ನಂಜಯ್ಯನಕೆರೆಯಲ್ಲಿ ಅಕ್ರಮವಾಗಿ ಮೇಲೆತ್ತಲಾಗುತ್ತಿದೆ ಮಣ್ಣು

IMG-20240814-WA0141
ಕೆ.ಆರ್.ಪೇಟೆ ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದಲ್ಲಿರುವ ನಂಜಯ್ಯನ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ಎತ್ತುತ್ತಿದ್ದು ಕೆರೆಯ ಪಕ್ಕದ ರೈತರ ಹಿಡುವಳಿ ಜಮೀನು ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ.
Published on

ಕೆ.ಆರ್.ಪೇಟೆ: ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದಲ್ಲಿರುವ ನಂಜಯ್ಯನ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ಎತ್ತುತ್ತಿದ್ದು ಕೆರೆಯ ಪಕ್ಕದ ರೈತರ ಹಿಡುವಳಿ ಜಮೀನು ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ.

4.20 ಎಕರೆ ಕೆರೆ ವಿಸ್ತೀರ್ಣವಿದ್ದು ಮಳೆಗಾಲದಲ್ಲಿ ಮಾತ್ರ ನೀರು ತುಂಬುತ್ತಿತ್ತು. ಈ ಕೆರೆಗೆ ಏತ ನೀರಾವರಿ ಯೋಜನೆಯಲ್ಲಿ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಕಾಮಗಾರಿಯು ಮುಕ್ತಾಯ ಹಂತಕ್ಕೆ ಬಂದಿದ್ದು ಕೆರೆಗೆ ಏತ ನೀರಾವರಿ ಮೂಲಕ ನೀರು ತುಂಬಿಸಲು ಕಾಲ ಸನಿಹವಾಗಿದೆ. ಈ ನಡುವೆ ಜನರು ಕಳೆದ ಒಂದು ವರ್ಷದಿಂದ ಅಕ್ರಮವಾಗಿ ಹಾಗೂ ಅವೈಜ್ಞಾನಿಕವಾಗಿ ಮಣ್ಣನ್ನು ಎತ್ತುತ್ತಿದ್ದು ಕೆರೆಯ ಸುತ್ತಲಿನ ರೈತರ ಜಮೀನು ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಇದು ಕೆರೆ ಸುತ್ತಲಿನ ಹಲವು ರೈತರ ಹತ್ತಾರು ಎಕರೆ ಜಮೀನು ಕೆರೆ ಪಾಲಾಗುವ ಆತಂಕ ಎದುರಾಗಿದೆ. ಈ ಸಂಬಂಧ ಸಂತ್ರಸ್ತ ರೈತರು ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಒಮ್ಮೆ ಸ್ಥಳಕ್ಕೆ ಬಂದು ಅಧಿಕಾರಿಗಳು ಪರಿಶೀಲಿಸಿ ಹಿಂದಿರುಗಿದ್ದರು. ಅಕ್ರಮ ಮಣ್ಣು ದಂಧೆಕೋರರ ವಿರುದ್ಧ ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಜರುಗಿಸದಿರುವುದು ಅಕ್ರಮ ಮಣ್ಣು ಕಳ್ಳರಿಗೆ ರಹದಾರಿ ಸಿಕ್ಕಂತಾಗಿದೆ. ಅಲ್ಲಿನ ರೈತರು ಜಮೀನು ಕಳೆದುಕೊಳ್ಳುವ ಆತಂಕ ಹೆಚ್ಚಾಗಿದೆ. ಈ ಸಂಬಂಧ ಅಧಿಕಾರಿಗಳು ಮಣ್ಣು ಎತ್ತುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಲ್ಲಿನ ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಅಕ್ರಮ ಮಣ್ಣುಗಾರಿಕೆ ವಿರುದ್ಧ ತಹಸೀಲ್ದಾರ್ ಅವರಿಗೆ ರೈತರು ದೂರು ನೀಡಿದ್ದಾರೆ. ಈ ಸಂಬಂಧ ಗ್ರಾಮ ಆಡಳಿತಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಅಕ್ರಮ ಮಣ್ಣುಗಾರಿಕೆ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ಅಕ್ರಮ ಮಣ್ಣುಗಾರಿಕೆ ನಿಲ್ಲಿಸದಿದ್ದರೆ ಸುತ್ತಲಿನ ರೈತರ ಜಮೀನು ಕೆರೆಗೆ ಕುಸಿದು ನಷ್ಟ ಉಂಟಾಗಲಿದೆ. ಕಂದಾಯ ಅಧಿಕಾರಿಗಳು ಅಕ್ರಮ ಮಣ್ಣುಗಾರಿಕೆ ನಿಲ್ಲಿಸುವರೇ? ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net