

ವಿಜಯವಾಣಿ ಸುದ್ದಿಜಾಲ ಉಡುಪಿ
ಹಣ ನೀಡುವಂತೆ ತಾಯಿಯೊಂದಿಗೆ ನಿತ್ಯ ಜಗಳವಾಡುತ್ತಿದ್ದ ಪುತ್ರನೇ ಹೆತ್ತಮ್ಮನ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ಪದ್ಮಾಬಾಯಿ ನಾಯಕ (45) ಹತ್ಯೆಯಾದ ಮಹಿಳೆಯಾಗಿದ್ದು, ಈಶ ನಾಯಕ (26) ಅಮ್ಮನನ್ನೇ ಕೊಂದ ದುರುಳ.
ಜೂ.19ರಂದು ಈಶ ನಾಯಕನು ತನ್ನ ಚಿಕ್ಕಮ್ಮ (ತಾಯಿಯ ಸಹೋದರಿ) ಶಿಲ್ಪಾ ಎಂಬವರಿಗೆ ಮೊಬೈಲ್ ಕರೆ ಮಾಡಿ, ತಾಯಿ ಏಳುತ್ತಿಲ್ಲ. ಮಲಗಿದಲ್ಲಿಯೇ ಇದ್ದಾಳೆ ಎಂದು ತಿಳಿಸಿದ್ದಾನೆ. ಆಕೆ ಬೆಳಗ್ಗೆ 9:45ಕ್ಕೆ ಮನೆಗೆ ಬಂದು ಪದ್ಮಾಬಾಯಿಯನ್ನು ಚಿಕಿತ್ಸೆಗಾಗಿ ಉಡುಪಿಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಪರೀಕ್ಷಿಸಿದ ವೈದ್ಯರು ಮಹಿಳೆ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.
ಪದ್ಮಾಬಾಯಿಯ ಕುತ್ತಿಗೆ ಕೆಂಪಾಗಿದ್ದು, ಆಕೆಯ ಕುತ್ತಿಗೆಯನ್ನು ಯಾರೋ ಹಿಸುಕಿ ಹತ್ಯೆ ಮಾಡಿರುವ ಶಂಕೆ ಬಂದ ಹಿನ್ನೆಲೆಯಲ್ಲಿ ಸಹೋದರಿ ಶಿಲ್ಪಾ, ಅಕ್ಕನ ಸಾವಿನಲ್ಲಿ ಸಂಶಯವಿದೆ. ಆಕೆಯನ್ನು ಕೊಲೆ ಮಾಡಲಾಗಿದೆ. ಸೂಕ್ತ ತನಿಖೆ ನಡೆಸುವಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.
ತನಿಖೆ ಮುಂದುವರಿಸದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಾಗಾರಕ್ಕೆ ತಂದರು. ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ಕತ್ತು ಹಿಸುಕಿದ್ದರಿಂದ ಉಸಿರಾಟ ನಿಂತು ಮಹಿಳೆ ಮೃತಪಟ್ಟಿದ್ದಾಗಿ ವರದಿ ನೀಡಿದ್ದರು.
ಪದ್ಮಾಬಾಯಿ ಸೊಂಟ ನೋವಿನಿಂದ ಬಳಲುತ್ತಿದ್ದು, ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜೂ.18ರಂದು ರಾತ್ರಿ 9ಕ್ಕೆ ವಿಜಯನಗರ ಜಿಲ್ಲೆಯಲ್ಲಿರುವ ತಂಗಿ ಶಿಲ್ಪಾ, ಅಕ್ಕನೊಂದಿಗೆ ಮಾತನಾಡಿದ್ದಳು. ನನಗೆ ತುಂಬ ಸೊಂಟ ನೋವಾಗುತ್ತಿದೆ. ಏಳಲೂ ಆಗುವುದಿಲ್ಲ ಎಂದಿದ್ದರು. ಶಿಲ್ಪಾ ಅವರ ಇನ್ನೊಂದು ಅಕ್ಕ ಮೀರಾಬಾಯಿ ಅವರೂ ಕರೆ ಮಾಡಿ, ನೀನು ನಾಳೆ ಮಲ್ಪೆಗೆ ಬಾ. ಇಲ್ಲಿನ ವೈದ್ಯರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದರು. ನನ್ನಲ್ಲಿ ಹಣ ಇಲ್ಲ. ಬೇಡ ಎಂದು ಪದ್ಮಾಬಾಯಿ ತಿಳಿಸಿದ್ದರು. ನಾನು ಹಣ ಕೊಡುತ್ತೇನೆ ಬಾ ಎಂದು ತಿಳಿಸಿದ್ದು, ಪದ್ಮಾಬಾಯಿ ಒಪ್ಪಿದ್ದರು. ಬಳಿಕ ರಾತ್ರಿ 9:30ರ ವೇಳೆಯಲ್ಲಿ ಮಗ ಈಶ ನಾಯಕನು ಚಿಕ್ಕಮ್ಮ ಶಿಲ್ಪಾಗೆ ಫೋನ್ ಮಾಡಿ, ಒಂದು ಸಾವಿರ ರೂ. ಇದ್ದರೆ ಫೋನ್ ಪೇ ಮಾಡು. ತಾಯಿಗೆ ಸೌಖ್ಯವಿಲ್ಲ, ಅಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದಿದ್ದನು. ಶಿಲ್ಪಾ ಫೋನ್ ಪೇ ಮಾಡಿದರೂ ಸಹ ಸರ್ವರ್ ತೊಂದರೆಯಿಂದ ಹಣ ವರ್ಗಾವಣೆ ಆಗಿರಲಿಲ್ಲ. ಬಳಿಕ ತಾಯಿಯೊಂದಿಗೆ ಹಣಕ್ಕಾಗಿ ಜಗಳವಾಡಿದ ಪುತ್ರ, ಕತ್ತು ಹಿಸುಕಿ ಸಾಯಿಸಿದ್ದಾನೆ. ಜೂ.19ರ ಬೆಳಗ್ಗೆ ಮತ್ತೆ ಚಿಕ್ಕಮ್ಮನಿಗೆ ಕರೆ ಮಾಡಿ ಅಮ್ಮ ಏಳುತ್ತಿಲ್ಲ. ಮಲಗಿದ್ದಲ್ಲಿಯೇ ಇದ್ದಾಳೆ ಎಂದು ಸುಳ್ಳು ಮಾಹಿತಿ ನೀಡಿದ್ದ.
ಶಂಕೆಯಂತೆಯೇ ಮಣಿಪಾಲ ಪೊಲೀಸರು ಪುತ್ರ ಇಶ ನಾಯಕನ ವಿಚಾರಣೆ ನಡೆಸಿದರು. ಹಣಕ್ಕಾಗಿ ಹಾಗೂ ಕೌಟುಂಬಿಕ ಕಲಹದಿಂದಾಗಿ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಆತನನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. | ಹರಿರಾಮ ಶಂಕರ್. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ