

ಮುಂಬೈ: ಸಿನಿ ಪರದೆಯ ಮೇಲೆ ವಿಲನ್ ಆಗಿ ಕಾಣಿಸಿಕೊಂಡು, ನಿಜ ಜೀವನದಲ್ಲಿ ಹೀರೋ ಆದ ಸೋನು ಸೂದ್ ಇದೀಗ ಹೊಸದೊಂದು ಪ್ರತಿಜ್ಞೆ ಮಾಡಿದ್ದಾರೆ. ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಜನರನ್ನು ಗುರುತಿಸಿ, ಅವರು ಮಾಡುತ್ತಿರುವ ಸಹಾಯಕ್ಕೆ ಜನರು ಕೈ ಮುಗಿದು ನಮಸ್ಕರಿಸಲಾರಂಭಿಸಿದ್ದಾರೆ.
ಕೆಲಸವಿಲ್ಲದವರು ಸ್ವಾವಲಂಭಿಯಾಗಿ ಬದುಕು ಆರಂಭಿಸಬೇಕು ಎನ್ನುವ ಕಾರಣಕ್ಕೆ ಸೋನು ಸೂದ್ ಇ ರಿಕ್ಷಾಗಳನ್ನು ಖರೀದಿಸಿದ್ದಾರೆ. 100 ಇ ರಿಕ್ಷಾಗಳನ್ನು ಖರೀದಿಸಿ ಅದನ್ನು ಕೆಲಸವಿಲ್ಲದವರಿಗೆ ಕೊಟ್ಟಿದ್ದಾರೆ. ಇಷ್ಟು ದಿನ ಖಾಲಿ ಕುಳಿತಿದ್ದ ಜನರು ಇದೀಗ ಈ ಇ-ಆಟೋರಿಕ್ಷಾಗಳಿಂದ ತಮ್ಮ ಜೀವನವನ್ನು ನಿರ್ಮಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಬದುಕಲ್ಲಿ ಏನೂ ಉಳಿದಿಲ್ಲ ಎಂದುಕೊಂಡಿದ್ದಾಗಿ ಸೋನು ಸೂದ್ ದೇವರ ರೂಪದಲ್ಲಿ ಬಂದಿದ್ದಾರೆ ಎಂದು ತುಂಬು ಮನಸ್ಸಿನಿಂದ ಧನ್ಯವಾದ ಅರ್ಪಿಸಿದ್ದಾರೆ.
ಇ ರಿಕ್ಷಾಗಳನ್ನು ಪಡೆದ ಜನರ ಕಣ್ಣಲ್ಲಿನ ಸಂತೋಷವನ್ನು ತೋರುವ ಒಂದು ವಿಡಿಯೋವನ್ನು ಸೋನು ಸೂದ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ನನ್ನ ಪ್ರಯಾಣವನ್ನು ವಿಶೇಷವಾಗಿಸಿದೆ ಎಂದು ಹೇಳಿದ್ದಾರೆ.
ಸಿನಿಮಾಗಳಲ್ಲಿ ವಿಲನ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋನು ಸೂದ್ ಲಾಕ್ಡೌನ್ ಸಮಯದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಲಾಕ್ಡೌನ್ ಸಮಯದಲ್ಲಿ ದೂರದ ಊರಿಗೆ ನಡೆದು ಹೋಗುತ್ತಿದ್ದ ಜನರಿಗೆ ಅವರು ಮಾಡಿದ ಸಹಾಯ ದೇಶದ ಚಿತ್ರರಂಗವನ್ನು ಬಡಿದೆಬ್ಬಿಸಿತ್ತು. ಸಾವಿರಾರು ಜನರು ಸೂದ್ ಸಹಾಯದಿಂದಾಗಿ ನಿಟ್ಟುಸಿರು ಬಿಡುವಂತಾಗಿತ್ತು. (ಏಜೆನ್ಸೀಸ್)