ಪ್ರಾಚೀನ ಸಾಹಿತ್ಯದ ಜ್ಞಾನ ಎಲ್ಲರಿಗೂ ಲಭಿಸಲಿ...

Sediyaapu
Published on

ಮಣಿಪಾಲದ ಡಾ. ಶ್ರೀಧರ ಪೈ ಆಶಯ

ಸೇಡಿಯಾಪು, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರಾಚೀನ ಸಂಸ್ಕೃತದ ಸಾಹಿತ್ಯದಲ್ಲಿ ಅಪಾರ ಜ್ಞಾನ ಸಂಪತ್ತು ಅಡಗಿದೆ. ಅದರಂತೆ ಕನ್ನಡದ ಪ್ರಾಚೀನ ಸಾಹಿತ್ಯದಲ್ಲೂ ಅಪಾರ ಜ್ಞಾನ ಭಂಡಾರವೇ ಇದೆ. ಪ್ರಾಚೀನ ಜ್ಞಾನಗಳು ಇಂದಿನ ಯುವ ಸಮುದಾಯಕ್ಕೆ ಲಭಿಸುವಂತಾಗಲು ಕನ್ನಡದಿಂದ ಸಂಸ್ಕೃತಕ್ಕೆ ಹಾಗೂ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರ ಕಾರ್ಯ ಆಗಬೇಕಿದೆ ಎಂದು ಮಣಿಪಾಲದ ಅಕಾಡೆಮಿ ಆಫ್​ ಜನರಲ್​ ಎಜುಕೇಶನ್​ನ ಆಡಳಿತಾಧಿಕಾರಿ ಡಾ. ಶ್ರೀಧರ ಪೈ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಆಗಸ್ಟ್​ 16ರಂದು ಬೆಳಗ್ಗೆ ಆಯೋಜಿಸಿದ್ದ ಸೇಡಿಯಾಪು ಪ್ರಶಸ್ತಿ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಪ್ರಶಸ್ತಿ ಪ್ರದಾನ

ಸಂಸ್ಕೃತದ ಹಿರಿಯ ಸಾಹಿತಿ ಡಾ. ಎಚ್​.ವಿ. ನಾಗರಾಜ ರಾವ್​ ಅವರಿಗೆ 2025ನೇ ಸಾಲಿನ ಸೇಡಿಯಾಪು (ಪುತ್ತೂರು ತಾಲೂಕಿನ ಪಡ್ಲೂರು ಸೇಡಿಯಾಪು ಕೃಷ್ಣ ಭಟ್ಟ ಸ್ಮರಣಾರ್ಥ) ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿಯ ಎಸ್​ಎಂಎಸ್​ಪಿ ಸಂಸತ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್​.ಮಹೇಶ ಭಟ್​ ಅಭಿನಂದನಾ ಮಾತುಗಳನ್ನಾಡಿದರು. ಡಾ. ಪ್ರಜ್ಞಾ ಮತ್ತಿಹಳ್ಳಿ ಅವರಿಗೆ 2025ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ (ದ.ಕ. ಜಿಲ್ಲೆಯ ಕಡೆಂಗೋಡ್ಲು ಶಂಕರ ಭಟ್ಟ ಸ್ಮರಣಾರ್ಥ) ಪ್ರದಾನ ಮಾಡಲಾಯಿತು. ಅಲ್ಲದೆ, ಡಾ. ಪ್ರಜ್ಞಾ ಅವರ ಬೆಳದಿಂಗಳ ಸೋನೆ ಮಳೆ ಕೃತಿ ಬಿಡುಗಡೆ ಮಾಡಲಾಯಿತು. ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಸಂತಕುಮಾರ್​ ಪುತ್ತಿ ಅವರು ಕೃತಿ ಪರಿಚಯ ಮಾಡಿದರು.

ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ಎಸ್​. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸೇಡಿಯಾಪು ಪ್ರಶಸ್ತಿ ಸಮಿತಿಯ ಡಾ. ಎಸ್​.ಜೆ. ಭಟ್​ ಉಪಸ್ಥಿತರಿದ್ದರು.

ಉಜ್ವಲ್​ ಆಪ್ಟೆ ಪ್ರಾರ್ಥಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಸ್ವಾಗತಿಸಿದರು. ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅರುಣ ಎಸ್​.ಆರ್​. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net