನಿಂದ ಕಂಗೆಟ್ಟಿವೆ. ಈಕೆಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆಯುವ ನಿರೀಕ್ಷೆಯಿಲ್ಲ. ನೀವಾದರೂ ಈಕೆಗೆ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದ.

ಇದಕ್ಕೆ ಸ್ಪಂದಿಸಿರುವ ಸೋನು ಸೂದ್​, ನಾಳೆ ಈಕೆಯ ತಲೆ ಮೇಲೊಂದು ಸೂರು ಇರುತ್ತದೆ. ಆ ಪುಟ್ಟ ಮಕ್ಕಳಿಗೆ ಒಂದು ಮನೆ ಇರುತ್ತದೆ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ಮನೆಯ ವ್ಯವಸ್ಥೆಯನ್ನು ಹೇಗೆ ಮಾಡುತ್ತಾರೆ ಎಂಬುದರ ವಿವರಣೆ ಸಿಕ್ಕಿಲ್ಲ. ಆದರೆ ತೊಂದರೆಗೀಡಾಗಿದ್ದ ವಲಸೆ ಕಾರ್ಮಿಕರು ಸುರಕ್ಷಿತವಾಗಿ ತಮ್ಮ ತಮ್ಮ ಊರುಗಳನ್ನು ತಲುಪುವಂತೆ ಮಾಡಿದ ಬಾಲಿವುಡ್​ ನಟ ನಿಜವಾಗಿಯೂ ಆ ಮಹಿಳೆಗೆ ಒಂದು ಸೂರಿನ ಆಸರೆ ಕಲ್ಪಿಸಿಕೊಡುತ್ತಾರೆ ಎಂಬುದು ಅವರ ಅಭಿಮಾನಿಗಳ ನಿರೀಕ್ಷೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net