

ಸೊರಬ: ಹಬ್ಬ-ಉತ್ಸವಗಳು ಶಾಂತಿ-ಸೌಹಾರ್ದತೆಯ ಸಂದೇಶವನ್ನು ಬಿತ್ತಿದಾಗ ಉತ್ತಮ ಸಮಾಜ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಆನಂದಪುರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮುಹಮ್ಮದ್ ತಾಹೀರ್ ಹುಸೇನ್ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ 18ನೇ ವರ್ಷದ ಗಣೇಶೋತ್ಸವ ಅಂಗವಾಗಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗೋ ಸಂರಕ್ಷಣಾ ಹೋರಾಟ ಸಮಿತಿಯವರು ಗೋವುಗಳ ರಕ್ಷಣೆ ಮಾಡುತ್ತಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ಸರ್ಕಾರಿ ವೃತ್ತಿಯಲ್ಲಿ ಅನೇಕ ಒತ್ತಡಗಳು ಇರುತ್ತವೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ. ವೃತ್ತಿಗೆ ಸೇರ್ಪಡೆಯಾದ ದಿನದಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಸಂಕಲ್ಪ ಮಾಡಿದ್ದೆ. ಮುಂದೆಯೂ ಇದೇ ಹಾದಿಯಲ್ಲಿ ನಡೆಯುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಜೆ.ಎಸ್.ಚಿದಾನಂದ ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗೋಪಾಲಕರ ಅಭಾವದಿಂದ ದೇಶಿ ತಳಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ದೇಶಿ ತಳಿಯ ಗೋವುಗಳ ರಕ್ಷಣೆಗೆ ಗೋಪಾಲಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸಮಿತಿಯಿಂದ ಪ್ರತಿವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ ಗೋಪಾಲಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಕೆ.ಪ್ರಭಾಕರ ರಾಯ್ಕರ್ ಮಾತನಾಡಿ, ಸರ್ಕಾರಿ ಇಲಾಖೆಯಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಪ್ರಾಮಾಣಿಕರು ಎನಿಸುವುದು ಸಮಾಜದಲ್ಲಿ ಕಷ್ಟಸಾಧ್ಯ. ಮುಹಮ್ಮದ್ ತಾಹೀರ್ ಅವರನ್ನು ಸಮಾಜವೇ ಉತ್ತಮ ವ್ಯಕ್ತಿ ಎಂದು ಗುರುತಿಸಿದೆ. ಸಮಾಜದಲ್ಲಿ ಸೇವೆ ಸಲ್ಲಿಸಲು ಅನೇಕ ಮಾರ್ಗಗಳಿವೆ. ಈ ನಿಟ್ಟಿನಲ್ಲಿ ಮಹೇಶ್ ಕಾಳೆ ಅವರು ಬಸ್ ಏಜೆಂಟ್ ಆಗಿ ಸುಮಾರು 43 ವರ್ಷಗಳಿಂದ ಹಾಗೂ ಸಹಕಾರ ಕ್ಷೇತ್ರದಲ್ಲಿಯೂ ಸಾರ್ವಜನಿಕರಿಗೆ ಸ್ಪಂದಿಸುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಬಸ್ ಏಜೆಂಟ್ ಮಹೇಶ್ ಕಾಳೆ, ಗೋಪಾಲಕ ನಾಗರಾಜ ಹಳೇಸೊರಬ ಅವರನ್ನು ಸನ್ಮಾನಿಸಲಾಯಿತು. ವಿಎಚ್‌ಪಿ ತಾಲೂಕು ಅಧ್ಯಕ್ಷ ಎಂ.ಎಸ್.ಕಾಳಿಂಗರಾಜ್, ನಿವೃತ್ತ ಉಪ ತಹಸೀಲ್ದಾರ್ ಪ್ರಭಾಕರ್ ಗೋಖಲೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಕಾರ್ಯದರ್ಶಿ ರಾಜೇಂದ್ರ ಜೈನ್, ಉಪಾಧ್ಯಕ್ಷ ಯು.ಎಸ್.ಶರತ್ ಸ್ವಾಮಿ, ಖಜಾಂಚಿ ದತ್ತಾತ್ರೇಯ, ಪ್ರಮುಖರಾದ ಎಂ.ಬಿ.ನಾಗರಾಜ್, ಮಂಜುನಾಥ ಗುತ್ತಿ, ವಿಜಯ ಗೌಳಿ, ವಿ.ವೀರಭದ್ರ, ಶಿವಯೋಗಿ ಸ್ವಾಮಿ, ಅನಿಲ್, ನಮಾಮಿ ಇಂದ್ರ, ಅಭಿ ಹೊಯ್ಸಳ, ರಾಜಣ್ಣ, ಗಿರೀಶ್, ವಿನಯ್, ಸುರೇಶ್ ಗೌಡ ಕುಪ್ಪೆ, ಮುತ್ತು ಇತರರಿದ್ದರು.