

ಬೆಂಗಳೂರು: ನಗರದಲ್ಲಿ ಕೆರೆಗಳ ಒತ್ತುವರಿ ತೆರವಿಗೆ ಪಾಲಿಕೆ ಮುಂದಾಗಿರುವಾಗಲೇ ಆರ್.ಆರ್.ನಗರ ವಲಯದ ಮೈಲಸಂದ್ರ ಕೆರೆಗೆ ಮಣ್ಣು ಸುರಿದು ರಸ್ತೆ ವಿಸ್ತರಣೆ ಮಾಡುವ ಪ್ರಕರಣ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ರಜಾದಿನವಾದ ಭಾನುವಾರವೇ ಕರೆಗೆ ಜೆಸಿಬಿ ಮೂಲಕ ಮಣ್ಣು ಸುರಿಯುವಿಕೆ ವಿರುದ್ಧ ಸ್ಥಳೀಯರು ದನಿಯೇರಿಸಿದರೂ ಅಕ್ರಮ ತಡೆಗೆ ಪೊಲೀಸ್ ಸಹಕಾರ ಸಿಕ್ಕಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.
ಮೈಸೂರು ರಸ್ತೆಯಿಂದ ಆದಿತ್ಯ ಬೇಕರಿವರೆಗೆ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗವು ಮಾರ್ಗ ವಿಸ್ತರಣೆ ಕೈಗೊಂಡಿದೆ. ವಾಹನ ದಟ್ಟಣೆ ಹೆಚ್ಚಿರುವ ಈ ಭಾಗದಲ್ಲಿ ಸರಾಗ ಸಂಚಾರಕ್ಕಾಗಿ ರಸ್ತೆ ವಿಸ್ತರಣೆ ಅಗತ್ಯವೆಂದು ಪಾಲಿಕೆ ಪ್ರತಿಪಾದಿಸಿತ್ತು. ಇದಕ್ಕಾಗಿ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರವು ಕೆಲವೊಂದು ಷರತ್ತು ವಿಧಿಸಿ ಕಾಮಗಾರಿ ತೆಗೆದುಕೊಳ್ಳಲು ಒಪ್ಪಿಗೆ ನೀಡಿತ್ತು.
ಇದರನ್ವಯ ರಸ್ತೆ ವಿಸ್ತರಣೆ ಕಾರ್ಯವನ್ನು ಮೈಸಂದ್ರ ಕೆರೆ -1ರ ಏರಿ ಮೇಲಿನ ರಸ್ತೆ ಬದಿಯಿರುವ ಕಿರಿದಾದ ಜಾಗದಲ್ಲೇ ಕೆರೆಗೆ ಮಣ್ಣನ್ನು ಸುರಿದು ಅಗಲೀಕರಣ ಮಾಡಲಾಗುತ್ತಿತ್ತು. ಇದಕ್ಕಾಗಿ ಜೆಸಿಬಿ ಹಾಗೂ ಟಿಪ್ಪರ್ ವಾಹನವನ್ನು ಬಳಸಿಕೊಳ್ಳಲಾಗಿತ್ತು. ಮಧ್ಯಾಹ್ನದ ವೇಳೆಗೆ ಹೆಚ್ಚಿನ ಮಣ್ಣನ್ನು ಕೆರೆಗೆ ಸುರಿಯುತ್ತಿರುವುದನ್ನು ಕಂಡ ಸ್ಥಳೀಯರು ತಗಾದೆ ಎತ್ತಿದ್ದಾರೆ. ಕೆರೆ ಪಹರೆಗೆ ನಿಯೋಜನೆ ಆಗಿರುವ ಹೋಂ ಗಾರ್ಡ್ ಕೂಡ ಆಕ್ಷೇಪ ವ್ಯಕ್ತಪಡಿಸಿದರೂ, ಕಾಮಗಾರಿ ನಿಲ್ಲಿಸಲಿಲ್ಲ ಎಂದು ನಾಗರಿಕರು ದೂರಿದ್ದಾರೆ.
ದೂರಿಗೆ ಸ್ಪಂದಿಸದ ಪೊಲೀಸ್:
ಪ್ರಕರಣ ಸಂಬಂಧ ಹೋಂ ಗಾರ್ಡ್ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ, ತಕ್ಷಣವೇ ಯಾವುದೇ ಕ್ರಮ ತೆಗೆದುಕೊಂಡು ಅನಧಿಕೃತವಾಗಿ ಕೆರೆಗೆ ಮಣ್ಣು ಸುರಿಯುತ್ತಿರುವುದನ್ನು ಪೊಲೀಸರು ತಡೆಯಲಿಲ್ಲ. ಇದನ್ನು ಗಮನಿಸಿದರೆ ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಕೆರೆಯನ್ನು ಅವಸಾನದತ್ತ ದೂಡಲು ಯತ್ನಿಸುತ್ತಿರುವಂತಿದೆ. ಪ್ರಕರಣದ ಬಗ್ಗೆ ಸೋಮವಾರ ಪಾಲಿಕೆ ಮುಖ್ಯ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.