ವಿಜಯವಾಣಿ ಸುದ್ದಿಜಾಲ ಹೆಬ್ರಿ
28 ವರ್ಷಗಳ ಬಳಿಕ ಮಗ ಮನೆ ಸೇರಿದ ಘಟನೆ ವರಂಗ ಗ್ರಾಪಂ ವ್ಯಾಪ್ತಿಯ ಪಡುಕುಡೂರು ಹೊಸಬೆಟ್ಟು ಎಂಬಲ್ಲಿ ವರದಿಯಾಗಿದೆ.
ದೈವದ ಚಾಕರಿ ಮಾಡುತ್ತಿರುವ ಸುಂದರ ಪೂಜಾರಿ ಅವರ ಮಗ ಭೋಜ ಮನೆ ಬಿಟ್ಟು ಹೋಗಿ 28 ವರ್ಷಗಳು ಕಳೆದಿತ್ತು. ಇದೇ ಚಿಂತೆಯಲ್ಲಿದ್ದ ತಂದೆ ಕಳೆದ ವರ್ಷ ಬ್ರಹ್ಮಬೈದರ್ಕಳ ಕೋಲದ ಸಂದರ್ಭ ದೈವದ ಬಳಿ ಹರಕೆ ಸಲ್ಲಿಸಿದ್ದರು. ದೈವಗಳು ಒಂದು ವರ್ಷದ ಒಳಗೆ ಮಗನನ್ನು ಮನೆಗೆ ಕರೆಸುವ ಅಭಯ ನೀಡಿದ್ದವು. ದೈವಗಳು ಅಭಯ ನೀಡಿದ ಒಂದೇ ವರ್ಷದಲ್ಲೇ ಪುತ್ರ ಮನೆಗೆ ಬಂದಿದ್ದಾನೆ ಎಂದು ತಂದೆ ಖಷಿಪಟ್ಟಿದ್ದಾರೆ.
ವೀಡಿಯೋ ನೋಡಿ ಬಂದ ಮಗ
2023ರಲ್ಲಿ ಡಿಸೆಂಬರ್‌ನಲ್ಲಿ ನಡೆದ ಪಡುಕುಡೂರು ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ಶೈಲಿಯ ಕಂಬಳದಲ್ಲಿ ಉಡುಪಿಯ ಕಂಡೀರ ಖ್ಯಾತಿಯ ಉಪನ್ಯಾಸಕ ಮಂಜುನಾಥ್ ಕಾಮತ್ ಫೇಸ್‌ಬುಕ್‌ನಲ್ಲಿ ಹಾಗೂ ಯೂಟ್ಯೂಬ್‌ನಲ್ಲಿ ದೈವದ ಕಂಬಳದ ಚಾಕರಿ ಮಾಡುತಿದ್ದ ವಿಡಿಯೋವನ್ನು ಮಾಡಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಂದೆಯನ್ನು ನೋಡಿದ್ದ ಮಗ ಭೋಜ ತಂದೆಯನ್ನು ನೋಡಲು ಇತ್ತೀಚೆಗೆ ಹುಬ್ಬಳ್ಳಿಯಿಂದ ಬಂದಿದ್ದರು. 20ನೇ ವಯಸ್ಸಿನಲ್ಲಿ ಉದ್ಯೋಗದ ನಿಮಿತ್ತ ಭೋಜ ಮನೆ ಬಿಟ್ಟು ಹೋದವರು ವಾಪಸಾಗಿರಲಿಲ್ಲ.
ಮಗನನ್ನು ಗುರುತು ಹಿಡಿದ ವೈಖರಿಯೇ ವಿಚಿತ್ರ
ಭೋಜ ಪೂಜಾರಿಯವರು ಮನೆಗೆ ಆಗಮಿಸಿದಾಗ ಮನೆಯವರು ನಂಬುವ ಸ್ಥಿತಿಯಲ್ಲೇ ಇರಲಿಲ್ಲ. ಆದರೆ ತಂದೆ, ಮಗನ ಕೈಯಲ್ಲಿದ್ದ ಗುಳ್ಳೆಯ ಗುರುತನ್ನು ಪತ್ತೆ ಹಚ್ಚಿ ಮಗನನ್ನು ಖಾತ್ರಿಯಾಗಿಸಿದ್ದಾರೆ. ಇತ್ತೀಚೆಗೆ ಭೋಜ ಪೂಜಾರಿ ಪಡುಕುಡೂರಿನ ಹೊಸಬೆಟ್ಟು ಮನೆಗೆ ಬಂದು ತಂದೆ ಹಾಗೂ ತಾಯಿಯ ಆಶಿರ್ವಾದ ಪಡೆದಿದ್ದಾರೆ. ಬಳಿಕ ತಾಯಿ ಸುಶೀಲಾ ಅನಾರೋಗ್ಯದಿಂದ ಮೃತಪಟ್ಟರು.
28 ವರ್ಷಗಳ ಬಳಿಕ ಮನೆಗೆ ಬಂದಿದ್ದೇನೆ. ಫೇಸ್‌ಬುಕ್ ಖಾತೆ ಉಡುಪಿಯ ಕಂಡೀರ ಸಾಮಾಜಿಕ ಜಾಲತಾಣವೇ ನನಗೆ ವರದಾನವಾಯಿತು. ತಂದೆಯ ದೈವಗಳ ಚಾಕರಿ ನನಗೆ ಮನೆಗೆ ಬರಲು ಪ್ರೇರಣೆ ನೀಡಿತು.
-ಭೋಜ ಪೂಜಾರಿ ಸುಂದರ ಪೂಜಾರಿ ಮಗಬ್ರಹ್ಮ ಬೈದರ್ಗಳ ದೈವಗಳಿಗೆ ಹರಕೆಯನ್ನು ಹೊತ್ತಿದ್ದೆ. ನನ್ನ ಕನಸು ನನಸಾಗಿದೆ. ನನ್ನ ಮಗ ಮನೆಗೆ ಆಗಮಿಸಿದ್ದಾನೆ. ದೈವ ದೇವರು ಹಾಗೂ ಸಾಮಾಜಿಕ ಜಾಲತಾಣಗಳು ಪ್ರೇರಣೆಯಾಗಿವೆ.
-ಸುಂದರ ಪಡುಕುಡೂರು ದೈವದ ಚಾಕರಿ ಮಾಡುವವರು.