ಇನ್ನಷ್ಟು ಮೇಡ್ ಇನ್ ಇಂಡಿಯಾ ಲಸಿಕೆ ಉತ್ಪಾದನೆ; ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ

Modi
Published on

ನವದೆಹಲಿ: ಕೋವಿಡ್-19 ವಿರುದ್ಧ ಹೋರಾಡಲು ಎರಡು ಲಸಿಕೆಗಳನ್ನು ಶೋಧಿಸಿ ಜಗತ್ತಿಗೆ ಪರಿಚಯಿಸಿರುವ ಭಾರತ ಇನ್ನಷ್ಟು ಲಸಿಕೆಗಳನ್ನು ಕಂಡು ಹಿಡಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಆನ್​ಲೈನ್ ಮೂಲಕ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ದಾವೋಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಶೀಘ್ರವೇ ಉತ್ತಮಗೊಳ್ಳಲಿದೆ ಎಂದು ಜಾಗತಿಕ ಉದ್ಯಮ ಕ್ಷೇತ್ರಕ್ಕೆ ಭರವಸೆ ನೀಡಿದರು. ಭಾರತದಲ್ಲಿ ಹೂಡಿಕೆಗೆ ಮುಂದೆ ಬರುವಂತೆ ಉದ್ಯಮಿಗಳಿಗೆ ಕರೆ ನೀಡಿದರು. ಲಸಿಕೆ ಅಭಿಯಾನ ಆರಂಭಿಸಿದ ಕೇವಲ 12 ದಿನಗಳಲ್ಲಿ ಭಾರತ 24 ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ಹಾಕಿದೆ. ಭಾರತ ಕರೊನಾ ವೈರಸ್​ನ ಸುನಾಮಿ ಎದುರಿಸಲಿದೆ. ಭಾರತದಲ್ಲಿ 70-80 ಕೋಟಿ ಜನರು ಸೋಂಕಿತರಾಗಲಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಲಿದ್ದಾರೆ ಎಂದು ಕೆಲವರು ಊಹಿಸಿದ್ದರು. ಆದರೆ ಹಾಗೇನೂ ಆಗಿಲ್ಲ. ದೇಶ ಸಾಂಕ್ರಾಮಿಕತೆಯನ್ನು ಯಶಸ್ವಿಯಾಗಿ ಎದುರಿಸಿದೆ ಎಂದು ಮೋದಿ ವಿವರಿಸಿದರು. ಭಾರತ ದೇಶೀಯವಾಗಿ ಲಸಿಕೆ ತಯಾರಿಸುವ ಜತೆಗೆ ವಿದೇಶಗಳಿಗೂ ಇದನ್ನು ರಫ್ತು ಮಾಡುತ್ತಿದೆ. ಕರೋನಾ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇನ್ನು ಭಾರತ ಅಭಿವೃದ್ಧಿ ಹಾಗೂ ವ್ಯಾಪಾರೋದ್ಯಮಕ್ಕೆ ಮತ್ತಷ್ಟು ಪ್ರಾಶಸ್ಱ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಚೇತರಿಕೆ ಶೇ. 97ಕ್ಕೆ ಏರಿಕೆ

ಗುಣಮುಖರಾಗುತ್ತಿರುವ ಕೋವಿಡ್-19 ರೋಗಿಗಳ ಸಂಖ್ಯೆ ಸತತವಾಗಿ ಏರುತ್ತಿದ್ದು, ಚೇತರಿಕೆ ಪ್ರಮಾಣ ಶೇಕಡ 97 ಆಗಿದೆ. ಇದು ಜಗತ್ತಿನಲ್ಲೇ ಅಧಿಕ ಚೇತರಿಕೆ ಪ್ರಮಾಣದಲ್ಲಿ ಒಂದೆನಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಗುರುವಾರ ಬೆಳಗಿನ ವರೆಗಿನ 24 ಗಂಟೆಗಳ ಅವಧಿಯಲ್ಲಿ 14,301 ರೋಗಿಗಳು ಗುಣಮುಖರಾಗಿದ್ದು ಅವರ ಒಟ್ಟು ಸಂಖ್ಯೆ 1,03,73,606ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,73,740ಕ್ಕೆ ಇಳಿದಿದ್ದು ಒಟ್ಟು ಸೋಂಕಿನ ಶೇಕಡ 1.62 ಆಗಿದೆ. ಸೋಂಕಿನ ಪ್ರಮಾಣ ಕುಸಿಯುತ್ತಿರುವ ರಾಷ್ಟ್ರೀಯ ಪ್ರವೃತ್ತಿಗೆ ಅನುಗುಣವಾಗಿ 31 ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಲ್ಲಿ 5000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯ ವಿವರಿಸಿದೆ.

ಶೇ. 55 ಜನರಿಗೆ ಸೋಂಕು?

ಭಾರತದ ಶೇ. 55 ಜನರು ಈಗಾಗಲೇ ಕರೊನಾ ಸೋಂಕಿತರಾಗಿರಬಹುದೆಂದು ದೇಶದ ಪ್ರಮುಖ ಡಯಾಗ್ನಾಸ್ಟಿಕ್ ಜಾಲದಲ್ಲಿ ಒಂದಾದ ಥೈರೋಕೇರ್ ಟೆಕ್ನಾಲಜೀಸ್ ಹೇಳಿದೆ. 7 ಲಕ್ಷಕ್ಕೂ ಅಧಿಕ ಜನರಲ್ಲಿ ನಡೆಸಿದ ಪ್ರತಿಕಾಯ ಪರೀಕ್ಷೆಗಳಿಂದ ಈ ಫಲಿತಾಂಶ ಹೊರಬಿದ್ದಿದೆ ಎಂದು ಅದು ತಿಳಿಸಿದೆ. ಸೋಂಕು ಹರಡುವಿಕೆ ತಡೆಯಬೇಕಾದರೆ ಜನಸಂಖ್ಯೆಯ ಕನಿಷ್ಠ ಶೇಕಡ 60ರಿಂದ ಶೇ. 70 ಜನರು ಪ್ರತಿರೋಧಶಕ್ತಿ ಹೊಂದಿರಬೇಕು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ಅಭಿಪ್ರಾಯವಾಗಿದೆ.

  • ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಫೆ. 28ರ ವರೆಗೆ ನಿರ್ಬಂಧಿಸಿ ಕೇಂದ್ರ ವಿಮಾನಯಾನ ಪ್ರಾಧಿಕಾರದಿಂದ ಆದೇಶ

23.5 ಲಕ್ಷ ಮಂದಿಗೆ ಲಸಿಕೆ: ಗುರುವಾರ ಬೆಳಗ್ಗೆ 7.30ರ ವರೆಗೆ ಲಭ್ಯವಾದ ಮಾಹಿತಿ ಪ್ರಕಾರ ದೇಶದಾದ್ಯಂತ 23.5 ಲಕ್ಷಕ್ಕೂ ಹೆಚ್ಚು ಜನರು ಕರೊನಾ ಲಸಿಕೆ ಪಡೆದಿದ್ದಾರೆ.

ಭಾರತದಲ್ಲಿ ಕರೊನಾ

  • ಹೊಸ ಪ್ರಕರಣ: 11,666
  • ಒಟ್ಟು: 1,07,01,193
  • ಒಟ್ಟು ಸಾವು: 1,53,847
  • ಚೇತರಿಕೆ: 1,03,73,606

ಹಲವು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

ಕರೊನಾ ಲಸಿಕೆ ಅಭಿಯಾನ ಉತ್ತಮ ಪರಿಣಾಮ ಬೀರುತ್ತಿದ್ದು ದೇಶದ ಐದನೇ ಒಂದರಷ್ಟು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿ ಒಂದೇ ಒಂದು ಹೊಸ ಪ್ರಕರಣ ದಾಖಲಾಗಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಲಸಿಕೆ ಅಭಿಯಾನ ಆರಂಭವಾಗಿ ಎರಡು ವಾರಗಳಾಗಿದ್ದು 24 ಲಕ್ಷಕ್ಕೂ ಅಧಿಕ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿರುವುದರಿಂದ ಸೋಂಕಿನಲ್ಲಿ ಇಳಿಮುಖ ದಾಖಲಾಗಿದೆ. ‘ಭಾರತ ಸಾಂಕ್ರಾಮಿಕತೆಗೆ ಯಶಸ್ವಿಯಾಗಿ ಅಂಕುಶ ಹಾಕಿದೆ’ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net