ಘನತ್ಯಾಜ್ಯ ಘಟಕ ಪರಿಸರ ಸ್ವಚ್ಛತೆ : ಮುನ್ನೂರು ಗ್ರಾಪಂ ಅಧಿಕಾರಿಯಿಂದ ಕ್ರಮ : ಮದನಿನಗರದಲ್ಲಿ ಯಥಾಸ್ಥಿತಿ

New Project (8)
Published on

ಉಳ್ಳಾಲ: ಮುನ್ನೂರು ಗ್ರಾಮದಲ್ಲಿ ಪಾಳುಬಿದ್ದಿದ್ದ ಘನತ್ಯಾಜ್ಯ ನಿರ್ವಹಣಾ ಘಟಕ ಪರಿಸರ ಸ್ವಚ್ಛತೆ ಮಾಡುವ ಮೂಲಕ ವಿಜಯವಾಣಿ ವರದಿಗೆ ಮುನ್ನೂರು ಗ್ರಾ.ಪಂ. ಪಿಡಿಒ ಸ್ಪಂದಿಸಿದ್ದಾರೆ. ಈ ನಡುವೆ ಮದನಿನಗರ ತ್ಯಾಜ್ಯ ತೆರವಿಗೆ ಯಾರೂ ಮುಂದಾಗದ ಕಾರಣ ಪರಿಸರ ಅನಾಥವಾಗಿ ರೋಧಿಸುತ್ತಿದೆ.

ಮುನ್ನೂರು ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾಗಿದ್ದ ಘನತ್ಯಾಜ್ಯ ನಿರ್ವಹಣಾ ಘಟಕ ಪಾಳುಬಿದ್ದರೂ ಗೇಟಿನ ಮುಂಭಾಗದಲ್ಲೇ ಸಾರ್ವಜನಿಕರು ಎಸೆದು ಹೋದ ತ್ಯಾಜ್ಯರಾಶಿ ದುರ್ನಾತ ಬೀರುತ್ತಿತ್ತು. ಈ ಬಗ್ಗೆ ವಿಜಯವಾಣಿ ಸೆಪ್ಟೆಂಬರ್ 2ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಎಚ್ಚರಗೊಳಿಸುವ ಪ್ರಯತ್ನ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಪ್ರಭಾರ ಪಿಡಿಒ ಶ್ರೀಕಾಂತ್ ಸಿಂಪಿಗೇರ ರಾಶಿ ಬಿದ್ದಿದ್ದ ತ್ಯಾಜದ ಜತೆ ಘಟಕವನ್ನೂ ಸ್ವಚ್ಛಗೊಳಿಸಿದ್ದಾರೆ. ಘಟಕದ ಎದುರಲ್ಲೇ ಮೀಸಲಿರಿಸಲಾಗಿದ್ದ ಜಮೀನು ಸಮತಟ್ಟು ಕೆಲಸ ಆರಂಭಿಸಿದ್ದಾರೆ. ಈ ನಡುವೆ ತ್ಯಾಜ್ಯ ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಕಸದ ಕಟ್ಟುಗಳು ಕಾಣಿಸಿದ್ದು ಇಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುವ ಬಗ್ಗೆ ಅನುಮಾನ ಮೂಡಿಸಿದೆ.

ಮದನಿ ನಗರ ಅನಾಥ!: ಮದನಿನಗರ ರಸ್ತೆಬದಿ ಮಿನಿ ಡಂಪಿಂಗ್‌ಯಾರ್ಡ್ ನಿರ್ಮಾಣಗೊಂಡಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಪ್ರದೇಶ ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ, ಮುನ್ನೂರು ಗ್ರಾ.ಪಂ.ಗೆ ಒಳಪಡುತ್ತದೆ ಎಂದು ಸೋಮೇಶ್ವರ ಪುರಸಭೆಯ ಅಧಿಕಾರಿ ಹಾಗೂ ಸ್ಥಳೀಯ ಸದಸ್ಯ ಬಶೀರ್ ಮುಂಡೋಳಿ ತಿಳಿಸಿದ್ದಾರೆ. ಆದರೆ ಈ ಪ್ರದೇಶ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿದೆ ಎಂದು ಮುನ್ನೂರು ಗ್ರಾ.ಪಂ. ಪಿಡಿಒ ಶ್ರೀಕಾಂತ್ ಹೇಳಿದ್ದಾರೆ. ಹಾಗಾಗಿ ಮದನಿ ನಗರದ ತ್ಯಾಜ್ಯ ರಾಶಿ ಹಾಗೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net