

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮಲ್ಲಿ ದೃಢ ಸಂಕಲ್ಪ ಇದ್ದಲ್ಲಿ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕಂಡುಕೊಳ್ಳಬಹುದು. ದೃಢ ಸಂಕಲ್ಪ ಹೆಚ್ಚಿಸಿಕೊಳ್ಳಲು ಧ್ಯಾನ, ಅಧ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವೈಎಸ್ಎಸ್ ಸನ್ಯಾಸಿ ಸ್ವಾಮಿ ಶ್ರೇಯಾನಂದ ಗಿರಿ ಅಭಿಪ್ರಾಯಪಟ್ಟರು.
ಯೋಗದಾ ಸತ್ಸಂಗ ಸೊಸೈಟಿ ಆಫ ಇಂಡಿಯಾ ವತಿಯಿಂದ ನಗರದ ಮಗದುಮ್ಮ ಆನಂದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನಿಮ್ಮ ಸಮಸ್ಯೆಗಳನ್ನು ಮೀರಿ ಮುಂದುವರೆಯುವುದು ಹೇಗೆ? ಕುರಿತು ಉಪನ್ಯಾಸ ನೀಡಿದರು.
ನಾವು ಅಗತ್ಯಕ್ಕಿಂತ ಹೆಚ್ಚಾಗಿ ಮಾತನಾಡುವುದೇ ನಮ್ಮ ಸಮಸ್ಯೆಗಳಿಗೆ ಕಾರಣವಾಗಿದೆ. ಶೇ. 90ರಷ್ಟು ಜನರಲ್ಲಿ ಈ ಸಮಸ್ಯೆ ಇದೆ. ಇತ್ತೀಚಿನ ದಿನಗಳಲ್ಲಿ ಮತ್ತೊಬ್ಬರ ಮಾತುಗಳನ್ನು ಆಲಿಸುವವರ ಸಂಖ್ಯೆಯೇ ಕಡಿಮೆ. ಮತ್ತೊಬ್ಬರ ಮಾತು ಆಲಿಸುವ ಗುಣ ಬೆಳೆಸಿಕೊಂಡಲ್ಲಿ ಸಮಸ್ಯೆಗೆ ಮುಕ್ತಿ ಸಿಗುವುದರ ಜತೆಗೆ ಇತರರನ್ನು ಪ್ರೀತಿಸುವ ಗುಣವೂ ಬೆಳೆಯಲಿದೆ ಎಂದರು.
ಕ್ರಿಯಾ ಯೋಗ ಹಾಗೂ ಅಧ್ಯಾತ್ಮದಿಂದ ನಮ್ಮ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕಂಡುಕೊಳ್ಳಬಹುದು. ನಿತ್ಯ ನಾವು ಸಾಕಷ್ಟು ಯೋಚನೆ ಮಾಡುತ್ತೇವೆ. ಅದರಲ್ಲಿ ಕೆಟ್ಟದ್ದು, ಒಳ್ಳೆಯ ಯೋಚನೆಗಳು ಕೂಡಿರುತ್ತವೆ. ನಾವು ಯಾವ ಯೋಚನೆಯತ್ತ ವಾಲುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ರೂಪಿತವಾಗುತ್ತದೆ. ಹೀಗಾಗಿ ಋಣಾತ್ಮಕ ಯೋಚನೆಗಳಿಗೆ ಅವಕಾಶ ನೀಡದೆ ಧನಾತ್ಮಕ ಯೋಚನೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.