

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮ ನೇತೃತ್ವದ ಆತಿಥೇಯ ಭಾರತವನ್ನು ಸೋಲಿಸುವುದು ಎದುರಾಳಿ ತಂಡಕ್ಕೆ ಸುಲಭದ ಮಾತೇ ಅಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ನಂಬಿದ್ದಾರೆ. ಅಲ್ಲದೆ, ಯಾರಾದರೂ ಭಾರತವನ್ನು ಸೋಲಿಸುವುದಾದರೆ ಅವರು ತಮ್ಮ ಆಟದ ಮೂಲಕ ಜಾದೂ ಮಾಡಬೇಕಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿ ಪಂದ್ಯದಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಲೇ ನಾಯಕ ರೋಹಿತ್ ಶರ್ಮ ಉತ್ತಮ ಆರಂಭ ಒದಗಿಸುತ್ತಿದ್ದಾರೆ ಎಂದಿರುವ ರಮೀಜ್ ರಾಜಾ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರತ ಸಾಕಷ್ಟು ಫೈರ್ಪವರ್ ಹೊಂದಿದೆ ಎಂದಿದ್ದಾರೆ.
ಈ ವಿಶ್ವಕಪ್ನಲ್ಲಿ ರೋಹಿತ್ ಶರ್ಮ, ಪವರ್ಪ್ಲೇನಲ್ಲಿ 140 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪವರ್ಪ್ಲೇನಲ್ಲೇ ಈಗಾಗಲೇ 9 ಸಿಕ್ಸರ್ ಚಚ್ಚಿದ್ದಾರೆ. ಅಲ್ಲದೆ, ಮಧ್ಯ ಕ್ರಮಾಂಕ ಬಲವಾಗಿರುವುದಲ್ಲದೆ, ಉದ್ದದ್ದ ಬ್ಯಾಟಿಂಗ್ ಲೈನಪ್ ಸಹ ಹೊಂದಿದೆ. ಹೀಗಾಗಿ ಭಾರತವನ್ನು ಸೋಲಿಸುವುದು ತುಂಬಾ ಕಷ್ಟವಾಗಿದೆ. ಅವರನ್ನು ಸೋಲಿಸಲು ಯಾರಾದರೂ ತಮ್ಮ ಪವಾಡ ಪ್ರದರ್ಶನದೊಂದಿಗೆ ಜಾದೂ ಮಾಡಬೇಕಷ್ಟೇ ಎಂದು ಇತ್ತೀಚಿನ ಯೂಟ್ಯೂಬ್ ಸಂದರ್ಶನದಲ್ಲಿ ರಮೀಜ್ ರಾಜಾ ಹೇಳಿದ್ದಾರೆ.
ಪ್ರಸಕ್ತ ಟೂರ್ನಿಯಲ್ಲಿ ಸಂಪೂರ್ಣ ಪ್ರದರ್ಶನ ನೀಡಿದ ಏಕೈಕ ತಂಡ ಯಾವುದಾದರೂ ಇದ್ದರೆ ಅದು ಭಾರತ ಎಂದು ರಮೀಜ್ ರಾಜಾ ಕೊಂಡಾಡಿದರು. ಭಾರತ ಬಿಟ್ಟು ಬೇರೆ ಯಾವುದೇ ತಂಡವು ವಿಶ್ವಕಪ್ನಲ್ಲಿ ಸಂಪೂರ್ಣ ಪ್ರದರ್ಶನವನ್ನು ನೀಡಿಲ್ಲ. ಭಾರತದ ಮೊದಲ ನಾಲ್ಕರಿಂದ ಐದು ಆಟಗಾರರು 50ರ ಸರಾಸರಿಯಲ್ಲಿದ್ದಾರೆ. ಸಿಕ್ಸರ್ ಸಿಡಿಸುವ ಸಾಮರ್ಥ್ಯವಿದ್ದು, ಉತ್ತಮ ಸ್ಟ್ರೈಕ್ರೇಟ್ ಅನ್ನು ಹೊಂದಿದ್ದಾರೆ. ಬೌಲಿಂಗ್ನಲ್ಲೂ ಅವರು ಉತ್ತಮ ಲಯದಲ್ಲಿದ್ದಾರೆ ಎಂದರು.
ರಮೀಜ್ ರಾಜಾ ಹೇಳಿದಂತೆ ಭಾರತ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. ಇದುವರೆಗೂ ಆಡಿರುವ 4 ಪಂದ್ಯಗಳಲ್ಲೂ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಅದೇ ರೀತಿ ಜಸ್ಪ್ರಿತ್ ಬುಮ್ರಾ, ಸಿರಾಜ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್ ಕೂಡ ಉತ್ತಮ ಲಯದಲ್ಲಿದ್ದಾರೆ. (ಏಜೆನ್ಸೀಸ್)