ವಿಟ್ಲ ಹೋಬಳಿ ಸಹಕಾರಿ ಸಂಘದಲ್ಲಿ ಅಕ್ರಮ? - ಲೋಕಾಯುಕ್ತಕ್ಕೆ ಸದಸ್ಯರೊಬ್ಬರಿಂದ ದೂರು - ಸಾಮಾಜಿಕ ಜಾಲತಾಣಗಳಲ್ಲಿ ದೂರು ಪ್ರತಿ ವೈರಲ್

Published on

ವಿಟ್ಲ ಹೋಬಳಿಯ ಮಾದರಿ ಸಹಕಾರಿ ಸಂಘವೊಂದರಲ್ಲಿ ಚಿನ್ನಾಭರಣ ಅಡಮಾನ ಸಾಲ ನೀಡುವ ಸಂದರ್ಭ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಸಹಕಾರ ಇಲಾಖೆಯ ಮೈಸೂರು ಉಪ ವಿಭಾಗದ ಅಧಿಕಾರಿಗಳಿಗೆ ಹಾಗೂ ಕರ್ನಾಟಕ ಲೋಕಾಯುಕ್ತಕ್ಕೆ ಸೊಸೈಟಿ ಸದಸ್ಯರೊಬ್ಬರು ದೂರು ನೀಡಿದ್ದಾರೆ.

ಸಂಘದಲ್ಲಿ ’ಸಿ’ ಗ್ರೇಡ್ ಸದಸ್ಯತ್ವ ಹೊಂದಿರುವ ಯುವತಿಯೊಬ್ಬರಿಗೆ ನಿಯಮ ಬಾಹಿರವಾಗಿ ಕೆಲವು ತಿಂಗಳ ಹಿಂದೆ ೭.೫ ಕೋಟಿ ರೂ. ಸಾಲ ನೀಡಲಾಗಿದೆ. ಜತೆಗೆ ಮತ್ತೊಂದು ಸಹಕಾರಿ ಸಂಸ್ಥೆ ಸಹಿತ ಇತರರಿಗೆ ಒಟ್ಟು ೩ ಕೋಟಿ ರೂ.ಗೂ ಅಧಿಕ ಸಾಲ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಜಿಲ್ಲಾ ಸಹಾಯಕ ರಿಜಿಸ್ಟ್ರಾರ್ ಕಚೇರಿಯ ಇಬ್ಬರು ಸಿಬ್ಬಂದಿ ಹಾಗೂ ಜಿಲ್ಲಾ ಕೇಂದ್ರ ಬ್ಯಾಂಕಿನ ಉಸ್ತುವಾರಿ ಬುಧವಾರ ಸಂಘ ಪ್ರಧಾನ ಕಚೇರಿಗೆ ದಿಢೀರ್ ಭೇಟಿ ನೀಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜತೆಗೆ ಮಾತುಕತೆ ನಡೆಸಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಅಕ್ರಮ ನಡೆದಿರುವ ಹಾಗೂ ದೂರು ಸಲ್ಲಿಕೆಯಾದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿ ಗ್ರೇಡ್ ಸದಸ್ಯೆಯೊಬ್ಬರಿಗೆ ಅನಧಿಕೃತವಾಗಿ ೭.೫ ಕೋಟಿ ರೂ. ಸಾಲ ನೀಡುವ ಸಂದರ್ಭ ಇತರ ಸದಸ್ಯರ ಅನುಮತಿ ಪಡೆದಿಲ್ಲ. ವೈಯಕ್ತಿಕ ಲಾಭಕ್ಕಾಗಿ ಅಥವಾ ಸೊಸೈಟಿಯ ಆರ್ಥಿಕ ವಿಶ್ವಾಸಾರ್ಹತೆ ದುರುಪಯೋಗಪಡಿಸಿಕೊಳ್ಳುವ ಸಲುವಾಗಿ ಕೃತ್ಯ ನಡೆದಿದೆ. ಈ ಕಾರಣಕ್ಕಾಗಿ ಸೊಸೈಟಿಯ ಎಲ್ಲ ದಾಖಲೆಗಳು ಹಾಗೂ ಸಾಲ ವಿತರಣೆ ದಾಖಲೆಗಳನ್ನು ಪರಿಶೀಲಿಸುವಂತೆ, ವಂಚನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಂದು ದೂರುದಾರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net