

ಯಶೋಧರ ವಿ.ಬಂಗೇರ ಮೂಡುಬಿದಿರೆ ಮೂಡುಬಿದಿರೆ ನಗರಕ್ಕೆ ಹತ್ತಿರವಿರುವ ಪುತ್ತಿಗೆ ಗ್ರಾಮದ ಹಂಡೇಲಿನಲ್ಲಿ ನಿರ್ಮಿಸಲಾಗುತ್ತಿರುವ ಲೇಔಟ್‌ನಿಂದಾಗಿ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದು, ಗುಡ್ಡ ಅಗೆದು ಶೇಖರಿಸಿದ ಮಣ್ಣಿನಿಂದ ಕೃಷಿ, ಮನೆಗಳು ಹಾನಿಯಾಗಿದ್ದು, ದುರಂತ ಸಂಭವಿಸುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಜಿಲ್ಲಾಧಿಕಾರಿ, ಸ್ಥಳೀಯಾಡಳಿತ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಆರು ತಿಂಗಳಿನಿಂದ ಮನವಿ ಸಲ್ಲಿಸುತ್ತಿದ್ದರೂ, ಯಾವುದೇ ಕ್ರಮವಹಿಸದಿರುವುದರಿಂದ ಮಳೆಗಾಲದ ಪ್ರಾರಂಭದಲ್ಲೇ ಗ್ರಾಮಸ್ಥರಿಗೆ ತೊಂದರೆಗಳು ಹೆಚ್ಚಾಗಿವೆ. ಶೇಖರಿಸಿಟ್ಟ ಮಣ್ಣು ಕುಸಿತ: ಗುಡ್ಡವನ್ನು ಅಗೆದು ವಿಶಾಲ ಲೇಔಟ್ ಮಾಡಲಾಗಿದ್ದು, ಅದರಿಂದ ಅಗೆದ ಮಣ್ಣನ್ನು ಒಂದು ಬದಿಯಲ್ಲಿ ಶೇಖರಿಸಲಾಗಿದೆ. ಮಳೆಗಾಲದ ಪ್ರಾರಂಭದಲ್ಲೇ ಅದು ನೀರಿನಲ್ಲಿ ಕೊಚ್ಚಿ ಹೋಗಿ ರಸ್ತೆ, ಚರಂಡಿಯ ಮೇಲೆ ಹರಡಿದೆ. ಕಳೆದ ಮಳೆಗಾಲದಲ್ಲೂ ಇದೇ ಮಾದರಿಯಲ್ಲಿ ತೊಂದರೆಗಳಾಗಿವೆ. ಈ ಬಾರಿ ಮಣ್ಣು ಶೇಖರಣೆ ಹೆಚ್ಚಾಗಿದ್ದು, ಗ್ರಾಮಸ್ಥರ ಆತಂಕವೂ ಹೆಚ್ಚಾಗುತ್ತಿದೆ. ಸೈಟ್ ಭಾಗದಲ್ಲಿ ಟಾರ್ಪಲ್ ಅಳವಡಿಸಲಾಗಿದ್ದರೂ, ಇಳಿಜಾರು ಪ್ರದೇಶಗಳು ಜನವಸತಿ ಪ್ರದೇಶದತ್ತ ಹೆಚ್ಚಿನ ಪ್ರಮಾಣದ ಮಣ್ಣು ಹರಡುವ ಸಂಭವವಿದೆ. ಇಳಿಜಾರು ಪ್ರದೇಶದಲ್ಲಿರುವ ಈ ಪ್ರದೇಶದ ಒಳರಸ್ತೆಗಳಲ್ಲಿ ಮಣ್ಣು ಹರಡಿಕೊಂಡಿದೆ. ರಸ್ತೆ ಪಕ್ಕದಲ್ಲಿರುವ ಕೆಲವು ಮನೆಗಳಿಗೆ, ದೈವದ ಗುಡಿಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಕೃಷಿ ಭೂಮಿ ಹೆಚ್ಚಿದ್ದು, ತೋಟ-ಗದ್ದೆಗಳಲ್ಲಿ ದಿನೇ ದಿನೆ ಮಣ್ಣು ಶೇಖರಣೆಯಾಗುವ ಆತಂಕ ಸ್ಥಳೀಯ ಕೃಷಿಕರಲ್ಲಿದೆ. ಮಣ್ಣು ತುಂಬಿಕೊಂಡ ಒಳರಸ್ತೆಗಳಲ್ಲಿ ದ್ವಿಚಕ್ರವಾಹನ, ಕಾರು, ಆಟೋಗಳು ಸಂಚರಿಸುವುದು ಕಷ್ಟಕರವಾಗಿದೆ. ಮಾತ್ರವಲ್ಲ ಸ್ಥಳೀಯರು ನಡೆದುಕೊಂಡು ಹೋಗುವಾಗ ಕಾಲುಗಳು ಹೂತು ಹೋಗುತ್ತಿದೆ. ಅವೈಜ್ಞಾನಿಕ ಮಾದರಿಯ ಲೇಔಟ್: ಹಂಡೇಲಿನ ಖಾಸಗಿ ಜಾಗದಲ್ಲಿ ಬೃಹತ್ ಗುಡ್ಡವನ್ನು ಅಗೆದು ನಿವೇಶನ ವಿನ್ಯಾಸಕ್ಕಾಗಿ ಸಮತಟ್ಟು ಮಾಡಲಾಗಿದೆ. ಈ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿದ್ದು, ಯಾವುದೇ ಸಮರ್ಪಕ ತಡೆಗೋಡೆ ನಿರ್ಮಿಸದೆ ಸುಮಾರು 60ರಿಂದ 70 ಅಡಿಗಳಷ್ಟು ಎತ್ತರಕ್ಕೆ ಮಣ್ಣನ್ನು ತುಂಬಿಸಲಾಗಿದೆ. ಇದರಿಂದ ಹತ್ತಿರ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಕೇರಳ ವಯನಾಡ್ ರೀತಿ ದುರಂತ ಸಂಭವಿಸುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ದೈವ ಸಾನ್ನಿಧ್ಯಕ್ಕೆ ಹಾನಿ ಕಳೆದ ಮಳೆಗಾಲದಲ್ಲಿ ಅಗೆದ ಮಣ್ಣು ಮಳೆಯ ನೀರಿಗೆ ನಿರಂತರವಾಗಿ ಕೊಚ್ಚಿಕೊಂಡು ಹೋಗಿ, ತಗ್ಗು ಪ್ರದೇಶದಲ್ಲಿರುವ ಚರಂಡಿಗಳಲ್ಲಿ ತುಂಬಿಕೊಂಡಿತ್ತು. ಕೃಷಿ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗಿ ಹಲವಾರು ರೀತಿಯ ತೊಂದರೆ ಅನುಭವಿಸುವಂತಾಗಿದೆ. ಲೇಔಟ್ ಮಾಡುವ ಖಾಸಗಿ ಜಾಗಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ, ಅದೇ ಸರ್ಕಾರಿ ಜಾಗದ ಬೃಹತ್ ಮರಗಳನ್ನು ಕಡಿಯಲಾಗಿದೆ. ಈ ಪರಿಸರದಲ್ಲಿ ದೈವದ ಸಾನ್ನಿಧ್ಯವನ್ನು ಹಾನಿಗೊಳಿಸಿದ್ದಾರೆ ಎಂದು ಗ್ರಾಮಸ್ಥರು. ವಿವಿಧ ಇಲಾಖೆಗಳಿಗೆ ನೀಡಿದ ಮನವಿಯಲ್ಲಿ ಆರೋಪಿಸಿದ್ದಾರೆ. ಡಿಸಿಗೆ ದೂರು, ಗ್ರಾಮಸಭೆಯ ಪ್ರಸ್ತಾಪಕ್ಕೂ ಸ್ಪಂದನೆಯಿಲ್ಲ ಈ ಪರಿಸರದಲ್ಲಿ ಲೇಔಟ್‌ನಿಂದಾಗುತ್ತಿರುವ ತೊಂದರೆಗಳ ವಿರುದ್ಧ ಮಾರ್ಚ್ ತಿಂಗಳಲ್ಲಿ ನಡೆದ ಎರಡನೇ ಸುತ್ತಿನ ಪುತ್ತಿಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಧ್ವನಿ ಎತ್ತಿದ್ದಾರೆ. ಅನಧಿಕೃತ ಲೇಔಟ್ ಹಂಡೇಲಿನಲ್ಲಿ ಕೇರಳ ಮಾದರಿಯ ದುರಂತಕ್ಕೆ ಆಹ್ವಾನ ನೀಡುತ್ತಿದೆ ಎಂದು ಗ್ರಾಮಸಭೆಯಲ್ಲೂ ಗ್ರಾಮಸ್ಥರು ಆರೋಪಿಸಿದ್ದಾರೆ. ಮೂಡುಬಿದಿರೆ ಶಾಸಕರು, ತಹಸೀಲ್ದಾರ್, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ, ಪುತ್ತಿಗೆ ಗ್ರಾಪಂ ಪಿಡಿಒ, ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಮೆಸ್ಕಾಂ ಸಹಿತ ಸಂಬಂಧಪಟ್ಟ ಇಲಾಖೆಗಳಿಗೆ ನಿರಂತರವಾಗಿ ಮನವಿ ಸಲ್ಲಿಸಲಾಗಿದೆ. ಈ ಮೇಲ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಪರಿಸರದ ದುಸ್ಥಿತಿಯನ್ನು ವಿವರಿಸಿದರೂ ಯಾರಿಂದಲೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಹಂಡೇಲಿನಲ್ಲಿ ಪ್ರಾರಂಭವಾಗಿರುವ ಲೇಔಟ್‌ನಿಂದ ಕಳೆದ ಮಳೆಗಾಲದಲ್ಲೇ ಹಲವು ತೊಂದರೆ ಅನುಭವಿಸಿದ್ದೇವೆ. ಅವರ ಜಾಗದಲ್ಲಿ ಲೇಔಟ್ ಮಾಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಪರಿಸರ ಹಾಗೂ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ಅವರು ಅರಿತುಕೊಳ್ಳಬೇಕು. ಮಣ್ಣು ಕುಸಿಯದಂತೆ ಕಾಂಕ್ರೀಟ್ ತಡೆಗೋಡೆ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಮಾಡಿದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ. ಲೇಔಟ್‌ನ ತೊಂದರೆಯ ಕುರಿತು ಸಂಬಂಧಪಟ್ಟ ಇಲಾಖೆಗಳಿಗೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಇಲ್ಲ. ದಿನಕರ್ ಗ್ರಾಮಸ್ಥ, ಹಂಡೇಲು ಗ್ರಾಮಸ್ಥರ ಆತಂಕದಲ್ಲಿ ನೈಜಾಂಶವಿದೆ. ಗ್ರಾಮಸಭೆಯ ನಿರ್ಣಯ ಮಾತ್ರವಲ್ಲದೇ ಸಾಮಾನ್ಯಸಭೆಯಲ್ಲೂ ಈ ಕುರಿತು ಚರ್ಚಿಸಿ ತಹಸೀಲ್ದಾರ್‌ಗೆ ಸೂಕ್ತ ಕ್ರಮಕ್ಕಾಗಿ ಪತ್ರ ಬರೆದಿದ್ದೇವೆ. ಸಕಾಲದಲ್ಲಿ ಕ್ರಮ ಕೈಗೊಳ್ಳದಿದಲ್ಲಿ ಮುಂದೆ ಸಂಭವಿಸುವ ಅನಾಹುತಗಳಿಗೆ ನೀವೇ ಹೊಣೆ ಎಂಬುದನ್ನೂ ಅವರಿಗೆ ಮನದಟ್ಟು ಮಾಡಿದ್ದೇವೆ. ಬೀಮಾ ನಾಯ್ಕ ಪಿಡಿಒ, ಪುತ್ತಿಗೆ ಗ್ರಾಪಂ https://www.vijayavani.net/strike-by-workers-union https://www.vijayavani.net/rangachinnari-anniversary-award-ceremony